ಹೊಸ ಕೃಷಿ ಕಾಯ್ದೆ ಬಗ್ಗೆ ರೈತರಿಗೆ ತಿಳಿ ಹೇಳುವಲ್ಲಿ ವಿಫಲರಾಗಿದ್ದೇವೆ: ಗೋವಿಂದ ಕಾರಜೋಳ

Public TV
3 Min Read

ಬಾಗಲಕೋಟೆ: ರೈತರ ಆದಾಯ ದ್ವಿಗುಣಗೊಳಿಸಬೇಕು. ರೈತರಿಗೆ ಅನುಕೂಲ ಆಗಬೇಕೆಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮೂರು ಕೃಷಿ ಕಾಯ್ದೆಗಳನ್ನು ತಂದಿದ್ರು. ಆದ್ರೆ ಎಲ್ಲೊ ಒಂದು ಕಡೆ ಹೊಸ ಕಾಯ್ದೆ ಬಗ್ಗೆ ರೈತರಿಗೆ ತಿಳಿ ಹೇಳುವಲ್ಲಿ ವಿಫಲ ಆಗಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಷಾದ ವ್ಯಕ್ತಪಡಿಸಿದರು.


ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ಹೊಸ ಕೃಷಿ ಕಾಯ್ದೆಗಳ ಬಗ್ಗೆ ರೈತರಿಗೆ ತಿಳಿಸಿ ಹೇಳುವಲ್ಲಿ ನಾವು ವಿಫಲರಾಗಿದ್ದೇವೆ. ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ಒಬ್ಬ ಪೂರ್ಣಾವಧಿ ಅಧ್ಯಕ್ಷ ಸಿಗದ ಹೀನಾಯ ಸ್ಥಿತಿಗೆ ಬಂದು ತಲುಪಿದೆ. ಏಳು ವರ್ಷದ ಹಿಂದೆ ಮೋದಿ ಅವರು ಕೈ ಮುಕ್ತ ಭಾರತ ಆಗುತ್ತೆ ಎಂದು ಹೇಳಿದರು. ಆಗ ಅವರಿಗೆ ಕೆಲವರು ಗೇಲಿ ಮಾಡಿದರು. ಇವ್ರೇನು ಭವಿಷ್ಯ ಹೇಳ್ತಾರಾ? ಕಾಲಜ್ಞಾನಿಗಳಾ ಅಂದಿದ್ರು. ಈಗ ಅವರ ಮಾತು ನಿಜ ಆಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಮಂಡ್ಯದಲ್ಲಿ ಹೆರಾಯಿನ್, ಅಫೀಮು ದಂಧೆ – ಆರೋಪಿಗಳು ಅರೆಸ್ಟ್

ಇನ್ನೊಂದು ವರ್ಷದಲ್ಲಿ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಲ್ಲ. ಕಾಂಗ್ರೆಸ್ ಮುಕ್ತ ಭಾರತ ಆಗುತ್ತೆ. ಕಾಂಗ್ರೆಸ್ ನೀತಿಗೆಟ್ಟ ನಡವಳಿಕೆ ಬಗ್ಗೆ ಮಾಧ್ಯಮಗಳ ಮೂಲಕ ಜನರಿಗೆ ತಿಳಿಸಲು ಇಷ್ಟಪಡುತ್ತೇನೆ. ಕಾಂಗ್ರೆಸ್ ಅವರು ನಮ್ಮ ಪ್ರಧಾನಿ ಮೋದಿ ಬಗ್ಗೆ, ರಾಜ್ಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಬಗ್ಗೆ, ಸಿಎಂ ಬಗ್ಗೆ ನಾಲಿಗೆ ಮೇಲೆ ಹತೋಟಿ ಇಲ್ಲದೇ, ಬಾಯಿಗೆ ಬಂದಂಗೆ ಟೀಕೆ, ಟಿಪ್ಪಣಿ ಮಾಡುತ್ತಿದ್ದಾರೆ. ಅವರ ಬಳಸುತ್ತಿರುವ ಭಾಷೆ ಸಂಸದೀಯ ಭಾಷೆ ಅಲ್ಲ. ಅಂತಹ ಒಂದು ಕೆಟ್ಟ ನಡವಳಿಕೆ ನಾವು ಕಾಣುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ ಮಾಡೋಕೆ ಇಷ್ಟ ಪಡುತ್ತೇನೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ರೈತರ ಆದಾಯ ಹೆಚ್ಚಾಗಬೇಕು. ಬೆಳೆಗೆ ಯೋಗ್ಯ ಬೆಲೆ ಸಿಗಬೇಕು, ರೈತರು ನೆಮ್ಮದಿಯಿಂದ ಇರಬೇಕು. ರೈತರಿಗೂ ಪಿಂಚಣಿ ಸಿಗಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಈ ದೇಶದಲ್ಲಿ ಮೊದಲ ಬಾರಿಗೆ ಮೋದಿ ಅವರು ರೈತರಿಗೆ ಪರೋಕ್ಷವಾಗಿ ಪಿಂಚಣಿ ಕೊಡುವ ಕೆಲಸ ಮಾಡುತ್ತಿದ್ದಾರೆ. ಇದನ್ನ ಕಾಂಗ್ರೆಸ್ ಅವರು ಮೆಚ್ಚಬೇಕಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದ 75 ವರ್ಷದಲ್ಲಿ 60 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷ ಏನೂ ಮಾಡಿಲ್ಲ. ರೈತರ ದೇಶದ ಬೆನ್ನೆಲುಬು ಅನ್ನುತ್ತಲೇ ಅದನ್ನ ಮುರಿದಿದ್ದಾರೆ ಎಂದು ಟೀಕಿಸಿದರು.

ಕೊರೊನಾ, ಪ್ರವಾಹ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಎರಡು ವರ್ಷ ಮಾಡಿದ ಕಾರ್ಯ ಮೆಚ್ಚದೆ, ಕೈ ನಾಯಕರು ಆರೋಪ ಮಾಡುತ್ತಿದ್ದಾರೆ. ನಾವು ಮಾಡಿದ ಕೆಲಸಗಳು ಕೈ ನಾಯಕರಿಗೆ ಕಾಣುತ್ತಿಲ್ಲ. ಎಲ್ಲೋ ಒಂದು ಕಡೆ ಕೈ ನಾಯಕರು ಹತಾಶರಾಗಿ ನಾವು ಮಾಡುವ ಕಾರ್ಯವನ್ನು ಟೀಕೆ ಮಾಡುತ್ತಿದ್ದಾರೆ. 60 ವರ್ಷಗಳ ಆಡಳಿತದಲ್ಲಿ ಅವರ ಸಾಧನೆ ಶೂನ್ಯ. ಏನೂ ಮಾಡದೇ ತೊರಿಸೋದಿಕ್ಕೆ ಆಗದಿದ್ದಾಗ ದೇಶದ ಉದ್ದಗಲಕ್ಕೂ ದಲಿತರು, ಹಿಂದುಳಿದವರು ಕಾಂಗ್ರೆಸ್ ಬಿಟ್ಟು ಮೋದಿ ಅವರ ಕೈ ಬಲಪಡಿಸುವ ಕೆಲಸ ಮಾಡ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ರಸ್ತೆಯಲ್ಲಿದ್ದ ಸಸಿ ಕಿತ್ತುಕೊಂಡು ನೆಟ್ಟಿಗರ ಕಣ್ಣಿಗೆ ಗುರಿಯಾದ ಮಹಿಳೆಯರು – ವೀಡಿಯೋ ವೈರಲ್

ಕಾಂಗ್ರೆಸ್ ಅವರಿಗೆ ದೀನದಲಿತರು, ಅಲ್ಪಸಂಖ್ಯಾತರ ಬಗ್ಗೆ ಅವಹೇಳನಕಾರಿ ಮಾತನಾಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ದಲಿತರ ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ಹೇಳ್ತಾರೆ. ಈ ಮಾತು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತದಲ್ಲ. ಅವರು ಮಾಜಿ ಮುಖ್ಯಮಂತ್ರಿಗಳು, ಪ್ರತಿಪಕ್ಷದ ನಾಯಕರಿದ್ದಾರೆ. ಒಬ್ಬ ಹಿರಿಯ ರಾಜಕಾರಣಿಗಳಾಗಿ ಈ ರೀತಿ ಮಾತನಾಡೋದು ಅವರಿಗೆ ಶೋಭೆ ತರುವಂತದಲ್ಲ ಎಂದು ಸಲಹೆ ನೀಡಿದರು.

ನಮ್ಮ ಬಗ್ಗೆ ಹಗುರವಾಗಿ ಮಾತನಾಡೋದು ಸರಿಯಲ್ಲ. ಈ ದೇಶದ ದೀನದಲಿತರು, ಅಲ್ಪಸಂಖ್ಯಾತರು ಕಾಂಗ್ರೆಸ್ ನ ಗುಲಾಮರಲ್ಲ. ಅಲ್ಪಸಂಖ್ಯಾತರು, ದೀನದಲಿತರಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾವಂತರು ಹೆಚ್ಚಾದ ಮೇಲೆ ಕಾಂಗ್ರೆಸ್ ಮಾಡಿದ ದ್ರೋಹವನ್ನು ತಿಳಿದುಕೊಳ್ಳುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಈಗ ಅವಸಾನದ ಅಂಚಿನಲ್ಲಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *