ರೈತರ ಧ್ವನಿಯಾಗಿ ಸಮ್ಮಿಶ್ರ ಸರ್ಕಾರ ಕೆಲಸ ಮಾಡಲಿದೆ: ವಜೂಭಾಯಿ ವಾಲಾ

Public TV
3 Min Read

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮೊದಲ ಅಧಿವೇಶನ ಇಂದು ಆರಂಭವಾಗಿದೆ. ನಿಯಮದಂತೆ ಹೊಸ ವಿಧಾನಸಭೆಯ ಮೊದಲ ಅಧಿವೇಶನದ ಮೊದಲ ದಿನದಂದು ರಾಜ್ಯಪಾ ವಿ.ಆರ್.ವಾಲಾ ಜಂಟಿ ಸದನಗಳಾದ ವಿಧಾನಸಭೆ-ವಿಧಾನಪರಿಷತ್ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದರು.

ಸ್ಪೀಕರ್ ರಮೇಶ್ ಕುಮಾರ್, ರಾಜ್ಯಪಾಲರನ್ನು ವಿಧಾನಸಭೆಗೆ ಕರೆತಂದರು. ರಾಷ್ಟ್ರಗೀತೆ ಮೊಳಗಿದ ಬಳಿಕ ಜಂಟಿ ಸದನ ಉದ್ದೇಶಿಸಿ ಭಾಷಣ ಆರಂಭಿಸಿದ ರಾಜ್ಯಪಾಲರು ಮೊದಲಿಗೆ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾದ ಎಲ ನಾಯಕರಿಗೂ ಶುಭಕೋರಿದರು. ಎಲ್ಲ ಶಾಸಕರು ಕರ್ನಾಟಕದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಿದೆ. ಎಲ್ಲ ಹಿರಿಯ ಶಾಸಕರು, ಮೊದಲ ಬಾರಿಗೆ ಆಯ್ಕೆಯಾಗಿರುವ ಕಿರಿಯ ಶಾಸಕರಿಗೆ ಮಾದರಿಯಾಗಿ, ಆಡಳಿತದಲ್ಲಿ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

ರಾಜ್ಯ ಸರ್ಕಾರ ರೈತರ ಧ್ವನಿಯಾಗಿ ಆಡಳಿತ ನಡೆಸಲಿದೆ. ನಮ್ಮ ಸರ್ಕಾರ ಮೊದಲು ನಾಡಿನ ರೈತ ಬಾಂಧವರಿಗೆ ಆಧ್ಯತೆ ನೀಡುತ್ತದೆ. ಸರ್ಕಾರ ರೈತರ ಸಮಸ್ಯೆಗಳನ್ನು ಪರಿಹರಿಸಲು ಹಳೆಯ ಯೋಜನೆಗಳೊಂದಿಗೆ ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರಲು ಬದ್ಧವಾಗಿದೆ. ಕಾಡು ಪ್ರಾಣಿಗಳಿಂದ ರೈತರ ಬೆಳೆ ಹಾಳಾದ್ರೆ ಸರ್ಕಾರ ಬೆಂಬಲ ನೀಡಲಿದೆ. ಕೃಷಿಯಲ್ಲಿ ಆಧುನೀಕರಣ, ತಂತ್ರಜ್ಞಾನದ ಬಳಕೆ, ಬೆಂಬಲ ಬೆಲೆ ಸೇರಿದಂತೆ ಹಲವು ಯೋಜನೆಗಳು ಜಾರಿಯಾಗಲಿದ್ದು, ನಾಡಿನ ರೈತರು ಆತ್ಮಹತ್ಯೆಗೆ ಶರಣಾಗಾಬಾರದು ಎಂದು ಹೇಳಿದರು.

ಹೈದರಾಬಾದ್ ಕರ್ನಾಟಕ ಸೇರಿದಂತೆ ಅಖಂಡ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧ. ರಾಜ್ಯದ ಮಹಿಳೆಯರ ಭದ್ರತೆಗಾಗಿ ನಿರ್ಭಯಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಸೈಬರ್ ಕ್ರೈಂ ವಿಭಾಗದ ಅಪರಾಧಗಳ ತಡೆಗೆ ಸರ್ಕಾರ ಶಿಸ್ತಿನಿಂದ ಕೆಲಸ ಮಾಡಲಿದೆ. ಗ್ರಾಮೀಣ, ನಗರ ರಸ್ತೆ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಲಾಗುವುದು. ಜಿಲ್ಲಾ, ತಾಲೂಕುಗಳಲ್ಲಿ ವಿಡಿಯೋ ಕಾನ್ಫೆರೆನ್ಸ್ ಗಳ ಮೂಲಕ ನಾಯಕರು ಅಧಿಕಾರಿಗಳೊಂದಿಗೆ ಸಂವಹನ ಮಾಡಲಿದ್ದಾರೆ ಎಂದರು.

2021 ರೊಳಗೆ ನಮ್ಮ ಮೆಟ್ರೋ ಕಾಮಗಾರಿ ಪೂರ್ಣಗೊಳಿಸಲಾಗುವುದು. ಬೆಂಗಳೂರು ನಗರದಲ್ಲಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ, ಮೆಟ್ರೋ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಮಹಿಳೆಯ ಭದ್ರತೆಗಾಗಿ ಬೆಂಗಳೂರಿನ ಬಸ್‍ಗಳಲ್ಲಿ ಉಚಿತ ವೈಫೈ ಸೌಲಭ್ಯ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ರು.

ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ನೀಡುವಿಕೆ, ಬಂಜಾರ ಸಮುದಾಯದ ಅಭಿವೃದ್ಧಿ, ಹಿಂದುಳಿದ ವರ್ಗಗಳ ಯುವಕರ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಹೊಸ ಯೋಜನೆಗಳು, ಉತ್ತಮ ಶಿಕ್ಷಣದ ಮೂಲಕ 2030 ರೊಳಗೆ ಬಾಲ ಕಾರ್ಮಿಕ ಮುಕ ರಾಜ್ಯ ನಿರ್ಮಾಣ, ಈ ಹಿನ್ನೆಲೆಯಲ್ಲಿ ಶಿಕ್ಷಣದಲ್ಲಿ ಬದಲಾವಣೆ ಗರ್ಭಿಣಿಯರಿಗೆ ಸಹಾಯ ಧನ, ಪ್ಲಾಸ್ಟಿಕ್ ನಿಯಂತ್ರಣಕ್ಕಾಗಿ ಕಠಿಣ ಕಾನೂನುಗಳನ್ನು ಸರ್ಕಾರ ಜಾರಿ ಮಾಡಲಿದೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.

ಮಲೀನಗೊಂಡಿರುವ ನದಿಗಳ ಅಭಿವೃದ್ಧಿ, ನೀರಾವರಿ ಯೋಜನೆಗಳಿಗೆ ಸರ್ಕಾರ ಬದ್ಧ. ಆರೋಗ್ಯ ಕರ್ನಾಟಕ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ, ಎಲ್ಲ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕ್ಯಾನ್ಸರ್ ವಿಭಾಗ ತೆರೆಯಲಾಗುವುದು. ರೇಷನ್ ಕಾರ್ಡ್‍ಗಾಗಿ ಆನ್‍ಲೈನ್ ಸಲ್ಲಿಸುವ ಯೋಜನೆ ಜಾರಿ ಮಾಡಲಾಗಿದೆ. ಸೌರ ವಿದ್ಯುತ್, ಅಣು ವಿದ್ಯುತ್ ಘಟಕಗಳ ಅಭಿವೃದ್ಧಿಯ ಮೂಲಕ ಹೆಚ್ಚಿನ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗುವುದು ಎಂದರು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಂಗಳವಾರ ಮತ್ತು ಬುಧವಾರ ಎರಡೂ ಸದನಗಳಲ್ಲಿ ಪ್ರತ್ಯೇಕವಾಗಿ ಚರ್ಚೆ ಸಾಗಲಿದೆ. ರೈತರ ಸಾಲ ಮನ್ನಾ, ಸಿದ್ದರಾಮಯ್ಯ ಸರ್ಕಾರದ ಜನಪ್ರಿಯ ಯೋಜನೆಗಳ ಮುಂದುವರಿಕೆಯ ಒತ್ತಡದ ನಡುವೆ ಗುರುವಾರ ಕುಮಾರಸ್ವಾಮಿ ವಿಧಾನಸಭೆಗೆ ಹೊತ್ತು ಒಯ್ಯಲಿರುವ ಸೂಟ್‍ಕೇಸ್ ಸಾಕಷ್ಟು ಕುತೂಹಲ ಕೆರಳಿಸಿದೆ. ಅಧಿವೇಶನದ ಕೊನೆಯ ದಿನವಾಗಿರೋ ಜುಲೈ 12ರಂದು ಬಜೆಟ್‍ನ್ನು ವಿಧಾನಸಭೆ ಅಂಗೀಕರಿಸಲಿದೆ. ಅಧಿವೇಶನದಲ್ಲಿ ಒಂದೂವರೆ ತಿಂಗಳ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿಯನ್ನೇ ಪ್ರಸ್ತಾಪಿಸಿ ಬಿಜೆಪಿ ಸದನದೊಳಗೆ ಹೋರಾಟ ತೀವ್ರಗೊಳಿಸುವ ಸಾಧ್ಯತೆಯಿದೆ.

ಈಗಾಗಲೇ ವಿಶ್ವಾಸಮತಯಾಚನೆ ವೇಳೆ 52 ಗಂಟೆ ಸಿಎಂ ಆಗಿದ್ದ ಯಡಿಯೂರಪ್ಪ ಮತ್ತು ಸಿಎಂ ಕುಮಾರಸ್ವಾಮಿ ಮಾತಿನ ಏಟು-ಎದಿರೇಟು ರೋಚಕತೆ ಹುಟ್ಟಿಸಿತ್ತು. ಸಾಲ ಮನ್ನಾ ಮತ್ತು ಸಮ್ಮಿಶ್ರ ಸರ್ಕಾರದ ಬಾಳಿಕೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಯನ್ನು ಊಲ್ಲೇಖಿಸಿ ಬಿಜೆಪಿ ಮತ್ತೆ ಮುಗಿಬೀಳುವ ಸಾಧ್ಯತೆಯೂ ಇದೆ.

Share This Article
Leave a Comment

Leave a Reply

Your email address will not be published. Required fields are marked *