ಕನಸಿನಲ್ಲಿ ದೇವಿ ಪ್ರತ್ಯಕ್ಷ – ಅಜ್ಜಿಯನ್ನೇ ಕೊಂದ ಮೊಮ್ಮಗ..!

Public TV
1 Min Read

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಮೊಮ್ಮಗನೋರ್ವ ನಿಧಿಗಾಗಿ ತನ್ನ ಸ್ವಂತ ಅಜ್ಜಿಯನ್ನೇ ಕೊಲೆ ಮಾಡಿ ಜನರ ಬಳಿ ಗೂಸ ತಿಂದು ಈಗ ಪೊಲೀಸರ ಅಥಿತಿಯಾಗಿದ್ದಾನೆ.

ಯಲ್ಲವ್ವ ಗೊಲ್ಲರ್ (75) ಮೃತ ದುರ್ದೈವಿ. ಆರೋಪಿ ಮೊಮ್ಮಗ ರಮೇಶ್ ಗೊಲ್ಲರ್ ಕೊಲೆ ಮಾಡಿದ್ದಾನೆ. ಈತ ಮೂಲತಃ ಶಿರಸಿ ತಾಲೂಕಿನ ಬನವಾಸಿ ಬಳಿಯ ಬದನಗೋಡು ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದನು. ರಮೇಶ್ ಕನಸಿನಲ್ಲಿ ಈತನು ಪೂಜಿಸುವ ಇದೇ ಊರಿನ ಹುಲಿಯಮ್ಮ ದೇವಿ ಪ್ರತ್ಯಕ್ಷಳಾಗಿದ್ದು, ನಿನಗೆ ನಿಧಿ ತೋರಿಸುತ್ತೇನೆ ಅದಕ್ಕಾಗಿ ಐದು ನರ ಬಲಿ ಕೊಡಬೇಕು ಎಂದಿದ್ದಳಂತೆ.

ಹೀಗಾಗಿ ಕನಸಲ್ಲಿ ಕಂಡದ್ದನ್ನು ನಿಜ ಮಾಡಲು 2016 ರಲ್ಲಿ ಮುಂಡಗೋಡಿನ ಮಳಗಿ ಅಣೆಕಟ್ಟು ಬಳಿ ಆಟವಾಡುತ್ತಿದ್ದ ಚಿಕ್ಕ ಬಾಲಕನ ಕುತ್ತಿಗೆ ಕಡಿದು ಕೊಲೆ ಮಾಡಿದ್ದನು. ಬಳಿಕ ಮುಂಡಗೋಡು ಪೊಲೀಸರಿಂದ ಬಂಧನವಾಗಿದ್ದನು. ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡು ಮತ್ತಷ್ಟು ಬಲಿ ಪಡೆಯಲು ಗ್ರಾಮದಲ್ಲಿ ಕತ್ತಿ ಹಿಡಿದುಕೊಂಡು ಓಡಾಡುತ್ತಿದ್ದನು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಆತನಿಗೆ ಎಚ್ಚರಿಸಲಾಗಿತ್ತು. ಆದರೆ ಇದೀಗ ನಿಧಿಯ ಆಸೆಗೆ ತನ್ನ ಅಜ್ಜಿ ಯಲ್ಲವ್ವರನ್ನು ಬಲಿ ತೆಗೆದುಕೊಂಡಿದ್ದಾನೆ ಎಂದು ಗ್ರಾಮಸ್ಥ ಸರ್ಫರಾಜ್ ತಿಳಿಸಿದ್ದಾರೆ.

ಕೃತ್ಯ ನಡೆಸಿ ಊರಿನಿಂದ ಪರಾರಿಯಾಗಿದ್ದ ಈತನನ್ನು ಗ್ರಾಮದವರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತನ ಮತ್ತೊಂದು ನರಬಲಿಯಿಂದ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದ್ದು, ತಾನು ಇನ್ನು ಮೂರು ಬಲಿ ಪಡೆದರೆ ನಿಧಿ ಪಡೆಯುವ ಹಂಬಲವನ್ನು ಪೊಲೀಸರ ಬಳಿ ಹೇಳಿದ್ದಾನೆ. ಇದರಿಂದ ಮತ್ತಷ್ಟು ಬಲಿಯಾಗುವ ಆತಂಕದಲ್ಲಿ ಗ್ರಾಮದವರು ಊರಿನಲ್ಲಿ ಓಡಾಡಲೂ ಭಯ ಪಡುತ್ತಿದ್ದಾರೆ ಎಂದು ಸ್ಥಳೀಯ ಅಕ್ಷಯ್ ಹೇಳಿದ್ದಾರೆ.

ಈ ಹಿಂದೆಯೇ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದರೆ ಅಜ್ಜಿ ಸಾಯುತ್ತಿರಲಿಲ್ಲ. ಆದರೆ ಈಗ ನಿಧಿ ಹೆಸರಿನಲ್ಲಿ ಎರಡು ಬಲಿಯಾಗಿದ್ದು, ಈತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ಮತ್ತಷ್ಟು ಬಲಿಯಾಗಲಿದೆ ಎಂದು ಜನರು ಪೊಲೀಸರಿಗೆ ಆಗ್ರಹಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *