ಚಿಕ್ಕಮಗಳೂರು| ರೈಲ್ವೇ ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿತು ದೊಡ್ಡ ಅನಾಹುತ

Public TV
1 Min Read

ಚಿಕ್ಕಮಗಳೂರು: ರೈಲ್ವೇ ಸಿಬ್ಬಂದಿ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ರೈಲು ಅನಾಹುತ ತಪ್ಪಿದೆ.

ಕಳೆದ ನಾಲ್ಕು ದಿನಗಳಿಂದ ಮಲೆನಾಡು ಹಾಗೂ ಬಯಲುಸೀಮೆ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಚಿಕ್ಕಮಗಳೂರು (Chikkamagaluru) ತಾಲೂಕಿನ ಕಣಿವೆ ಗ್ರಾಮದಲ್ಲಿ‌ ರೈಲ್ವೇ ಹಳಿ ಲಯ ತಪ್ಪಿ ಹಳಿಗೆ ಹಾಕಿದ್ದ ಜಲ್ಲಿ ಕಲ್ಲುಗಳು ಕೊಚ್ಚಿ ಹೋಗಿತ್ತು. ಬುಧವಾರ ರಾತ್ರಿಯಿಡೀ ಸುರಿದ ಮಳೆಯಿಂದ ಕಾಲುವೆಯ ನೀರು ಉಕ್ಕಿ ಹರಿದ ಪರಿಣಾಮ ಹಳಿಯಲ್ಲಿದ್ದ ಜಲ್ಲಿ ಕಲ್ಲುಗಳು ಕೊಚ್ಚಿ ಹೋಗಿದ್ದವು.

ಇಂದು ಬೆಳಗ್ಗೆ ಚಿಕ್ಕಮಗಳೂರಿನಿಂದ ಶಿವಮೊಗ್ಗ (Shivamogga) ಕಡೆಗೆ ಹೊರಟ್ಟಿದ್ದ ಪ್ಯಾಸೆಂಜರ್ ರೈಲು ಕಣಿವೆ ಬಳಿ ಆಗಮಿಸುತ್ತಿದ್ದಂತೆ ರೈಲ್ವೆ ಸಿಬ್ಬಂದಿ ತಕ್ಷಣ ನಿಲ್ಲಿಸುವಂತೆ ಲೋಕೋ ಪೈಲಟ್‌ಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಎಚ್ಚೆತ್ತ ಲೋಕೋ ಪೈಲಟ್ ರೈಲನ್ನು ನಿಲ್ಲಿಸಿದ್ದು ಈ ವೇಳೆ ರೈಲ್ವೆ ಸಿಬ್ಬಂದಿಗಳು ತುರ್ತು ದುರಸ್ತಿ ಕಾರ್ಯ ಕೈಗೊಂಡು ರೈಲಿನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ತಾತ್ಕಾಲಿಕ ದುರಸ್ತಿ ಕಾರ್ಯ ಪೂರ್ಣಗೊಂಡ 45 ನಿಮಿಷಗಳ ಬಳಿಕ ರೈಲು ತಡವಾಗಿ ಶಿವಮೊಗ್ಗದತ್ತ ಪ್ರಯಾಣ ಬೆಳೆಸಿತು. ಇದನ್ನೂ ಓದಿ:  ಯಾವುದೇ ಕ್ಷಣದಲ್ಲಿ ಹೇಮಾವತಿ ಡ್ಯಾಂನಿಂದ ನೀರು ಹೊರಕ್ಕೆ – ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ

ಈ ಸ್ಥಳದ ಹಳಿ ಪಕ್ಕದಲ್ಲೇ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ರೈಲ್ವೇ ಸಿಬ್ಬಂದಿ ನೀರನ್ನು ಸರಾಗವಾಗಿ ಹರಿಯುವಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಘಟನೆ ನಡೆದಿರುವ ಕಣಿವೆ ಹಳ್ಳಿಯೂ ಚಿಕ್ಕಮಗಳೂರು ರೈಲ್ವೇ ನಿಲ್ದಾಣದಿಂದ 10 ಕಿ.ಮೀ ಅಂತರದಲ್ಲಿದ್ದ ಕಾರಣ ರೈಲಿನ ವೇಗವು ಕಡಿಮೆ ಇತ್ತು. ಇಂದು ಬೆಳಗ್ಗೆ 7:10ಕ್ಕೆ ರೈಲ್ವೆ ನಿಲ್ದಾಣದಿಂದ ಹೊರಟಿದ್ದ ಪ್ಯಾಸೆಂಜರ್ ರೈಲು 7.30ರ ವೇಳೆಗೆ ಕಣಿವೆಹಳ್ಳಿಗೆ ತಲುಪಿತ್ತು.

Share This Article