ಸಿದ್ದು ಸೋಲಿಸಿದರೆ, ಗೃಹ ಸಚಿವನನ್ನಾಗಿ ಮಾಡಿ, ಮೈಸೂರಿನ ಸಿಎಂ ಮಾಡ್ತೇನೆ ಎಂದಿದ್ರು- ಎಚ್‍ಡಿಕೆ ವಿರುದ್ಧ ಜಿಟಿಡಿ ವಾಗ್ದಾಳಿ

Public TV
2 Min Read

– ರೇವಣ್ಣನವರನ್ನು ಡಿಸಿಎಂ ಮಾಡಬಹುದಿತ್ತು, ಮಾಡಲಿಲ್ಲ

ಮೈಸೂರು: ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸೋಲಿಸಿದರೆ ಅದಕ್ಕೆ ಸಮನಾದ ಖಾತೆ ನೀಡಿ, ಮೈಸೂರಿನ ಸಿಎಂ ಮಾಡುತ್ತೇನೆ ಎಂದು ಕುಮಾರಸ್ವಾಮಿಯವರು ಭರವಸೆ ನೀಡಿದ್ದರು. ಆದರೆ ಸರ್ಕಾರ ರಚನೆಯಾದ ನಂತರ ಆ ರೀತಿ ನಡೆದುಕೊಳ್ಳಲಿಲ್ಲ ಎಂದು ಎಚ್‍ಡಿಕೆ ವಿರುದ್ಧ ಮಾಜಿ ಸಚಿವ ಜಿ.ಟಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರನ್ನು ಸೋಲಿಸಿದರೆ ಅಣ್ಣ ನಿನ್ನ ಗೃಹ ಸಚಿವರನ್ನಾಗಿ ಮಾಡುತ್ತೇನೆ. ಮೈಸೂರಿನ ಸಿಎಂ ಮಾಡುತ್ತೇನೆ ಎಂದು ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಆಗ ನಾನು ಬೇಡ ಅಣ್ಣ ನನಗೆ ಕಂದಾಯ ಖಾತೆ ಕೊಡಿ ಎಂದು ಕೇಳಿದ್ದೆ. ನಾನು ಸಿಎಂ ಮಾಡಿ ಅಂತಾನೂ ಕೇಳಿಲ್ಲ, ಏನನ್ನು ಕೇಳಿಲ್ಲ. ಆದರೂ ಕಂದಾಯ ಖಾತೆ ಕೊಡಲಿಲ್ಲ ಎಂದು ಜಿಟಿಡಿ ಹರಿಹಾಯ್ದಿದ್ದಾರೆ.

ಈ ಕುರಿತು ಕಳೆದ ಚುನಾವಣಾ ಪ್ರಚಾರದಲ್ಲಿ ಕುಮಾರಸ್ವಾಮಿಯವರು ಭಾಷಣ ಮಾಡಿರುವುದು ನಿಮ್ಮ ಬಳಿ ಇದೆ. ನೀವೇ ಇನ್ನೊಮ್ಮೆ ಬೇಕಾದರೆ ನೋಡಿ. ಅಲ್ಲದೆ, ಹಿಂದಿನ ಜೆಡಿಎಸ್ ಬಿಜೆಪಿ 20-20 ಸರ್ಕಾರದಲ್ಲಿ ರೇವಣ್ಣನವರನ್ನು ಉಪಮುಖ್ಯಮಂತ್ರಿ ಮಾಡಿ, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಲು ಅವಕಾಶವಿತ್ತು. ಆದರೆ ಕುಮಾರಸ್ವಾಮಿಯವರು ಅದನ್ನು ಮಾಡಿದರಾ? ಹೀಗೆ ಮಾಡಿದ್ದರೆ ದೇವೇಗೌಡರಿಗೂ ಪ್ರೀತಿಯಾಗುತಿತ್ತು. ಬಿಎಸ್‍ವೈಗೂ ಸಮಾಧಾನ ಆಗುತಿತ್ತು. ಆದರೆ ನೀವು ಅದನ್ನು ಮಾಡಲಿಲ್ಲ. ರೇವಣ್ಣನವರನ್ನೇ ಉಪಮುಖ್ಯಮಂತ್ರಿಯಾಗಲು ಬಿಡದವರು, ನನ್ನನ್ನು ಸಿಎಂ ಮಾಡುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದರು.

ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ನಂತರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ, ಕಾಂಗ್ರೆಸ್‍ನವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿ, ರೇವಣ್ಣನವರನ್ನು ಡಿಸಿಎಂ ಮಾಡಿದ್ದರೆ ಸರ್ಕಾರ ಉಳಿಯುತಿತ್ತು. ಎರಡು ಬಾರಿ ಸಿಎಂ ಆಗಿದ್ದವರು ನೀವು. ಏನಾದರೂ ಮಾತನಾಡುವಾಗ ಯೋಚನೆ ಮಾಡಿ ಮಾತನಾಡಿ. ಅಧಿಕಾರ ಇದ್ದಾಗ ಹೋಟೆಲ್ ಒಳಗೆ ಕೂತಿದ್ದೀರಿ, ನಾವು ಗೇಟ್ ಬಳಿ ಕಾಯುತ್ತಿದ್ದೆವು. ಈಗ ನಿಮಗೆ ಕಾರ್ಯಕರ್ತರು ನೆನಪಾಗಿದ್ದಾರಾ, ಸಾರಾ ಮಹೇಶ್ ಮಂತ್ರಿ ಮಾಡುವ ಅಗತ್ಯ ಇರಲಿಲ್ಲ. ಆದರೆ ನನಗೆ ಪರ್ಯಾಯವಾಗಿ ನಾಯಕತ್ವ ಬೆಳೆಸಲು ಸಾರಾ ಮಹೇಶ್‍ನನ್ನು ಮಂತ್ರಿ ಮಾಡಿದಿರಿ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

ಉಪಚುನಾವಣೆಯಲ್ಲಿ ಹುಣಸೂರಿನಿಂದ ನಮ್ಮ ಕುಟುಂಬದವರು ಸ್ಪರ್ಧೆ ಮಾಡುವುದಿಲ್ಲ. ನನ್ನ ಮಗ ಹುಣಸೂರಿನಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಜಿಟಿಡಿ ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *