ಯಾದಗಿರಿ: ಹಾವು ಕಚ್ಚಿ ತಾತ ಮತ್ತು ಮೊಮ್ಮಗ ಇಬ್ಬರು ಸಾವನ್ನಪ್ಪಿರುವ ಘಟನೆ ಯಾದಗಿರಿ ತಾಲೂಕಿನ ನಂದೆಪಲ್ಲಿ ಗ್ರಾಮದಲ್ಲಿ ನಡೆದಿದೆ.
50 ವರ್ಷದ ನಿಂಗಪ್ಪ ಹಾಗೂ ಅವರ ಮೊಮ್ಮಗನಾದ 10 ವರ್ಷ ವಯಸ್ಸಿನ ಚಂದ್ರಶೇಖರ ಮೃತ ದುರ್ದೈವಿಗಳು.
ತಾತ ಮೊಮ್ಮಗ ಇಬ್ಬರೂ ರಾತ್ರಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ಜಮೀನಿಗೆ ಭತ್ತದ ಬೆಳೆಗೆ ನೀರು ಬಿಡಲು ಹೋಗಿದ್ದಾರೆ. ಕತ್ತಲೆ ಇದ್ದ ಕಾರಣದಿಂದ ಹಾವು ಕಡಿದಿದೆ. ತಕ್ಷಣ ಗ್ರಾಮಸ್ಥರು ಸಹಾಯಕ್ಕೆ ಬಂದು ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ.
ಈ ಘಟನೆ ಸೈದಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಸೈದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.