ಸರ್ಕಾರದಿಂದಲೇ ಜನಸಾಮಾನ್ಯರಿಗೆ ಸಾಲ ನೀಡುವ ಕೆಲಸಗಳಾಗಬೇಕು: ಜಗದೀಶ್ ಶೆಟ್ಟರ್

Public TV
2 Min Read

ಹುಬ್ಬಳ್ಳಿ: ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಿರುವ ಮೈಕ್ರೋ ಫೈನಾನ್ಸ್ (Microfinance) ಕಂಪನಿ ಸಿಬ್ಬಂದಿ ಕಿರುಕುಳದಿಂದ ಜನರು ಬೇಸತ್ತಿದ್ದಾರೆ. ಹೀಗಾಗಿ, ಸರ್ಕಾರದಿಂದಲೇ ಜನಸಾಮಾನ್ಯರಿಗೆ ಸಾಲ ನೀಡುವ ಕೆಲಸಗಳಾಗಬೇಕು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಹೇಳಿದರು.

ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ವಿಚಾರವಾಗಿ ಬಡ ಮತ್ತು ಮಧ್ಯಮವರ್ಗದ ಜನರು ತುರ್ತು ಸಂದರ್ಭದಲ್ಲಿ ಸಾಲ ತೆಗೆದುಕೊಂಡಿರುತ್ತಾರೆ. ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿ ಜನಸಾಮಾನ್ಯರಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ.

ಈ ಬಗ್ಗೆ ನಿನ್ನೆ ಸಿಎಂ ಸಿದ್ದರಾಮಯ್ಯ (Siddaramaiah) ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದ್ದ ಕಾನೂನಿನಲ್ಲೇ ಕ್ರಮಕೈಗೊಳ್ಳಬಹುದಿತ್ತು. ಹೊಸ ಕಾನೂನು ತರುವ ಅವಶ್ಯಕತೆ ಇರಲಿಲ್ಲ. ಸಿಎಂ ಸುಮ್ಮನೇ ತೋರಿಕೆಗೆ ಸಭೆ ನಡೆಸಿದ್ದಾರೆ. ಈ ರೀತಿ ತೋರಿಕೆಗೆ ಸಭೆ ನಡೆಸಿ ಕ್ರಮಕೈಗೊಳ್ಳುವ ಭರವಸೆ ನೀಡುವುದು ಸಮಂಜಸವಲ್ಲ. ಈಗಾಗಲೇ ಇರುವಂತಹ ಕಾನೂನಿನಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದರು.

ಆಮ್ ಆದ್ಮಿ ಪಕ್ಷದವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವರ ಸಿಎಂ, ಡಿಸಿಎಂ ಎಲ್ಲರೂ ಜೈಲಿಗೆ ಹೋಗಿ ಬಂದವರು. ಅಲ್ಲದೇ ಆಪ್ ಪಕ್ಷದ ಎಂಟತ್ತು ಜನ ಸಚಿವರು ಸಹ ಜೈಲಿಗೆ ಹೋಗಿ ಬಂದಿದ್ದಾರೆ. ಈಗಲೂ ಸಹ ಕೆಲವೊಬ್ಬರು ಜೈಲಿನಲ್ಲಿದ್ದಾರೆ. ಬೇರೆಯವರ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಆಮ್ ಆದ್ಮಿಯವರಿಗೆ ಯಾವುದೇ ನೈತಿಕತೆ ಇಲ್ಲ. ರಾಹುಲ್ ಗಾಂಧಿ ಭ್ರಷ್ಟ ಅಂತಾ ಹೇಳ್ತಾರೆ. ಇಲ್ಲಿಯವರೆಗೂ ಇಂಡಿ ಜೊತೆ ಯಾಕೆ ಮೈತ್ರಿ ಮಾಡಿಕೊಂಡಿದ್ದರು? ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು ಇಂಡಿ ಮೈತ್ರಿಕೂಟಕ್ಕೆ ಹೋಗಬಾರದಿತ್ತು. ಈಗ ಚುನಾವಣೆ ಹಿನ್ನೆಲೆ ಈ ರೀತಿ ಮಾತನಾಡುತ್ತಿದ್ದಾರೆ. ಇಡೀ ದೇಶವನ್ನು ಲೂಟಿ ಮಾಡಿದ ನಂಬರ್ ಒನ್ ಪಕ್ಷವೇ ಕಾಂಗ್ರೆಸ್. ರಾಹುಲ್ ಗಾಂಧಿ ಕುಟುಂಬ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಹುಲ್ ಗಾಂಧಿ ಬಗ್ಗೆ ಈಗ ಕೇಜ್ರಿವಾಲ್ ಅವರಿಗೆ ಜ್ಞಾನೋದಯವಾಗಿದೆ ಎಂದು ವ್ಯಂಗ್ಯ ಮಾಡಿದರು.

ಬಿಜೆಪಿಯ ಆಂತರಿಕ ಒಳಜಗಳ ವಿಚಾರವಾಗಿ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್, ಪಕ್ಷದಲ್ಲಿ ಎಲ್ಲವೂ ಒಂದು ಹಂತಕ್ಕೆ ಬಂದಿದೆ. ವರಿಷ್ಠರು ಎಲ್ಲವನ್ನೂ ಸರಿಪಡಿಸಲಿದ್ದಾರೆ. ಪಕ್ಷ ಬಹುದೊಡ್ಡದಾಗಿ ಬೆಳದಾಗ ಆಂತರಿಕ ವೈಮನಸ್ಸು ಏರ್ಪಡುವುದು ಸಹಜ. ಶೀಘ್ರವೇ ಎಲ್ಲವೂ ಸರಿಹೋಗುತ್ತೆ. ಬಣ ರಾಜಕೀಯಕ್ಕೆ ಪಕ್ಷದ ವರಿಷ್ಠರು ಶೀಘ್ರದಲ್ಲೇ ತಿಲಾಂಜಲಿ ಹಾಡಲಿದ್ದಾರೆ ಎಂದರು.

ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ವಿಚಾರವಾಗಿ ಕಾಂಗ್ರೆಸ್‍ಗೆ ಹೋಗಲ್ಲ ಎಂದು ಶ್ರೀರಾಮುಲು ಈಗಾಗಲೇ ಹೇಳಿದ್ದಾರೆ. ಆದರೂ ಸಹ ಪಕ್ಷಕ್ಕೆ ಸ್ವಾಗತಿಸುತ್ತೇವೆ ಎನ್ನುವುದು ಕಾಂಗ್ರೆಸ್‍ನವರ ಬೆಂಕಿ ಹಚ್ಚುವ ಕೆಲಸವಾಗಿದೆ. ಕಾಂಗ್ರೆಸ್ ಕೇವಲ ಬೆಂಕಿ ಹಚ್ಚುವ ಕೆಲಸ ಮಾಡುತ್ತದೆ ಎಂದು ಕಿಡಿಕಾರಿದರು.

Share This Article