ನಾನು ಆ ರೀತಿ ಹೇಳಿಲ್ಲ: ಯೂಟರ್ನ್ ಹೊಡೆದ ಸಚಿವ ಜಿ.ಟಿ.ದೇವೇಗೌಡ

Public TV
2 Min Read

– ಎಲ್ಲದಕ್ಕೂ ನೀನೇ ಹೊಣೆ ಎಂದು ಒಬ್ಬ ವ್ಯಕ್ತಿಗೆ ಹೇಳುವುದು ಸರಿಯಲ್ಲ

ಮೈಸೂರು: ಹೊಣೆಯಲ್ಲ ಅಂತ ಯಾರು ಹೇಳಿದ್ದಾರೆ. ನಾನು ಹಾಗೇ ಹೇಳೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಯೂಟರ್ನ್ ಹೊಡೆದಿದ್ದಾರೆ.

ನಗರಲ್ಲಿ ನಡೆದಿದ್ದ ಜೆಡಿಎಸ್ ಸಭೆಗೂ ಮುನ್ನ ಮಾತನಾಡಿದ್ದ ಸಚಿವರು, ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಸೋಲಾದರೆ ನಾನಾಗಲಿ ಅಥವಾ ಸಚಿವ ಸಾ.ರಾ.ಮಹೇಶ್ ಹೊಣೆಗಾರರಲ್ಲ ಎಂದು ಹೇಳಿದ್ದರು. ಆದರೆ ಈಗ ನಾನು ಹಾಗೇ ಮಾತನಾಡಿಲ್ಲ ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಸಚಿವರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ನಾವು ಎಲ್ಲರೂ ಸೇರಿ ದೋಸ್ತಿ ಅಭ್ಯರ್ಥಿ ಸಿ.ಎಚ್.ವಿಜಯ್‍ಶಂಕರ್ ಅವರ ಗೆಲುವಿಗೆ ಶ್ರಮಿಸಬೇಕು. ಒಂದು ವೇಳೆ ಅವರು ಸೋತರೆ ಕೇವಲ ನಾನು ಹಾಗೂ ಸಚಿವ ಸಾ.ರಾ.ಮಹೇಶ್ ಹೊಣೆಯಾಗಲ್ಲ. ಕಾಂಗ್ರೆಸ್-ಜೆಡಿಎಸ್‍ನ ಎಲ್ಲಾ ನಾಯಕರೂ ಹೊಣೆಯಾಗುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಆಗ ಮೈಸೂರು-ಕೊಡಗು ಅಭ್ಯರ್ಥಿ ಎಚ್.ವಿಶ್ವನಾಥ್ ಸೋತಿದ್ದರು. ಅದಕ್ಕೆ ಸಿದ್ದರಾಮಯ್ಯ ಅವರೇ ಹೊಣೆಯೇ ಎಂದು ಪ್ರಶ್ನಿಸಿದ್ದೆಯೇ ಹೊರತು, ಈ ಬಾರಿ ದೋಸ್ತಿ ಅಭ್ಯರ್ಥಿ ಸೋತರೆ ನಾವು ಹೊಣೆಗಾರರು ಅಲ್ಲ ಅಂತ ಹೇಳಿಲ್ಲ. ನಾನು ಏಕವ್ಯಕ್ತಿಯಲ್ಲ. ನಾನು ಎನ್ನುವ ಪದ ನನ್ನಲ್ಲಿ ಬರುವುದಿಲ್ಲ. ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಎಲ್ಲಾ ನಾಯಕರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಬೇಕು. ಅದನ್ನು ಬಿಟ್ಟು ಎಲ್ಲದಕ್ಕೂ ನೀನೇ ಹೊಣೆ ಎಂದು ಒಬ್ಬ ವ್ಯಕ್ತಿಗೆ ಹೇಳುವುದು ಸರಿಯಲ್ಲ. ಒಬ್ಬನಿಂದಲೇ ಅಭ್ಯರ್ಥಿ ಗೆಲುವು ಸಾಧ್ಯವಿಲ್ಲ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದೇನೆ ಎಂದರು.

ದೋಸ್ತಿ ಪಕ್ಷದ ನಾಯಕರು ಮತದಾರರ ಮನವೊಲಿಸಬೇಕು. ವಿಜಯ್‍ಶಂಕರ್ ಅವರನ್ನು ಗೆಲ್ಲಿಸುವ ಉದ್ದೇಶದಿಂದ ಜಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದ್ದೇವೆ. ಈ ವೇಳೆ ಕೆಲ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ ಅವರನ್ನು ಸಮಾಧಾನಪಡಿಸಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಸೇರಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ನಮಗೆ ಸಚಿವ ಸ್ಥಾನ ನೀಡಿದ್ದಾರೆ. ಇದರಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಾಗಿದೆ. ಎಲ್ಲರೂ ವಿಜಯ್‍ಶಂಕರ್ ಅವರ ಗೆಲುವಿಗೆ ಶ್ರಮಿಸಬೇಕು ಅಂತ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡಿದ್ದೇನೆ. ನಾನು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.

ಕೆಲ ಕಾರ್ಯಕ್ರಮದ ನಿಮಿತ್ತ ಸಿ.ಎಚ್.ವಿಜಯ್‍ಶಂಕರ್ ನಾಮಪತ್ರ ಸಲ್ಲಿಸುವ ವೇಳೆ ಹಾಜರಾಗುವುದಿಲ್ಲ ಎಂದು ಮೊದಲೇ ತಿಳಿಸಿದ್ದೆ. ಇದಾದ ಬಳಿಕ ವಿಜಯ್‍ಶಂಕರ್, ಮಹಾದೇವಪ್ಪ, ತನ್ವೀರ್ ಸೇಠ್ ಅವರು ನಮ್ಮ ಮನೆಗೆ ಆಗಮಿಸಿದ್ದರು. ಆಗ ಎಲ್ಲರೂ ಸುದೀರ್ಘ ಚರ್ಚೆ ನಡೆಸಿದ್ದೇವೆ. ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿ ಭಾನುವಾರ ಸುದ್ದಿಗೋಷ್ಠಿ ನಡೆಸಲಾಗುತ್ತದೆ. ಈ ನಿಟ್ಟಿನಲ್ಲಿ ಇಂದು ಜೆಡಿಎಸ್ ಸಭೆ ನಡೆಸಿದ್ದೇವೆ ಎಂದು ತಿಳಿಸಿದರು.

ಮೈತ್ರಿ ಅಭ್ಯರ್ಥಿ ವಿಜಯ್‍ಶಂಕರ್ ಪ್ರತಿಕ್ರಿಯಿಸಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಮಾತನಾಡಿಲ್ಲ. ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರವಾಗಿ ನಮ್ಮ ಕಾರ್ಯಕರ್ತರು ಪ್ರಚಾರ ಮಾಡುತ್ತಿಲ್ಲ. ಸ್ಥಳೀಯ ಜೆಡಿಎಸ್ ಮುಖಂಡರು ನನ್ನ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *