ದೀಪಾವಳಿ ಸಂಭ್ರಮಕ್ಕೆ ಜೊತೆಯಾಗಲಿದೆ ಪರಿಸರ ಸ್ನೇಹಿ ಹಸಿರು ಪಟಾಕಿ

Public TV
1 Min Read

ನವದೆಹಲಿ: ದೀಪಗಳ ಹಬ್ಬ ದೀಪಾವಳಿ ಸಂಭ್ರಮದಲ್ಲಿ ಪರಿಸರಕ್ಕೆ ಹಾನಿಕಾರಕ ಪಟಾಕಿಗಳನ್ನು ಸಿಡಿಸಿ ಮಾಲಿನ್ಯ ಮಾಡುವುದನ್ನು ತಡೆಯಲು ಪರಿಸರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಆದ್ದರಿಂದ ಶನಿವಾರ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಹಸಿರು ಪಟಾಕಿಗಳನ್ನು ಬಿಡುಗಡೆ ಮಾಡಿದ್ದಾರೆ.

ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಈ ಹಸಿರು ಪಟಾಕಿಯಿಂದ ಶೇ.30ರಷ್ಟು ಮಾಲಿನ್ಯ ಕಡಿಮೆಯಾಗಲಿದೆ. ಆದ್ದರಿಂದ ಭಾವನೆ ಹಾಗೂ ಪರಿಸರಕ್ಕೆ ಅಡ್ಡಿಯಾಗದಂತೆ ಪರಿಸರ ಸ್ನೇಹಿ ಪಟಾಕಿಗಳನ್ನು ಪರಿಚಯಿಸಲಾಗುತ್ತಿದೆ ಎಂದು ಹರ್ಷವರ್ಧನ್ ತಿಳಿಸಿದರು.

ಹಸಿರು ಪಟಾಕಿಗಳನ್ನು ವೈಜ್ಞಾನಿಕ ಹಾಗೂ ಕೈಗಾರಿಕ ಸಂಶೋಧನ ಕೌನ್ಸಿಲ್(ಸಿಎಸ್‍ಐಆರ್) ತಯಾರಿಸಿದೆ. ಸಾಮಾನ್ಯ ಪಟಾಕಿಗಳಿಗಿಂತ ಹಸಿರು ಪಟಾಕಿಗಳಲ್ಲಿ ಕಡಿಮೆ ಕೆಮಿಕಲ್ ಬಳಸಲಾಗುತ್ತದೆ. ಹೀಗಾಗಿ ಇದರಿಂದ ಪರಿಸರಕ್ಕೆ ಹೆಚ್ಚು ಹಾನಿ ಆಗುವುದಿಲ್ಲ. ಜೊತೆಗೆ ಸಾಮಾನ್ಯ ಪಟಾಕಿಗಳಿಂತ ಈ ಹಸಿರು ಪಟಾಕಿಗಳ ಬೆಲೆಯೂ ಕಡಿಮೆ ಇದೆ ಎನ್ನಲಾಗಿದೆ. ಆದರೆ ಈ ಪಟಾಕಿಗಳ ನಿಖರ ಬೆಲೆ ಬಗ್ಗೆ ಸಿಎಸ್‍ಐಆರ್ ಯಾವುದೇ ಮಾಹಿತಿ ನೀಡಿಲ್ಲ.

ಈ ಹಿಂದೆ 2018ರಲ್ಲಿ ದೀಪಾವಳಿ ಹಬ್ಬಕ್ಕೂ ಮುಂಚೆಯೇ ಸುಪ್ರೀಂ ಕೋರ್ಟ್ ಪರಿಸರ ಮಾಲಿನ್ಯ ಉಂಟುಮಾಡುವ ಪಟಾಕಿಗಳ ತಯಾರಿಕೆ ಹಾಗೂ ಮಾರಾಟಕ್ಕೆ ನಿಷೇಧ ಹೇರಿತ್ತು. ಹಾಗೆಯೇ ಕಡಿಮೆ ಕೆಮಿಕಲ್ ಬಳಸಿ ತಯಾರಿಕೆ ಮಾಡುವ ಹಸಿರು ಪಟಾಕಿಗಳ ತಯಾರಿಕೆ ಹಾಗೂ ಮಾರಟಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಆದೇಶಿಸಿತ್ತು. ಆದರೆ ಆಗ ಈ ಬಗ್ಗೆ ಹಲವು ಪಟಾಕಿ ತಯಾರಕರು ಹಾಗೂ ಮಾರಾಟಗಾರರಿಗೆ ಸರಿಯಾಗಿ ಮಾಹಿತಿ ಇಲ್ಲದ ಕಾರಣಕ್ಕೆ ಆಗ ಹಸಿರು ಪಟಾಕಿ ಮಾರುಕಟ್ಟೆಗೆ ಬಂದಿರಲಿಲ್ಲ. ಆದ್ದರಿಂದ ಈ ಬಾರಿ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ತಯಾರಿಸಲಾಗಿದ್ದು, ಕೆಲವೇ ದಿನಗಳಲ್ಲಿ ಈ ಪಟಾಕಿಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ.

ಈ ಮೂಲಕ ಪರಿಸರ ಕಾಳಜಿ ಮೆರೆದ ಕೇಂದ್ರ ಸರ್ಕಾರದ ನಿಲುವು ಸಾರ್ವಜನಿಕರ ಗಮನ ಸೆಳೆದಿದ್ದು, ಸಿಎಸ್‍ಐಆರ್ ಹಾಗೂ ಕೇಂದ್ರ ಸರ್ಕಾರದ ಹೊಸ ಪ್ರಯತ್ನಕ್ಕೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *