ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಈ ಜಿಎಸ್‍ಟಿ ಇರಲ್ಲ, ರೈತರ ಸಾಲಮನ್ನಾ ಆಗುತ್ತೆ: ರಾಹುಲ್ ಗಾಂಧಿ

Public TV
2 Min Read

ಭೋಪಾಲ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಜಿಎಸ್‍ಟಿ ತೆಗೆದು ನೂತನ ಜಿಎಸ್‍ಟಿ ವ್ಯವಸ್ಥೆ ಜಾರಿ ಹಾಗೂ ರೈತರ ಸಂಪೂರ್ಣ ಕೃಷಿ ಸಾಲಮನ್ನಾ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಎಲ್ಲಾ ರೈತರ ಕೃಷಿಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೊಳಿಸಿದ್ದ ಜಿಎಸ್‍ಟಿಯು ಅವ್ಯವಸ್ಥೆಗಳ ಆಗಾರವಾಗಿದೆ. ಇಂತಹ ಜಿಎಸ್‍ಟಿ ಪದ್ಧತಿಯನ್ನು ತೆಗೆದುಹಾಕಿ, ನೂತನ ಜಿಎಸ್‍ಟಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.

ಭಾಷಣದ ವೇಳೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಅವರು, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸಚಿನ್ ತೆಂಡೂಲ್ಕರ್ ಗೆ ಹೋಲಿಸಿ ಪರೋಕ್ಷವಾಗಿ ಟೀಕಿಸಿದರು. ಸಚಿನ್ ತೆಂಡೂಲ್ಕರ್ ರನ್ನು ಎಲ್ಲರೂ ರನ್ ಮಷಿನ್ ಎಂದು ಕರೆಯುತ್ತಾರೆ, ಏಕೆಂದರು ಅವರು ಪ್ರತಿ ಬಾರಿ ಮೈದಾನಕ್ಕೆ ಬಂದರೆ 50, 60 ಹಾಗೂ ಶತಕಗಳನ್ನು ಪೂರೈಸುತ್ತಲೇ ಇದ್ದರು. ಆದರೆ ಶಿವರಾಜ್ ಸಿಂಗ್ ಹಾಗಲ್ಲ, ಹೋದ ಕಡೆ 21 ಸಾವಿರ ಭರವಸೆಗಳನ್ನು ನೀಡುವುದರಲ್ಲೇ ತಮ್ಮ ಸಮಯವನ್ನು ಕಳೆದಿದ್ದಾರೆಯೇ ಹೊರತು, ಯಾವುದನ್ನೂ ಈಡೇರಿಸಿಲ್ಲ ಎಂದು ವ್ಯಂಗ್ಯವಾಡಿದರು.

ಶಿವರಾಜ್ ಸಿಂಗ್ ಆಡಳಿತದಲ್ಲಿ ಮಧ್ಯಪ್ರದೇಶ ಸಂಪೂರ್ಣವಾಗಿ ಹಿಂದುಳಿದಿದೆ. ರಾಜ್ಯದಲ್ಲಿ ಮಹಿಳೆಯರ ಮೇಲಿನ ಹಿಂಸಾಚಾರ, ಅತ್ಯಾಚಾರಗಳು ವ್ಯಾಪಕವಾಗಿ ನಡೆಯುತ್ತಿವೆ. ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಧಿಕಾರಿಗಳ ಭ್ರಷ್ಟರಾಗಿದ್ದಾರೆ. ಇದರಿಂದಾಗಿ ಮಧ್ಯಪ್ರದೇಶ ದೇಶದಲ್ಲಿಯೇ ಭ್ರಷ್ಟಾಚಾರದಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿ, ತೈಲ ದರ ಏರುತ್ತಿದ್ದರೂ ಪ್ರಧಾನಿ ಮೋದಿ ನನಗೂ ಇದಕ್ಕೂ ಸಂಬಂಧ ಇಲ್ಲವೆಂಬ ರೀತಿಯಲ್ಲಿ ಮೌನ ವಹಿಸಿದ್ದಾರೆ. ಯುಪಿಎ ಆಡಳಿತದಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‍ಗೆ 140 ಡಾಲರ್ ಇತ್ತು, ಆದರೆ ಇಂದು ಕೇವಲ 70 ಡಾಲರ್ ಮಾತ್ರ ಇದೆ. ಇಷ್ಟಿದ್ದರೂ ಸಹ ಮೋದಿ ತೈಲ ದರವನ್ನು ಇಳಿಕೆ ಮಾಡದೇ ತಮ್ಮ ಮಿತ್ರರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಜಾರಿಗೆ ತಂದ ನೋಟು ನಿಷೇಧ ದೇಶದಲ್ಲಿ ಅತಿದೊಡ್ಡ ಹಗರಣವಾಗಿದೆ. ಅವರ ನೂತನ ಜಿಎಸ್‍ಟಿಯು ಸರಕು ಮತ್ತು ಸೇವೆಗಳ ಮೇಲಿನ ತೆರಿಗೆಯಾಗಿಲ್ಲ. ಅದು ಗಬ್ಬರ್ ಸಿಂಗ್ ತೆರಿಗೆಯಾಗಿದೆ. ಮೋದಿ ಗಬ್ಬರ್ ಸಿಂಗ್ ತೆರಿಗೆಯಿಂದ ಬಡವರಲ್ಲಿರುವ ಹಣವನ್ನು ಕಿತ್ತು ಶ್ರೀಮಂತರ ಜೇಬು ತುಂಬುವಂತೆ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೋದಿಯವರ ಗಬ್ಬರ್ ಸಿಂಗ್ ಟ್ಯಾಕ್ಸ್ ಅನ್ನು ತೆಗೆದುಹಾಕಿ, ನೂತನ ಜಿಎಸ್‍ಟಿಯನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *