44ನೇ ಚೆಸ್ ಒಲಿಂಪಿಯಾಡ್ ಟಾರ್ಚ್ ರಿಲೇ ಸ್ವಾಗತಿಸಿದ ರಾಜ್ಯಪಾಲರು

Public TV
3 Min Read

ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜಭವನದಲ್ಲಿ 44ನೇ ಚೆಸ್ ಒಲಿಂಪಿಯಾಡ್ ಟಾರ್ಚ್ ರಿಲೇಯನ್ನು (ಕ್ರೀಡಾ ಜ್ಯೋತಿಯನ್ನು) ಸ್ವಾಗತಿಸಿದರು.

ಕೇಂದ್ರ ಹಾಗೂ ರಾಜ್ಯ ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವಕೇಂದ್ರ, ಎನ್‍ಎಸ್‍ಎಸ್‍ಸಿ, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್, ಎನ್‍ಎಸ್‍ಎಸ್ ಜಂಟಿಯಾಗಿ ರಾಜಭವನದ ಗಾಜಿನಮನೆಯಲ್ಲಿ ಆಯೋಜಿಸಿದ್ದ 44 ನೇ ಚೆಸ್ ಒಲಿಂಪಿಯಾಡ್ ಟಾರ್ಚ್ ರಿಲೇ ಸ್ವಾಗತ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, 44ನೇ ವಿಶ್ವ ಚೆಸ್ ಒಲಿಂಪಿಯಾಡ್ ಜುಲೈ 28 ರಿಂದ ಆಗಸ್ಟ್ 10 ರವರೆಗೆ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರ ಜನ್ಮಸ್ಥಳದಲ್ಲಿ ನಡೆಯಲಿದೆ. ಏಷ್ಯಾ ಖಂಡದಲ್ಲಿ 30 ವರ್ಷಗಳ ನಂತರ ಹಾಗೂ ಭಾರತ ದೇಶದಲ್ಲಿ ಮೊದಲ ಬಾರಿಗೆ ತಮಿಳುನಾಡು ರಾಜ್ಯದ ಮಹಾಬಲಿಪುರಂನಲ್ಲಿ ನಡೆಯಲಿರುವ 44ನೇ ಚೆಸ್ ಒಲಿಂಪಿಯಾಡ್ ಟಾರ್ಚ್ ರಿಲೇಗೆ ಕರ್ನಾಟಕದಲ್ಲಿ ಸ್ವಾಗತ ಕೋರುತ್ತೇನೆ ಎಂದರು.

ಭಾರತದ ಚೆಸ್ ಕ್ಯಾಪಿಟಲ್ ಎಂದು ಕರೆಯಲ್ಪಡುವ ಚೆನ್ನೈನಲ್ಲಿ ವಿಶ್ವ ಚೆಸ್ ಚಾಂಪಿಯನ್‍ಶಿಪ್ ಅನ್ನು 2013 ರಲ್ಲಿ ಆಯೋಜಿಸಲಾಗಿತ್ತು. ಒಲಿಂಪಿಕ್ ಕ್ರೀಡಾಕೂಟದಂತೆ, ಚೆಸ್ ಒಲಿಂಪಿಯಾಡ್‍ನ ಟಾರ್ಚ್ ರಿಲೇ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯಿಂದ ಮೊದಲ ಬಾರಿಗೆ ಪ್ರಾರಂಭಿಸಿದರು. ಇದನ್ನು ಪ್ರಾಚೀನ ಭಾರತದಲ್ಲಿ ಚದುರಂಗ ಎಂದು ಆಡಲಾಗುತ್ತಿತ್ತು. ಈ ಆಟವು ಪ್ರಸ್ತುತ ಪ್ರಪಂಚದ ಮೂಲೆ ಮೂಲೆಗಳಲ್ಲಿ ಚೆಸ್ ರೂಪದಲ್ಲಿ ಪ್ರಚಲಿತದಲ್ಲಿದೆ. ಚೆಸ್ ಒಂದು ಆಟವಾಗಿದ್ದು ಇದರಲ್ಲಿ ಹೆಚ್ಚಿನ ಬುದ್ಧಿವಂತಿಕೆಯನ್ನು ಬಳಸಲಾಗುತ್ತದೆ ಎಂದರು.

ಚೆಸ್ ಆಟದಲ್ಲಿ, ಕೋಟೆಯ ಮೂಲಕ ಮುಂಭಾಗದ ಆಟಗಾರನನ್ನು ಸುತ್ತುವರಿದಿರುವುದು ಮತ್ತು ಸೋಲಿಸುವುದು, ಕಾರ್ಯತಂತ್ರವನ್ನು ರೂಪಿಸಲು ನಮಗೆ ಸ್ಫೂರ್ತಿ ನೀಡುತ್ತದೆ. ಈ ಕ್ರೀಡೆಯಲ್ಲಿ ನಮ್ಮ ಅನೇಕ ಆಟಗಾರರು ವಿಶ್ವ ಮಟ್ಟದಲ್ಲಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಇದರಲ್ಲಿ 5 ಬಾರಿಯ ವಿಶ್ವ ಚಾಂಪಿಯನ್ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ, ಪದ್ಮವಿಭೂಷಣ ವಿಶ್ವನಾಥನ್ ಆನಂದ್ ಅವರ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಲಾಗಿದೆ.

ಭಾರತದ ಮೊದಲ ಮಹಿಳಾ ಗ್ರೇಡ್‍ಮಾಸ್ಟರ್‍ಗಳಾದ ಸುಬ್ರಮಣ್ಯಂ ವಿಜಯಲಕ್ಷ್ಮಿ ಮತ್ತು ಕೋನೇರು ಹಂಪಿ ಅವರುಗಳು ಈ ಆಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ 16 ವರ್ಷದ ಗ್ರೇಡ್ ಮಾಸ್ಟರ್ ರಮೇಶ್ ಬಾಬು ಪ್ರಗ್ನಾನಂದ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾಲ್ರ್ಸನ್ ಅವರನ್ನು ಸೋಲಿಸುವ ಮೂಲಕ ದೇಶಕ್ಕೆ ಗೌರವ ತಂದಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಸಿ.ಎನ್.ಮಂಜುನಾಥ್‌ ಮುಂದುವರಿಕೆ – ಸೇವಾವಧಿ 1 ವರ್ಷ ವಿಸ್ತರಣೆ

ಭಾರತದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವ ಸಲುವಾಗಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕ್ರೀಡಾ ಪ್ರಾಧಿಕಾರವು ಪರಿಣಾಮಕಾರಿ ಯೋಜನೆಗಳನ್ನು ಸಿದ್ಧಪಡಿಸಿ, ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು.

2024ರಲ್ಲಿ ಪ್ಯಾರಿಸ್‍ನಲ್ಲಿ ನಡೆಯಲಿರುವ ಒಲಿಂಪಿಕ್ಸ್‍ನಲ್ಲಿ ಭಾರತದ ಆಟಗಾರರು ಯಶಸ್ಸಿನ ಪತಾಕೆಯನ್ನು ಬೀಸುವ ಮೂಲಕ ವಿಶ್ವದಲ್ಲಿ ದೇಶದ ಹೆಸರನ್ನು ಬೆಳಗುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ಸ್ವಾತಂತ್ರ್ಯದ 75ನೇ ವರ್ಷಾಚರಣೆಯನ್ನು ಅಮೃತ ಮಹೋತ್ಸವ ಎಂದು ಆಚರಿಸುತ್ತಿರುವ ಇಂತಹ ಸಂದರ್ಭದಲ್ಲಿ 44ನೇ ಚೆಸ್ ಒಲಿಂಪಿಯಾಡ್ ಆಯೋಜಿಸಿರುವುದು ನಮಗೆ ಹೆಮ್ಮೆಯ ಸಂಗತಿ. ನನಗೆ ಸಂಪೂರ್ಣ ನಂಬಿಕೆಯಿದೆ, ಈ ಕಾರ್ಯಕ್ರಮವು ದೇಶವು ವಿಶ್ವದಾದ್ಯಂತ ಹೆಮ್ಮೆಪಡುವಂತೆ ಮಾಡುತ್ತದೆ ಎಂದ ಅವರು, ನೆಹರು ಯುವ ಕೇಂದ್ರ ಸಂಘಟನೆ, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಮತ್ತು ಎನ್‍ಎಸ್‍ಎಸ್ ಗೆ ಅಭಿನಂದನೆಗಳನ್ನು ಸಲ್ಲಿಸಿದರು.

ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ.ನಾರಾಯಣಗೌಡ, ವಿಧಾನ ಪರಿಷತ್ ಸದಸ್ಯ, ಕರ್ನಾಟಕ ಒಲಂಪಿಕ್ ಸಂಸ್ಥೆಯ ಅಧ್ಯಕ್ಷ ಕೆ.ಗೋವಿಂದರಾಜ್, ಡಾ. ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆಯುಕ್ತ ಡಾ. ಗೋಪಾಲಕೃಷ್ಣ, ನೆಹರು ಯುವ ಕೇಂದ್ರ ಸಂಘಟನೆಯ ದಕ್ಷಿಣ ವಲಯದ ಪ್ರಾದೇಶಿಕ ನಿರ್ದೇಶಕ ಎಂ.ಎನ್. ನಟರಾಜ್, ಕರ್ನಾಟಕ ರಾಜ್ಯದ ಎನ್‍ಎಸ್‍ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಶನ್‍ನ ಅಧ್ಯಕ್ಷ, ಡಿಪಿ ಅನಂತ, ಮಾಸ್ಟರ್ ಸ್ಟೆನಿ, ತೇಜ್ ಕುಮಾರ್ ಮತ್ತು ಗಿರೀಶ್ ಕೌಶಿಕ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *