ಮೈಕ್ರೋ ಫೈನಾನ್ಸ್ ದೌರ್ಜನ್ಯಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್: ವಿಜಯೇಂದ್ರ

Public TV
3 Min Read

– ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ

ಬೆಂಗಳೂರು: ಜನರ ರಕ್ಷಣೆಗೆ ಬರಬೇಕಾದ ರಾಜ್ಯ ಸರ್ಕಾರ ದೌರ್ಜನ್ಯ ಎಸಗುವ ಮೈಕ್ರೋ ಫೈನಾನ್ಸ್ (Microfinance) ಸಂಸ್ಥೆಗಳಿಗೆ ಸಂಜೆ 5 ಗಂಟೆ ತನಕ ವಸೂಲಿಗೆ ಹೋಗಲು ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y Vijayendra) ಕಿಡಿಕಾರಿದ್ದಾರೆ.

ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು. ಈ ವೇಳೆ ಬೆಳಿಗ್ಗೆ 10 ರಿಂದ 5ಗಂಟೆ ವರೆಗೆ ಮೈಕ್ರೋ ಫೈನಾನ್ಸ್‌ ಸಿಬ್ಬಂದಿಗೆ ಹೋಗಿ ಎಂಬ ಮಾತನ್ನು ರಾಜ್ಯ ಸರ್ಕಾರ ಹೇಳುತ್ತಿರುವುದು ದುರ್ದೈವದ ಸಂಗತಿ. ಒಂದು ಕಡೆ ತಮ್ಮ ಗ್ಯಾರಂಟಿಗಳಿಂದ ರಾಜ್ಯದಲ್ಲಿ ಜನರು ಸಮೃದ್ಧರಾಗಿದ್ದಾರೆ. ಆಲ್ ಈಸ್ ವೆಲ್ ಎಂದು ಹೇಳಿಕೊಳ್ಳುತ್ತಾರೆ. ಮತ್ತೊಂದು ಕಡೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದೌರ್ಜನ್ಯ ಮತ್ತು ಭರಾಟೆಯಿಂದ ರಾಜ್ಯದಲ್ಲಿ ಬಡವರು, ಮಹಿಳೆಯರು, ಕೂಲಿ ಕಾರ್ಮಿಕರು ತತ್ತರಿಸಿ ಹೋಗಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ದೌರ್ಜನ್ಯಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್: ವಿಜಯೇಂದ್ರ

ಮೈಕ್ರೋ ಫೈನಾನ್ಸ್ ಹಾವಳಿಯ ಕುರಿತು ಬಹಳಷ್ಟು ಚರ್ಚೆ ಆಗುತ್ತಿದೆ. ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್ ವಸೂಲಾತಿ ದೌರ್ಜನ್ಯದಿಂದ ಭಯಭೀತರಾಗಿ ಹಣ ಮರುಪಾವತಿ ಮಾಡಲು ಸಾಧ್ಯವಾಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವ್ಯೂಹಕ್ಕೆ ಬಡವರು ಸಿಲುಕಿದ್ದಾರೆ. ರಾಜ್ಯ ಸರ್ಕಾರದ ದೌರ್ಜನ್ಯಕ್ಕೆ ಅವಕಾಶ ಕೊಡುವುದನ್ನು ಬದಿಗಿಟ್ಟು ಮುಗ್ಧ ಬಡಜನರ, ರೈತರ ರಕ್ಷಣೆಗೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅನುದಾನ ಇಲ್ಲದೇ ಶಾಸಕರು ಅಭಿವೃದ್ಧಿ ರಹಿತ ಕ್ಷೇತ್ರದೊಂದಿಗೆ ಕೈಕಟ್ಟಿ ಕುಳಿತಿರುವ ದಾರುಣ ಪರಿಸ್ಥಿತಿ ಇದೆ. ರೈತರ ಗೋಳನ್ನು ಸರ್ಕಾರ ಕೇಳುತ್ತಿಲ್ಲ. ಹಗಲು ದರೋಡೆ, ಕೊಲೆ, ಅತ್ಯಾಚಾರ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿವೆ. ಇದಲ್ಲದೇ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ರಾಜ್ಯದಲ್ಲಿ ಚುನಾಯಿತ ಸರ್ಕಾರ, ಮುಖ್ಯಮಂತ್ರಿಗಳು ಇದ್ದಾರಾ? ಸರ್ಕಾರ ರಾಜ್ಯದ ಅಭಿವೃದ್ಧಿ ಸೇರಿ ಎಲ್ಲವನ್ನೂ ಮರೆತಿದೆ. ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದೆ ಎಂದಿದ್ದಾರೆ.

ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ: ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಏರುವ ವಿಶ್ವಾಸವಿದೆ. 9-10 ಸಮೀಕ್ಷೆಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದಂತೆ 27 ವರ್ಷಗಳ ನಂತರ ದೆಹಲಿ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಗ್ಯಾರಂಟಿಗಳ ಭ್ರಮೆಯಲ್ಲಿದ್ದ ಆಮ್ ಆದ್ಮಿ ಪಾರ್ಟಿಗೆ ತಕ್ಕ ಪಾಠವನ್ನು ಆ ರಾಜ್ಯದ ಜನರು ಕಲಿಸುತ್ತಾರೆ. ಭ್ರಷ್ಟಾಚಾರದ ವಿರುದ್ಧ ಆಂದೋಲನ ಮಾಡಿ, ರಾಜ್ಯದ ಚುಕ್ಕಾಣಿ ಹಿಡಿದ ಆಮ್ ಆದ್ಮಿ ಪಾರ್ಟಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ. ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸ ನಮಗಿದೆ ಎಂದಿದ್ದಾರೆ.

ಕೇಂದ್ರದ ಅತ್ಯುತ್ತಮ ಬಜೆಟ್: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅತ್ಯುತ್ತಮ ಬಜೆಟ್ ಮಂಡನೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತದ ಕನಸು ನನಸಾಗುವ ನಿಟ್ಟಿನಲ್ಲಿ ಅಭಿವೃದ್ಧಿಗೆ ಪೂರಕವಾದ, ಬಡವರು, ರೈತರು, ಯುವಕರು, ಮಹಿಳೆಯರ ಪರವಾಗಿ ಒಂದು ಅತ್ಯುತ್ತಮ ಬಜೆಟ್ ಇದಾಗಿದೆ ಎಂದಿದ್ದಾರೆ.

12 ಲಕ್ಷದವರೆಗೆ ಆದಾಯ ತೆರಿಗೆ ಕಟ್ಟುವಂತಿಲ್ಲ ಎಂಬ ನಿರ್ಧಾರದಿಂದ ಮಧ್ಯಮ ವರ್ಗದವರಿಗೆ ಬಹಳಷ್ಟು ಅನುಕೂಲವಾಗಿದೆ. ಜನರ ಬಹುವರ್ಷಗಳ ನಿರೀಕ್ಷೆಗೆ ತಕ್ಕಂತೆ ಬಜೆಟ್ ಮಂಡಿಸಿದ್ದು, ಇದು ಪ್ರತಿಯೊಬ್ಬರೂ ಸಂತಸ ಪಡುವ ವಿಚಾರವಾಗಿದೆ. ಸಿದ್ದರಾಮಯ್ಯನವರಿಂದ ಕೇಂದ್ರದ ಬಜೆಟ್ ಬಗ್ಗೆ ಒಳ್ಳೆಯ ಮಾತು ಕೇಳಲು ಸಾಧ್ಯವಿಲ್ಲ. ಸಹಜವಾಗಿ ಅವರು ಟೀಕೆಗಳನ್ನು ಮಾಡಿದ್ದಾರೆ. ಕರ್ನಾಟಕವೂ ಸೇರಿದಂತೆ ದೇಶದ ಪ್ರತಿಯೊಂದು ರಾಜ್ಯದಲ್ಲೂ ಸಹ ಈ ಬಜೆಟ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ಕುರಿತ ದೇವೇಗೌಡರ ಹೇಳಿಕೆ ಸರಿಯಾಗಿದೆ: ಛಲವಾದಿ ನಾರಾಯಣಸ್ವಾಮಿ

Share This Article