ಲಕ್ನೋ: ವರದಕ್ಷಿಣೆಯಾಗಿ ನೀಡಿದ್ದ ಬೈಕ್ ಚೆನ್ನಾಗಿಲ್ಲ. ಬೇರೆ ಬೈಕ್ ಬೇಕೆಂದು ಹಠ ಹಿಡಿದು ಮದುವೆ ಮಂಟಪದಿಂದ ಹೊರ ಬಂದ ಅಹಂಕಾರಿ ವರ ಮತ್ತು ಆತನ ಸಂಬಂಧಿಕರ ತಲೆ ಬೋಳಿಸಿದ ಘಟನೆ ಉತ್ತರ ಪ್ರದೇಶದ ಖುರ್‍ಮನಗರದಲ್ಲಿ ನಡೆದಿದೆ.
ಮದುವೆ ದಿನ ವರದಕ್ಷಿಣೆ ಬೇಕೆಂದು ಹಠ ಹಿಡಿದಿದ್ದ ವರನ ಸಂಬಂಧಿಕರನ್ನು ವಧುವಿನ ಪೋಷಕರು ಕೂಡಿ ಹಾಕಿ ಎಲ್ಲರ ಬೆವರು ಇಳಿಸಿದ್ದಾರೆ. ಬಂಧಿಯಾಗಿದ್ದವರಲ್ಲಿ ಓರ್ವ, ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಎಲ್ಲರೂ ವಧುವಿನ ಪೋಷಕರ ಕೋಪದಿಂದ ಬದುಕುಳಿದಿದ್ದಾರೆ.
ಏನಿದು ಘಟನೆ?:
ಖುರ್‍ಮನಗರದ ಜಿಯಾಉಲ್ ಪಾರ್ಕ್ ಕ್ಷೇತ್ರದ ವಧುವಿನೊಂದಿಗೆ ಧೋಕಲಾಪುರದ ಅಬ್ದುಲ್ ಕಲಾಮ್ ಎಂಬ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ವಧುವಿನ ತಂದೆ ಖುರ್‍ಮನಗರದಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು ಸಣ್ಣದಾದ ಮನೆಯಲ್ಲಿ ವಾಸವಾಗಿದ್ದರು. ಮೂರು ತಿಂಗಳ ಹಿಂದೆಯೇ ಗುರು-ಹಿರಿಯರ ಸಮ್ಮುಖದಲ್ಲಿ ಮಗಳ ಮದುವೆಯನ್ನು ನಿಶ್ಚಯಿಸಲಾಗಿತ್ತು. ಒಂದು ತಿಂಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಸಹ ನಡೆದಿತ್ತು.
ಗುರು-ಹಿರಿಯರ ಸಮ್ಮುಖದಲ್ಲಿ ವಧುದಕ್ಷಿಣೆಯಾಗಿ 25 ಸಾವಿರ ರೂ. ನಗದು ನೀಡಬೇಕೆಂದು ಮಾತಾಗಿತ್ತು. ಇತ್ತ ವರನಿಗೆ ಬೈಕ್, 40 ಗ್ರಾಂ ಬಂಗಾರ ಮತ್ತು ನಗದು ನೀಡಬೇಕೆಂದು ಒಪ್ಪಂದವಾಗಿತ್ತು. ಒಪ್ಪಂದದಂತೆ ಭಾನುವಾರ ಮದುವೆಯೂ ನಡೆಯಬೇಕಿತ್ತು. ಶನಿವಾರ ವಧುವಿನ ಮನೆಗೆ ಬಂದ ವರ ಹಾಗು ಆತನ ಕುಟುಂಬಸ್ಥರು ಮತ್ತಷ್ಟು ಬಂಗಾರ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ನೀಡದೇ ಇದ್ದಲ್ಲಿ, ತಾವು ಹಿಂದಿರುಗುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ವಧು ದಕ್ಷಿಣೆಯನ್ನು ನೀಡಲ್ಲ ಎಂದು ಮೊಂಡುತನ ಪ್ರದರ್ಶನ ಮಾಡಿದ್ದಾರೆ.
ಮದುವೆ ಮನೆಯಲ್ಲಿ ಇಷ್ಟೆಲ್ಲ ಗಲಾಟೆ ನಡೆಯುತ್ತಿದ್ದರೂ ವರನ ಗೆಳೆಯರು ಕುಡಿದು ಬಂದು ಪುಂಡಾಟ ಮಾಡಿದ್ದಾರೆ. ವರ ಮತ್ತು ಆತನ ಸಹೋದರ ನೂರ್-ಉಲ್-ಸಲಾಮ್ ಅಪಾಚಿ ಅಥವಾ ಪಲ್ಸರ್ ಬೈಕ್ ನೀಡಬೇಕೆಂದು ಕುಡಿದ ನಶೆಯಲ್ಲಿ ಗಲಾಟೆ ಮಾಡಿದ್ದಾರೆ. ವಧುವಿನ ಪೋಷಕರು ಒಂದು ಹಂತದವರೆಗೆ ಎಲ್ಲವನ್ನು ಕೇಳಿದ್ದಾರೆ.
ಯಾವಾಗ ವರನ ಕುಟುಂಬಸ್ಥರು ತಮ್ಮ ಮೊಂಡುತನವನ್ನು ಬಿಡದೇ ಇದ್ದಾಗ ಎಲ್ಲರನ್ನು ಕೂಡಿಹಾಕಿದ್ದಾರೆ. ಈ ವೇಳೆ ವರ ಅಬ್ದುಲ್ ಕಲಾಮ್, ಸೋದರ ನೂರ್-ಉಲ್-ಸಲಾಮ್, ಸಂಬಂಧಿಗಳಾದ ಜಾವೇದ್ ಮತ್ತು ಕಬೀರ್ ಎಂಬವರ ಅರ್ಧ ತಲೆಯನ್ನು ಬೋಳಿಸಿದ್ದಾರೆ. ಇದರಿಂದ ಗಾಬರಿಗೊಂಡ ವರನ ಕಡೆಯವರು ಎದ್ನೊ-ಬಿದ್ನೋ ಎಂದು ಓಡಿ ಹೋಗಿದ್ದಾರೆ.
ಜ್ಯೂಸ್ ಮಾರುತ್ತಿದ್ದ ವರ:
ಇಷ್ಟೆಲ್ಲ ವರದಕ್ಷಿಣೆ ಕೇಳಿದ ವರ ಮುಂಬೈನ ರಸ್ತೆ ಬದಿಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಮದುವೆ ಹಿಂದಿನ ದಿನ ಆಪ್ತ ಕುಟುಂಬಸ್ಥರು ಮಾತ್ರವೇ ಬರುತ್ತೇವೆ ಅಂತಾ ಹೇಳಿದ್ದವರು, 250 ಜನರು ಕರೆದುಕೊಂಡು ಬಂದಿದ್ದರು. ಆದ್ರೂ ಯಾರು ಯಾಕೆ ಅಂತಾ ಕೇಳಿರಲಿಲ್ಲ. ನಾವು ಖರೀದಿ ಮಾಡಿದ್ದ 85 ಸಾವಿರ ರೂ. ಬೈಕ್ ಬೇಡ ಅಂತ ತಗಾದೆ ತೆಗೆದರು. ಮದುವೆ ನಿಂತಿದ್ದೇ ಒಳ್ಳೆಯದಾಯಿತು. ಮದುವೆ ಮುನ್ನವೇ ವರನ ಅಸಲಿ ಮುಖ ಎಲ್ಲರಿಗೂ ಗೊತ್ತಾಯಿತು ಎಂದು ವಧುವಿನ ಪೋಷಕರು ಹೇಳಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಬಂಧನದಲ್ಲಿದ್ದ ಎಲ್ಲರನ್ನೂ ರಕ್ಷಿಸಿದ್ದಾರೆ. ಆದ್ರೆ ಯಾರು ದೂರು ದಾಖಲಿಸಲು ಮುಂದಾಗಲಿಲ್ಲ. ಸ್ಥಳದಲ್ಲಿಯೇ ವರ ನನಗೆ ಈ ಮದುವೆ ಬೇಡ ಎಂದು ಪೊಲೀಸರ ಸಮ್ಮುಖದಲ್ಲಿ ತಿಳಿಸಿ, ಅರ್ಧ ತಲೆ ಹೊತ್ತು ಹಿಂದಿರುಗಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv