ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ʻಮನ್ ಕಿ ಬಾತ್ʼನಲ್ಲಿ ಅಸ್ಸಾಂನ (Assam) ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ (Kaziranga) ನಡೆಸಲಾದ ಮೊದಲ ʻಹುಲ್ಲುಗಾವಲು ಪಕ್ಷಿ ಗಣತಿʼಯನ್ನು (Grassland Bird Census) ಉಲ್ಲೇಖಿಸಿ ಮಾತಾಡಿದ್ದರು. ಈ ಗಣತಿಯಲ್ಲಿ ಬಳಕೆ ಮಾಡಲಾದ ವಿಧಾನ ಹಾಗೂ ಹುಲ್ಲುಗಾವಲು ಪಕ್ಷಿಗಳ ಸಂರಕ್ಷಣೆಯ ದೃಷ್ಟಿಯಿಂದ ಇದು ವಿಶೇಷವಾಗಿದೆ. ಹುಲ್ಲುಗಾವಲು ಪಕ್ಷಿ ಗಣತಿ ಎಂದರೇನು? ಈ ಗಣತಿಗೆ ಬಳಸಿದ ವಿಧಾನ ಯಾವುದು? ಈ ಗಣತಿಯ ಪ್ರಾಮುಖ್ಯತೆ ಏನು ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಕಾಜಿರಂಗ ಪಕ್ಷಿ ಗಣತಿ ಉದ್ದೇಶವೇನು?
ಮಾರ್ಚ್ 18 ಮತ್ತು ಮೇ 25ರ ನಡುವೆ, ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲ್ಲುಗಾವಲು ಪಕ್ಷಿಗಳ ಗಣತಿ ನಡೆದಿತ್ತು. ಈ ಸಮೀಕ್ಷೆಯನ್ನು ಅರಣ್ಯ ಅಧಿಕಾರಿಗಳು, ವಿಜ್ಞಾನಿಗಳು ಮತ್ತು ಪರಿಸರ ಪ್ರಿಯರು ಕೈಗೊಂಡಿದ್ದರು. ಕಾಜಿರಂಗದಲ್ಲಿ ಯಾವ ಹುಲ್ಲುಗಾವಲು ಪಕ್ಷಿ ಪ್ರಭೇದಗಳು ವಾಸಿಸುತ್ತವೆ ಎಂಬುದನ್ನು ಅಧ್ಯಯನ ಮಾಡುವುದು ಈ ಗಣತಿಯ ಮುಖ್ಯ ಉದ್ದೇಶವಾಗಿತ್ತು.
ವಿಸ್ತಾರವಾದ ಹುಲ್ಲುಗಾವಲಾಗಿರುವ ಕಾಜಿರಂಗ ಉದ್ಯಾನವನದಲ್ಲಿ ಅಪರೂಪದ ಪಕ್ಷಿ ಪ್ರಬೇದಗಳಿವೆ. ಇವು ಬಹುತೇಕ ಸಣ್ಣ ಹಕ್ಕಿಗಳಾಗಿದ್ದು, ನಾಚಿಕೆ ಸ್ವಭಾವದ್ದಾಗಿರುವುದರಿಂದ ಅವುಗಳನ್ನು ಸುಲಭವಾಗಿ ಗುರುತಿಸುವುದು ಕಷ್ಟ. ಯಾರಾದರೂ ಕಾಣಿಸಿದರೆ ಅವು ಅಡಗಿಕೊಳ್ಳುತ್ತವೆ. ಇದರಿಂದ ಈ ಗಣತಿ ಒಂದು ಸವಾಲಾಗಿತ್ತು. ಇದರಿಂದಾಗಿಯೇ ನೂತನವಾದ ಅಕೌಸ್ಟಿಕ್ ಮಾನಿಟರಿಂಗ್ ತಂತ್ರಜ್ಞಾನ ಬಳಸಿ ಪಕ್ಷಿಗಳ ಗಣತಿ ಮಾಡಲಾಗಿದೆ.
ಮಾ.18ರಿಂದ ಮೇ25ರ ಅವಧಿಯಲ್ಲೇ ಗಣತಿ ಏಕೆ?
ಮಾರ್ಚ್ 18 ಮತ್ತು ಮೇ 25ರ ಈ ಅವಧಿಯಲ್ಲೇ ಯಾಕೆ ಗಣತಿ ಮಾಡಲಾಯಿತು ಎಂದರೆ, ಈ ಸಮಯದಲ್ಲಿ ಹುಲ್ಲುಗಾವಲು ಪಕ್ಷಿಗಳ ಸಂತಾನೋತ್ಪತ್ತಿಯ ಸಮಯವಾಗಿದೆ. ಈ ಸಮಯದಲ್ಲಿ ಪಕ್ಷಿಗಳು ಒಂದೇ ಕಡೆ ಬಹಳಷ್ಟು ಕಾಲ ಇರುತ್ತವೆ. ಅಲ್ಲದೇ ಗೂಡುಗಳನ್ನು ರಚಿಸಿಕೊಂಡು ಅಲ್ಲಿಯೇ ಕಾಲಕಳೆಯುತ್ತವೆ. ಇದರಿಂದ ಅಧ್ಯಯನ ಬಹಳ ಸುಲಭವಾಗಿದೆ.
ಈ ಸಮಯದಲ್ಲಿ ಅವು ತುಂಬಾ ಕೂಗುತ್ತಿರುತ್ತವೆ. ತಮ್ಮ ಸಂಗಾತಿಗಳನ್ನು ಕರೆಯುತ್ತವೆ. ಅಲ್ಲದೇ ಗಂಡು ಪಕ್ಷಿಗಳು ಗೂಡುಗಳ ಕಾವಲು ಕಾಯುತ್ತವೆ. ಈ ಸಮಯದ ಲಾಭ ಪಡೆದು ಹುಲ್ಲುಗಾವಲುಗಳ ಬಳಿಯ ಎತ್ತರದ ಮರಗಳಲ್ಲಿ ಅಕೌಸ್ಟಿಕ್ ರೆಕಾರ್ಡರ್‌ಗಳನ್ನು ಇರಿಸಿ ಧ್ವನಿಗಳನ್ನು ರೆಕಾರ್ಡ್ ಮಾಡಿ ಅಧ್ಯಯನ ಮಾಡಲಾಗಿದೆ.
ಏನಿದು ಅಕೌಸ್ಟಿಕ್ ಮಾನಿಟರಿಂಗ್ ತಂತ್ರಜ್ಞಾನ?
ಅಕೌಸ್ಟಿಕ್ ರೆಕಾರ್ಡರ್ ಎಂದರೆ ಪಕ್ಷಿಗಳ ಧ್ವನಿಯನ್ನು ರೆಕಾರ್ಡ್ ಮಾಡುವ ಸಾಧನವಾಗಿದೆ. ಇನ್ನೂ ಅಳಿವಿನಂಚಿನಲ್ಲಿರುವ ಹುಲ್ಲುಗಾವಲು ಪಕ್ಷಿ ಬ್ಲ್ಯಾಕ್-ಬ್ರೆಸ್ಟೆಡ್ ಪ್ಯಾರಟ್‌ಬಿಲ್ ಬಗ್ಗೆ ಅಧ್ಯಯನ ಮಾಡುತ್ತಿರುವ ಡಾಕ್ಟರೇಟ್ ವಿದ್ಯಾರ್ಥಿ ಚಿರಂಜೀಬ್ ಬೋರಾ ಈ ಗಣತಿಯಲ್ಲಿ ಭಾಗಿಯಾಗಿದ್ದರು. ಅವರು ತಮ್ಮ ಸಂಶೋಧನೆಗೆ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ INSPIRE ಫೆಲೋಶಿಪ್ ಪಡೆದು ಅಕೌಸ್ಟಿಕ್ ಮಾನಿಟರಿಂಗ್ ಪರಿಕರಗಳನ್ನು ಕೊಂಡುಕೊಂಡಿದ್ದರು. ಆ ಪರಿಕರಗಳನ್ನು ಈ ಸಮೀಕ್ಷೆಗೆ ಬಳಕೆ ಮಾಡಿಕೊಳ್ಳಲಾಗಿದೆ.
ಆರು ರೆಕಾರ್ಡರ್‌ಗಳನ್ನು ಕಾಜಿರಂಗ ಉದ್ಯಾನವನದ 29 ಸ್ಥಳಗಳಲ್ಲಿ ಇರಿಸಿ ಪಕ್ಷಿಗಳ ಧ್ವನಿ ರೆಕಾರ್ಡ್ ಮಾಡಲಾಗಿದೆ. ಈ ರೆಕಾರ್ಡರ್‌ಗಳಲ್ಲಿ ದಾಖಲಾದ ಪಕ್ಷಿಗಳ ಕೂಗನ್ನು ವಿಭಜಿಸಿ ಪಕ್ಷಿಗಳನ್ನು ಗುರುತಿಸಲು ವಿಭಿನ್ನ ಸಾಧನಗಳನ್ನು ಬಳಸಿ ಗುರುತಿಸಲಾಗಿದೆ. ಸತತ ಮೂರು ದಿನಗಳ ಕಾಲ ರೆಕಾರ್ಡಿಂಗ್ ಮಾಡಿದ ನಂತರ ಪಕ್ಷಿಗಳ ಧ್ವನಿಯನ್ನು ವಿಶ್ಲೇಷಿಸಲಾಗಿದೆ. ಧ್ವನಿಯನ್ನು ಗುರುತಿಸಲು ಸಾಧ್ಯವಾಗದಿದ್ದಾಗ ನೂತನ ಸಾಫ್ಟ್‌ವೇರ್ ಬಳಸಿ ಗುರುತಿಸಲಾಗಿದೆ. ಹಕ್ಕಿಯ ಕೂಗಿನ ಆಧಾರದ ಮೇಲೆ ಅವುಗಳ ಜಾತಿಗಳನ್ನು ಗುರುತಿಸಲು ಬರ್ಡ್‌ನೆಟ್ ಎಂಬ ಉಪಕರಣವನ್ನು ಬಳಸಲಾಗಿದೆ.
ಗಣತಿಯ ಮಹತ್ವವೇನು?
ಹುಲ್ಲುಗಾವಲು ಪಕ್ಷಿಗಳನ್ನು ಪರಿಸರ ವ್ಯವಸ್ಥೆಯ ʻಉತ್ತಮ ಆರೋಗ್ಯದ ಸೂಚಕʼ ಎಂದು ಕರೆಯಾಗುತ್ತದೆ. ಈ ಪಕ್ಷಿಗಳ ಇರುವಿಕೆ ಅಲ್ಲಿನ ಪರಿಸರ ಆರೋಗ್ಯಕರವಾಗಿದೆ ಎಂದು ಸೂಚಿಸುತ್ತದೆ. ಅವುಗಳ ಅವನತಿ, ಮನುಷ್ಯನಿಗೂ ಸಹ ಕಂಟಕವಾಗುವ ಪರಿಸರ ನಿರ್ಮಾಣವಾಗುತ್ತಿರುವುದರ ಸಂಕೇತವಾಗಿದೆ. ಇದೇ ಕಾರಣದಿಂದಾಗಿ ಹುಲ್ಲುಗಾವಲು ಪಕ್ಷಿಗಳ ಗಣತಿ ಹಾಗೂ ಅವುಗಳ ಸಂರಕ್ಷಣೆ ಅಗತ್ಯವಾಗಿದೆ. ಇದೇ ರೀತಿಯಾಗಿ ಜೇನು ನೊಣಗಳ ಬಗ್ಗೆಯೂ ವಿಶ್ಲೇಷಿಸಲಾಗುತ್ತದೆ. ಜೇನು ಉತ್ತಮ ಪರಿಸರ ವ್ಯವಸ್ಥೆಯ ಸೂಚಕವಾಗಿದೆ. ಕೃಷಿ ಕೆಲಸದಲ್ಲಿ ಪರಾಗ ಸ್ಪರ್ಶ ಕೆಲಸ ಜೇನಿನಿಂದ ಆಗುತ್ತದೆ. ಇದೇ ರೀತಿ ಪ್ರಕೃತಿಯ ಪ್ರತಿ ಜೀವಿಯೂ ಒಂದಲ್ಲ ಒಂದು ರೀತಿ ಪ್ರಕೃತಿಗೆ, ಮನುಷ್ಯನಿಗೂ ನೆರವಾಗುತ್ತಿರುತ್ತವೆ.
ಸ್ಥಳೀಯ 10 ಪ್ರಭೇದಗಳಿಗೆ ಆದ್ಯತೆ
ಕಾಜಿರಂಗ ಪಕ್ಷಿ ಗಣತಿಯಲ್ಲಿ ಸ್ಥಳೀಯವಾಗಿರುವ 10 ಪ್ರಭೇದಗಳಿಗೆ ಆದ್ಯತೆ ನೀಡಲಾಗಿದೆ. ಇದರಲ್ಲಿ ಬಂಗಾಳ ಫ್ಲೋರಿಕನ್, ಸ್ವಾಂಪ್ ಫ್ರಾಂಕೋಲಿನ್, ಫಿನ್ಸ್ ವೀವರ್, ಸ್ವಾಂಪ್ ಗ್ರಾಸ್ ಬ್ಯಾಬ್ಲರ್, ಜೆರ್ಡಾನ್ಸ್ ಬ್ಯಾಬ್ಲರ್, ಸ್ಲೆಂಡರ್-ಬಿಲ್ಡ್ ಬ್ಯಾಬ್ಲರ್, ಬ್ಲ್ಯಾಕ್-ಬ್ರೆಸ್ಟೆಡ್ ಪ್ಯಾರಟ್‌ಬಿಲ್, ಮಾರ್ಷ್ ಬ್ಯಾಬ್ಲರ್, ಬ್ರಿಸ್ಟಲ್ಡ್ ಗ್ರಾಸ್‌ಬರ್ಡ್ ಮತ್ತು ಇಂಡಿಯನ್ ಗ್ರಾಸ್‌ಬರ್ಡ್ ಒಳಗೊಂಡಿವೆ.
70% ಹುಲ್ಲುಗಾವಲು ಪ್ರದೇಶ ನಾಶ!
ಕಳೆದ ನಾಲ್ಕು ದಶಕಗಳಲ್ಲಿ ಅಸ್ಸಾಂ ತನ್ನ 70% ನಷ್ಟು ಹುಲ್ಲುಗಾವಲು ಭಾಗವನ್ನು ಕಳೆದುಕೊಂಡಿದೆ. ಅತಿಯಾಗಿ ಜಾನುವಾರು ಮೇಯಿಸುವುದು ಮತ್ತು ಕೃಷಿಗಾಗಿ ಹುಲ್ಲುಗಾವಲುಗಳನ್ನು ತೆರವುಗೊಳಿಸುವುದು ಮುಂತಾದ ಕಾರಣದಿಂದ ಹುಲ್ಲುಗಾವಲುಗಳು ಕ್ರಮೇಣ ನಶಿಸುತ್ತಿದೆ. ಇದರಿಂದ ಕೆಲವು ಸ್ಥಳೀಯ ಪಕ್ಷಿ ಪ್ರಬೇಧಗಳು ಅವನತಿಯ ಹಂತದಲ್ಲಿವೆ. ಬಂಗಾಳ ಫ್ಲೋರಿಕನ್‌ನಂತಹ ಕೆಲವು ಪ್ರಭೇದಗಳು ಭಾರೀ ಅಪಾಯದ ಅಂಚಿನಲ್ಲಿವೆ. ಈ ಬಗ್ಗೆ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.