ಸರ್ಕಾರಿ ನೌಕರರೇ ನಿಮ್ಮ ಬಳಿ ಬಿಪಿಎಲ್ ಕಾರ್ಡ್ ಇದ್ದರೆ ಬೀಳುತ್ತೆ ಭಾರಿ ದಂಡ!

Public TV
2 Min Read

ಕಲಬುರಗಿ: ಆಹಾರ ಇಲಾಖೆಯು ಅಕ್ರಮವಾಗಿ ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಸರ್ಕಾರಿ ನೌಕರರ ಮೇಲೆ ರಾಜ್ಯಾದ್ಯಂತ ದಾಳಿ ನಡೆಸಿ ಕೋಟ್ಯಾಂತರ ರೂಪಾಯಿ ದಂಡ ವಸೂಲಿ ಮಾಡಿದೆ.

ಸರ್ಕಾರಿ ನೌಕರರು ವಾಮಮಾರ್ಗ ಬಳಸಿ ಬಿಪಿಎಲ್ ಪಡಿತರ ಪಡೆದುಕೊಂಡರೇ ಎಚ್ಚರದಿಂದಿರಿ. ಅಕ್ರಮವಾಗಿ ಬಿಪಿಎಲ್ ಪಡಿತರ ಚೀಟಿ ಪಡೆದ ಸರ್ಕಾರಿ ನೌಕರರಿಗೆ ಎಚ್ಚರಿಕೆ ಗಂಟೆಯೊಂದನ್ನ ಹೊಡೆದಿತ್ತು. ಇದೀಗ ಇಂತಹ ಪ್ರಕರಣಗಳನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದವರ ಮೇಲೆ ಬ್ರಹ್ಮಾಸ್ತ್ರ ಬೀಸಿದೆ.

ಬಡತನ ರೇಖೆಗಿಂತ ಕೆಳಗಿರುವ ಜನರಿಗಾಗಿ ಸರ್ಕಾರ ಬಿಪಿಎಲ್ ಕಾರ್ಡ್ ಯೋಜನೆಯನ್ನ ಜಾರಿಗೆ ತಂದಿತ್ತು. ಆದರೆ ಈ ಯೋಜನೆ ಅಂದುಕೊಂಡಂತೆ ಜಾರಿಯಾಗಲೇ ಇಲ್ಲ. ನಿಜವಾದ ಫಲಾನುಭವಿಗಳಿಗೆ ಯೋಜನೆಯ ಲಾಭ ಸಿಗದೇ, ಸರ್ಕಾರಿ ನೌಕರರು ಇದನ್ನು ದುರುಪಯೋಗ ಪಡಿಸಿಕೊಂಡಿದ್ದರು. ಸರ್ಕಾರಿ ನೌಕರರು ನಕಲಿ ದಾಖಲೆಗಳನ್ನು ಆಹಾರ ಇಲಾಖೆಗೆ ಸಲ್ಲಿಸಿ, ಅಕ್ರಮವಾಗಿ ಬಿಪಿಎಲ್ ಕಾರ್ಡ್ ಗಳನ್ನ ಪಡೆದಿದ್ದರು. ರಾಜ್ಯಾದ್ಯಂತ ಸುಮಾರು 5,160 ಸರ್ಕಾರಿ ನೌಕರರು, ವಾಮಮಾರ್ಗವಾಗಿ ಬಿಪಿಎಲ್ ಕಾರ್ಡ್ ಗಳನ್ನ ಪಡೆದಿದ್ದರು.

ಸರ್ಕಾರಿ ನೌಕರರ ಮೇಲೆ ವ್ಯಾಪಕವಾಗಿ ದೂರು ಬಂದ ಹಿನ್ನಲೆಯಲ್ಲಿ ನಿಸ್ಪಕ್ಷವಾಗಿ ಕಾರ್ಯಾಚರಣೆಗಿಳಿದ ಆಹಾರ ಇಲಾಖೆ, ರಾಜ್ಯಾದ್ಯಂತ 5,160 ಸರ್ಕಾರಿ ನೌಕರರು ಅಕ್ರಮವಾಗಿ ಬಿಪಿಎಲ್  ಕಾರ್ಡ್ ಗಳನ್ನ  ಹೊಂದಿರುವುದನ್ನು ಪತ್ತೆಮಾಡಿದೆ. ಇಂತಹ ನೌಕರರ ವಿರುದ್ಧ ಕ್ರಮ ಕೈಗೊಂಡು ಸುಮಾರು 1.73 ಕೋಟಿ ರೂಪಾಯಿಗೂ ಅಧಿಕ ದಂಡವನ್ನ ವಸೂಲಿ ಮಾಡಿ, ಅಕ್ರಮ ಬಿಪಿಎಲ್ ಕಾರ್ಡ್ ಗಳನ್ನ  ವಶಪಡಿಸಿಕೊಂಡಿದೆ.

ಆಹಾರ ಇಲಾಖೆಯ ನಿಯಮದ ಪ್ರಕಾರ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಗಳನ್ನ ಹೊಂದಿರಬಾರದು. ಆದರೆ ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಜಿಲ್ಲೆಗಳಲ್ಲಿ ಸರ್ಕಾರಿ ನೌಕರರು ಆಹಾರ ಇಲಾಖೆಗೆ ತಪ್ಪು ಮಾಹಿತಿ ನೀಡಿ, ಬಿಪಿಎಲ್ ಕಾರ್ಡ್ ಗಳನ್ನ ಪಡೆದಿದ್ದರು. ಇದು ಆಹಾರ ಇಲಾಖೆಯ ಗಮನಕ್ಕೆ ಬಂದ ತಕ್ಷಣ ಆಹಾರ ಇಲಾಖೆ ತುರ್ತಾಗಿ ಪ್ರಕಟಣೆ ನೀಡಿ, ಸರ್ಕಾರಿ ನೌಕರರು ತಾವು ಪಡೆದಿರುವ ಬಿಪಿಎಲ್ ಕಾರ್ಡ್ ಗಳನ್ನ ವಾಪಾಸ್ ಮಾಡಿ, ಇಲ್ಲವಾದಲ್ಲಿ ಪರಿಣಾಮ ಎದುರಿಸಿ ಅಂತಾ ಎಚ್ಚರಿಕೆಯನ್ನ ನೀಡಿತ್ತು.

ಆಹಾರ ಇಲಾಖೆಯ ಎಚ್ಚರಿಕೆ ಮಧ್ಯೆಯೂ ನೌಕರರು, ಕಾರ್ಡ್ ಗಳನ್ನ ಮರಳಿಸದೆ ಹಾಗೆ ಇಟ್ಟುಕೊಂಡಿದ್ದರು. ಇದೀಗ ಆಹಾರ ಇಲಾಖೆ ಅಂತವರನ್ನೆಲ್ಲಾ ಪತ್ತೆ ಹಚ್ಚಿ ದಾಖಲೆಯ ಪ್ರಮಾಣದಲ್ಲಿ ದಂಡ ವಸೂಲಿ ಮಾಡಿದೆ.

ದಾಳಿ ಕುರಿತು ಜಿಲ್ಲಾ ಆಹಾರ ಆಯೋಗದ ಸದಸ್ಯರಾದ ವಿ ವಿ ಪಾಟೀಲ್ ಮಾತನಾಡಿ, ಬಡವರಿಗಾಗಿ ಜಾರಿಗೆ ಬಂದ ಬಿಪಿಎಲ್ ಕಾರ್ಡ್ ನ್ನು ಸರ್ಕಾರಿ ನೌಕರರು ತಪ್ಪು ಮಾಹಿತಿ ಸಲ್ಲಿಸಿ ದುರುಪಯೋಗಡಿಸಿಕೊಂಡು, ಇದೀಗ ದಂಡ ತೆತ್ತಿದ್ದಾರೆ. ಆದರೆ ಇಂಥವರ ಮೇಲೆ ಕಠಿಣ ಕ್ರಮ ತೆಗೆದುಕೊಂಡಲ್ಲಿ ಮಾತ್ರ, ಇಂಥಹ ಪ್ರಕರಣಗಳು ಮರುಕಳಿಸುವುದಿಲ್ಲ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *