ದೇಶದ ಮೊದಲ ಆದಾಯ ಸಮೀಕ್ಷೆ ಫೆಬ್ರವರಿಯಲ್ಲಿ ಆರಂಭ

Public TV
2 Min Read

ನವದೆಹಲಿ: ರಾಜ್ಯದಲ್ಲಿ ಜಾತಿಗಣತಿ (Caste Census) ಹೊತ್ತಲ್ಲೇ ಮುಂದಿನ ವರ್ಷದ ಫೆಬ್ರವರಿಯಿಂದ ಕೇಂದ್ರ ಸರ್ಕಾರ ದೇಶಾದ್ಯಂತ ಆದಾಯ ಸಮೀಕ್ಷೆ (NHIS) ಕಾರ್ಯ ಆರಂಭಿಸಲಿದೆ. ಇದೇ ಮೊದಲ ಬಾರಿಗೆ ಮನೆ ಮಂದಿಯ ಜೀವನ ಸ್ಥಿತಿ, ಆದಾಯ, ಖರ್ಚಿನ ಡೇಟಾ ಸಂಗ್ರಹಿಸಲಿದ್ದು, ದೇಶದ ಬಡತನ ಸ್ಥಿತಿಗತಿ ಬಗ್ಗೆ ತಿಳಿದು ಬರಲಿದೆ.

ಕೇಂದ್ರ ಸರ್ಕಾರದ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಅಂಕಿ ಅಂಶ ಕಚೇರಿ ವತಿಯಿಂದ ರಾಷ್ಟ್ರೀಯ ಗೃಹ ಆದಾಯ ಸಮೀಕ್ಷೆ (National Household Income Survey) ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಈ ಸಮೀಕ್ಷೆಯೂ ಮನೆಯ ಆದಾಯವನ್ನು ಅಳೆಯುವತ್ತ ಗಮನಹರಿಸಿದ ಮೊದಲ ಪ್ಯಾನ್-ಇಂಡಿಯಾ (Pan India) ಸಮೀಕ್ಷೆಯಾಗಿದ್ದು, ಭಾರತದ ಸಾಮಾಜಿಕ-ಆರ್ಥಿಕ ಅಂಕಿಅಂಶಗಳ ವ್ಯವಸ್ಥೆಯಲ್ಲಿ ದೀರ್ಘಕಾಲದ ದತ್ತಾಂಶ ಅಂತರವನ್ನು ತೋರುವ ಮಹತ್ವದ ಹೆಜ್ಜೆ ಇದಾಗಿದೆ.

ರಾಷ್ಟ್ರೀಯ ಗೃಹ ಆದಾಯ ಸಮೀಕ್ಷೆ ಜನರ ಜೀವನ ಪರಿಸ್ಥಿತಿಗಳು ಮತ್ತು ಆದಾಯ ಮತ್ತು ವೆಚ್ಚದ ಮಾದರಿಗಳ ಮಾಹಿತಿಯನ್ನು ಒದಗಿಸುತ್ತದೆ. ಪ್ರಪಂಚದಾದ್ಯಂತದ ದೇಶಗಳಲ್ಲಿನ ಸಮುದಾಯಗಳಲ್ಲಿನ ಬಡತನ ಮತ್ತು ಕಷ್ಟಗಳನ್ನು ವಿಶ್ಲೇಷಿಸಲು ಈ ದತ್ತಾಂಶವನ್ನು ಬಳಸಲಾಗುತ್ತದೆ.   ಇದನ್ನೂ ಓದಿ:  ಟ್ರಂಪ್‌ ಭಾಷಣಕ್ಕೆ ಅಡ್ಡಿ – ಇಬ್ಬರು ಇಸ್ರೇಲ್‌ ಸಂಸದರನ್ನು ಹೊರದಬ್ಬಿದ ಸಿಬ್ಬಂದಿ

 

ಕೆನಡಾ, ಅಮೆರಿಕ ಬ್ರಿಟನ್‌ನಂತಹ ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಶ್ರೀಲಂಕಾ, ಬಾಂಗ್ಲಾದೇಶ, ಚೀನಾ ಮತ್ತು ಮಲೇಷ್ಯಾದಂತಹ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳು ಸೇರಿದಂತೆ ಅನೇಕ ದೇಶಗಳಲ್ಲಿ, ಮನೆಯ ಆದಾಯದ ಡೇಟಾವನ್ನು ಮನೆಯ ಸಮೀಕ್ಷೆಗಳ ಮೂಲಕ ಸಂಗ್ರಹಿಸಲಾಗುತ್ತದೆ.

ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಭಾರತದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಸುರ್ಜಿತ್ ಎಸ್. ಭಲ್ಲಾ ಅವರ ಅಧ್ಯಕ್ಷತೆಯಲ್ಲಿ ತಾಂತ್ರಿಕ ತಜ್ಞರ ತಂಡವನ್ನು ರಚಿಸಲಾಗಿದೆ. ಇದನ್ನೂ ಓದಿ: ಕುಟುಂಬಕ್ಕಾಗಿ ಬೆಂಗಳೂರಿನ ಕಾರ್ಪೊರೇಟ್ ಕೆಲಸಕ್ಕೆ ಗುಡ್‌ಬೈ – ಈಗ ಉಬರ್ ಚಾಲಕ, ಹೆಚ್ಚು ಸಂಪಾದನೆ

ಈ ಸಮಿತಿ ನೀಡಿದ ಪ್ರಶ್ನೆಗಳ ಆಧಾರದ ಮೇಲೆ ಕಳೆದ ಆಗಸ್ಟ್ 4–8 ರ ನಡುವೆ ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ಆರು ವಲಯಗಳಲ್ಲಿ ಪ್ರಾಯೋಗಿಕವಾಗಿ ಸಮೀಕ್ಷೆ ನಡೆಸಿದೆ. ಸಮೀಕ್ಷೆಯಲ್ಲಿ ಎರಡು ನಗರ ಮತ್ತು ಎರಡು ಗ್ರಾಮೀಣ ಪ್ರದೇಶಗಳನ್ನು ಆಯ್ಕೆ ಮಾಡಿ ಶ್ರೀಮಂತ ಮತ್ತು ಶ್ರೀಮಂತರಲ್ಲದ ಮಾಹಿತಿ ಸಂಗ್ರಹಿಸಿದೆ. ಮುಂದಿನ ವರ್ಷದ ಫೆಬ್ರವರಿಯಲ್ಲಿ  ಅಧಿಕೃತ ಸಮೀಕ್ಷೆ ಆರಂಭವಾಗಲಿದೆ.

ಸಮೀಕ್ಷೆಯಲ್ಲಿ ಏನು ಇರುತ್ತೆ?
– ಈ ಸಮೀಕ್ಷೆಯಲ್ಲಿ ಮನೆ, ಕುಟುಂಬದ ಮುಖ್ಯಸ್ಥರ ಮಾಹಿತಿ, ಧರ್ಮ, ಜಾತಿ ಮಾಹಿತಿ
– ಕುಟುಂಬಸ್ಥರ ಕೃಷಿ ಸೇರಿ ಇತರೆ ಆದಾಯ ಮೂಲ ಮತ್ತು ಖರ್ಚುಗಳ‌ ವಿವರ ಸಂಗ್ರಹ
– ಕೃಷಿ ಜಮೀನು ಅಥವಾ ಇತರೆ ಭೂಮಿಯ ಮಾಲೀಕತ್ವ ಹಾಗೂ ಸಾಲ, ಸಾಲ ಪಡೆಯಲು ಕಾರಣ ಇತ್ಯಾದಿ ಮಾಹಿತಿ

Share This Article