ಅಳಿವಿನಂಚಿನಲ್ಲಿರುವ ಗ್ರಾಮೀಣ ರಂಗಕಲೆಗೆ ಜೀವ ತುಂಬಿದ ಜನಪ್ರತಿನಿಧಿಗಳು

Public TV
1 Min Read

ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೋಡಿಗೆ ಒಳಗಾಗಿರುವ ಯುವಕರನ್ನು ಪೌರಾಣಿಕತೆ ಕಡೆಗೆ ಮುಖಮಾಡಲು ನೆಲಮಂಗಲದ ಗ್ರಾಮಪಂಚಾಯತ್ ಸದಸ್ಯರ ತಂಡವೊಂದು ವಿಭಿನ್ನ ಪ್ರಯತ್ನ ಮಾಡಿದೆ.

ಅಳಿವಿನಂಚಿನಲ್ಲಿರುವ ಗ್ರಾಮೀಣ ಪೌರಾಣಿಕ ರಂಗಕಲೆಗೆ ಯುವಕರು ಒತ್ತು ನೀಡಿದ್ದಾರೆ. ಅಲ್ಲದೆ ಮಹಾಭಾರತದ ನೀತಿಸಾರುವ ಕುರುಕ್ಷೇತ್ರ ಪೌರಾಣಿಕ ನಾಟಕವನ್ನು ಅಭಿನಯಿಸಿದ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ನಾಟಕದ ನಡುವೆಯು ಶಿಕ್ಷಣದ ಮಹತ್ವ ಸಾರಿದ್ದಾರೆ. ಹಾಗೆಯೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಗ್ರಾಮೀಣ ಪ್ರತಿಭೆಗೆ ಸನ್ಮಾನ ಮಾಡಿ ಪ್ರೋತ್ಸಾಹಿಸಿದ್ದಾರೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಅರೇಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು ಕುರುಕ್ಷೇತ್ರ ನಾಟಕ ಅಭಿನಯಿಸಿದ್ದಾರೆ. ರಾಮಾಯಣ ಮತ್ತು ಮಹಾಭಾರತವನ್ನು ಯುವಜನತೆಗೆ ತಿಳಿಸಲು ಈ ಮೂಲಕ ಪ್ರಯತ್ನ ಮಾಡಿದ್ದಾರೆ. ಅದರಲ್ಲೂ ಎಲ್ಲಾ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿ ಸೇರಿ ನಾಟಕ ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು.

ಈ ಬಗ್ಗೆ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯರು, ಆಡಳಿತ ವ್ಯವಸ್ಥೆಯ ಮೂಲವಾದ ಗ್ರಾಮ ಪಂಚಾಯತಿಯ ಆಡಳಿತದ ಜೊತೆಗೆ, ಬಿಡುವಿನ ವೇಳೆಯಲ್ಲಿ ಕಲೆಯನ್ನು ಕಲಿತಿದ್ದು ಸಂತಸವಾಗಿದೆ ಎಂದರು. ಕಲೆಯ ಜೊತೆಗೆ ಶಿಕ್ಷಣಕ್ಕೂ ಪ್ರೋತ್ಸಾಹ ನೀಡುವ ಉದ್ದೇಶದಿಂದ, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.98 ರಷ್ಟು ಫಲಿತಾಂಶ ಪಡೆದ ಗ್ರಾಮೀಣ ಪ್ರತಿಭೆ ಸಿಂಚನಾಳನ್ನು ಸನ್ಮಾನಿಸಿ ನಾಟಕ ಮಂಡಳಿಯವರು ಪ್ರಶಂಸೆಗೆ ಪಾತ್ರವಾದರು.

ದಿನನಿತ್ಯದ ಕೆಲಸದ ಜೊತೆಗೆ ಗ್ರಾಮ ಪಂಚಾಯತಿಯಲ್ಲಿ ರಾಜಕೀಯವನ್ನು ಮರೆತು ಕೌರವ ಮತ್ತು ಪಾಂಡವರಾಗಿ ಸದಸ್ಯರು ಅಭಿನಯಿಸಿದರು. ಯುವಜನತೆ ಮೊಬೈಲನ್ನು ಅತೀಯಾಗಿ ಬಳಕೆ ಮಾಡುತ್ತಿರುವುರಿಂದ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆ ಮಾಡುವ ಸಲುವಾಗಿ ಈ ಕಲೆಯನ್ನು ಪ್ರದರ್ಶಿಸಿದ್ದೇವೆ. ನಮ್ಮ ಮುಂದಿನ ಪೀಳಿಗೆ ಈ ಬಯಲುಸೀಮೆ ಕಲೆಯನ್ನು ನೋಡಿ ಈಗ ಕಲಿಯಲು ಮುಂದಾಗಿರುವುದು ಹೆಮ್ಮೆಯ ವಿಚಾರ ಎಂದು ಪಾತ್ರಧಾರಿಗಳು ಸಂತಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *