73ರ ವರ, 67ರ ವಧು- 50 ವರ್ಷಗಳ ಲಿವ್ ಇನ್ ರಿಲೇಶನ್‍ಶಿಪ್‍ಗೆ ಮದ್ವೆಯ ಬಂಧನ

Public TV
2 Min Read

-50 ವರ್ಷಗಳ ನಂತ್ರ ಮದ್ವೆಗೆ ಆಸಕ್ತಿ ತೋರಿದ್ಯಾಕೆ?
-ಇಲ್ಲಿದೆ ಹಿರಿಯ ಜೋಡಿಯ ಪ್ರೇಮಕಥೆ
-ಮಕ್ಕಳಿಂದ ಜೋಡಿಯ ಕನಸು ನನಸು

ರಾಯ್ಪುರ: ಮದುವೆ ಅನ್ನೋದು ಜೀವನದ ಪ್ರಮುಖ ಘಟ್ಟ. ಛತ್ತೀಸಗಢದ ಕವಾರ್ಧ ಜಿಲ್ಲೆಯಲ್ಲಿ ಶನಿವಾರ ವಿಶೇಷ ಮದುವೆ ನಡೆದಿದೆ. 73ರ ವರನಿಗೂ ಮತ್ತು 67ರ ವಧುಗೆ ಮದುವೆ ಮಾಡಿಸುವ ಮೂಲಕ ಜೋಡಿಯ 50 ವರ್ಷದ ಲೀವ್ ಇನ್ ರಿಲೇಶನ್‍ಶಿಪ್ ವಿವಾಹದ ಮುದ್ರೆ ಹಾಕಲಾಗಿದೆ.

ಸುಕಾಲ್ ನಿಷದ್ ಮತ್ತು ಗೌತರಹಿನ್ ಬಾಯಿ ಮದುವೆಯಾದ ದಂಪತಿ. ಈ ಹಿರಿಯ ಜೋಡಿ ಕಳೆದ 50 ವರ್ಷಗಳಿಂದಲೂ ಮದುವೆಯಾಗದೇ ಪತಿ-ಪತ್ನಿಯರಂತೆ ಜೀವನ ನಡೆಸಿಕೊಂಡು ಬಂದಿದ್ದಾರೆ. ಇದೀಗ ಇಬ್ಬರ ಆಸೆಯಂತೆ ಅವರ ಮಕ್ಕಳು ತಮ್ಮ ಪೋಷಕರ ಮದುವೆಯನ್ನು ಮುಂದೆ ನಿಂತು ಅದ್ಧೂರಿಯಾಗಿ ಮಾಡಿದ್ದಾರೆ.

ಇಷ್ಟು ದಿನಗಳ ನಂತರ ಮದ್ವೆಯಾಗಿದ್ಯಾಕೆ?: 50 ವರ್ಷಗಳ ಬಳಿಕ ದಂಪತಿ ಮದುವೆಯಾಗಲು ನಿರ್ಧರಿಸಿದ್ದರು. ಗ್ರಾಮದ ಕೆಲ ಪಂಡಿತರು ಸಂಪ್ರದಾಯಬದ್ಧವಾಗಿ ಮದುವೆ ಆಗದಿದ್ದರೆ ಮೋಕ್ಷ ಸಿಗಲ್ಲ ಎಂದು ಹೇಳಿದ್ದರು. ಹಾಗಾಗಿ ಹಿರಿಯ ಜೀವಗಳು ತಮ್ಮ ಮದುವೆ ಪ್ರಸ್ತಾಪವನ್ನು ಮಕ್ಕಳ ಮುಂದೆ ಇರಿಸಿದ್ದರು. ಮಕ್ಕಳು ಸಹ ಅತ್ಯಂತ ಖುಷಿಯಿಂದ ತಂದೆ-ತಾಯಿಯ ಮದುವೆ ಮಾಡಿ ಕಣ್ತುಂಬಿಕೊಂಡಿದ್ದಾರೆ.

ಮೊದಲ ನೋಟದಲ್ಲೇ ಪ್ರೇಮ: ಸುಕುಲ್ ಯುವಕರಿದ್ದಾಗ ಸಂಬಂಧಿಕರೊಬ್ಬರಿಗೆ ಜೊತೆ ಬೆಮತರಾ ಜಿಲ್ಲೆಯ ಬಿರಸಿಂಗಿ ಗ್ರಾಮಕ್ಕೆ ಹೆಣ್ಣು ನೋಡಲು ಹೋಗಿದ್ದರು. ತಮ್ಮ ಸಂಬಂಧಿಗೂ ಮತ್ತು ಅಲ್ಲಿನ ಯುವತಿಗೂ ಮದುವೆ ನಿಶ್ಚಯವಾಗಿತ್ತು. ವರನ ಜೊತೆಗೆ ಹೋಗಿದ್ದ ಸುಕುಲ್, ವಧುವಿನ ಸೋದರಿ ಗೌತರಹಿನ್ ಅವರನ್ನು ಇಷ್ಟಪಟ್ಟಿದ್ದರು. ಮೊದಲ ನೋಟದಲ್ಲೇ ಇಬ್ಬರ ನಡುವೆ ಪ್ರೇಮ ಶುರುವಾಗಿತ್ತು. ಆದ್ರೆ ಇಬ್ಬರ ಮದುವೆಗೆ ಸುಕುಲ್ ಬಡತನ ಅಡ್ಡಿಯಾಗಿತ್ತು. ಕೂಲಿ ಕೆಲಸ ಮಾಡಿಕೊಂಡಿದ್ದ ಸುಕುಲ್ ಅವರಿಂದ ಅದ್ಧೂರಿಯಾಗಿ ವಿವಾಹವಾಗಲು ಹಣವಿರಲಿಲ್ಲ. ಕೊನೆಗೆ ಗೌತರಹಿನ್ ಸಮಾಜದ ಕಟ್ಟುಪಾಡುಗಳನ್ನು ಬದಿಗಿಟ್ಟು ಮದುವೆಯಾಗದೇ ಸುಕುಲ್ ಜೊತೆಗಿರಲು ನಿರ್ಧರಿಸಿದ್ದರು.

ಮದುವೆ ಕುರಿತು ಪ್ರತಿಕ್ರಿಯಿಸಿರುವ ಗ್ರಾಮದ ಮುಖಂಡ ಪವನ್ ಚಂದ್ರೌಲ್, ಊರಿನಲ್ಲಿ ನಡೆದ ರಾಮಯಾಣ ಕಾರ್ಯಕ್ರಮದಲ್ಲಿ ಇಬ್ಬರಿಗೂ ಮದುವೆ ಮಾಡಲಾಗಿದೆ. ದಂಪತಿಗೆ ಇಬ್ಬರು ಗಂಡು ಮಕ್ಕಳು, ಒಬ್ಬಳು ಮಗಳು ಸೇರಿದಂತೆ 13 ಮೊಮ್ಮಕಳಿದ್ದಾರೆ. ಎಲ್ಲರೂ ಸಹ ಮದುವೆಯಲ್ಲಿ ಭಾಗಿಯಾಗುವ ಮೂಲಕ ಪೋಷಕರಿಗೆ ಶುಭಾಶಯ ತಿಳಿಸಿದರು. ಪುತ್ರಿಯ ಐವರು ಮಕ್ಕಳೇ ಸಂಬಂಧಿಗಳಾಗಿ ಮದುವೆ ಕಾರ್ಯಕ್ರಮಗಳ ಮಾಡಿದ್ರು ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *