ಗ್ರಾಮ ಪಂಚಾಯತ್ ಅಧ್ಯಕ್ಷನ ಬೆಂಬಲಿಗರಿಂದ ಸದಸ್ಯನ ಬರ್ಬರ ಹತ್ಯೆ!

Public TV
2 Min Read

– ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕೆ ಕೊಲೆ

ಬೆಳಗಾವಿ: ಗ್ರಾಮ ಪಂಚಾಯತ್ ನಲ್ಲಿ ಅವಿಶ್ವಾಸ ನಿರ್ಣಯ ಮಾಡಿದಕ್ಕೆ ಸದಸ್ಯರೊಬ್ಬರನ್ನು ಅಧ್ಯಕ್ಷನ ಬೆಂಬಲಿಗರು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ.

ಹೊಸ ವಂಟಮೂರಿ ಗ್ರಾಮ ಪಂಚಾಯತ್ ಸದಸ್ಯ ಬನ್ನೆಪ್ಪ ಪಾಟೀಲ್ ಕೊಲೆಯಾದ ಸದಸ್ಯ. ಹೊಸ ವಂಟಮೂರಿ ಗ್ರಾಮ ಪಂಚಾಯತಿಯಲ್ಲಿ ಕಳೆದ ಮೂರು ವರ್ಷಗಳಿಂದ ಶಿವಾಜಿ ವಣ್ಣೂರ ಎಂಬವರು ಅಧ್ಯಕ್ಷನಾಗಿದ್ದನು. ಆದರೆ ಶಿವಾಜಿ ವಣ್ಣೂರನ ಕಾರ್ಯವೈಖರಿ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಲವು ದಿನಗಳಿಂದ ಅಧ್ಯಕ್ಷನ ವಿರುದ್ಧ ಗ್ರಾಮ ಪಂಚಾಯ್ತಿ ಸದಸ್ಯರ ಗುಂಪೊಂದು ಅವಿಶ್ವಾಸ ನಿರ್ಣಯ ಹೊರಡಿಸಲು ಯತ್ನಿಸಿತ್ತು ಆದರೇ ಸಫಲಗೊಂಡಿರಲಿಲ್ಲ. ಆದರೆ ಡಿಸೆಂಬರ್ 7ಕ್ಕೆ ಹತ್ಯೆಯಾದ ಬನ್ನೆಪ್ಪ ಪಾಟೀಲ್ ನೇತೃತ್ವದಲ್ಲಿ ಸದಸ್ಯರು ಮತ್ತೊಮ್ಮೆ ಅಧ್ಯಕ್ಷನ ವಿರುದ್ಧ ಅವಿಶ್ವಾಸ ನಿರ್ಣಯ ಮಾಡಿದ್ದರು. ಇದು ಶಿವಾಜಿ ವಣ್ಣೂರನ ಹತಾಶೆಗೆ ಕಾರಣವಾಗಿತ್ತು.

ಗುರುವಾರ ರಾತ್ರಿ 9 ಗಂಟೆ ಸಮಯದಲ್ಲಿ ನಡು ಊರಿನಲ್ಲೇ ಸದಸ್ಯ ಬನ್ನಪ್ಪೆ ಪಾಟೀಲ್‍ನನ್ನು ಶಿವಾಜಿ ವಣ್ಣೂರ ಹಾಗೂ ಬೆಂಬಲಿಗರು ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಗ್ರಾಮ ಪಂಚಾಯತಿಯಲ್ಲಿ ತನ್ನ ವಿರುದ್ಧ ಕೈಗೊಂಡ ಅವಿಶ್ವಾಸ ನಿರ್ಣಯ ಪ್ರಶ್ನಿಸಿ ಶಿವಾಜಿ ವಣ್ಣೂರ ಹೈಕೋರ್ಟ್ ಮೆಟ್ಟಿಲು ಏರಿದ್ದನು. ಹೈಕೋರ್ಟ್ ತೀರ್ಪು ಪ್ರಕಟವಾಗುವ ಮೊದಲೇ ಈ ಭೀಕರ ಹತ್ಯೆ ನಡೆದಿದೆ. ಕೊಲೆಯಾದ ಬನ್ನೆಪ್ಪ ಪಾಟೀಲ್ ಹಾಗೂ ಪತ್ನಿ ಸವಿತಾ ಪಾಟೀಲ್ ಇಬ್ಬರು ಸಹ ಪಂಚಾಯತ್ ಸದಸ್ಯರಾಗಿದ್ದಾರೆ. ಈ ಘಟನೆ ಇಡೀ ಹೊಸ ವಂಟಮೂರಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಕಾಕಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಆರಂಭಿಸಿದ್ದಾರೆ.

ಹೊಸ ವಂಟೂರಿ ಗ್ರಾಮವು ಶಾಸಕ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಬಹತೇಕ ಎಲ್ಲಾ ಸದಸ್ಯರು ಕಾಂಗ್ರೆಸ್ ಪಕ್ಷದ ಬೆಂಬಲಿಗರೇ ಆಗಿದ್ದಾರೆ. ಈಗ ಪಂಚಾಯತ್ ಚುನಾವಣೆ ದ್ವೇಷಕ್ಕೆ ಸದಸ್ಯರೊಬ್ಬರು ಬಲಿಯಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *