ಕೊರೊನಾ ನಿಯಂತ್ರಣಕ್ಕೆ 13 ರೂಲ್ಸ್

Public TV
3 Min Read

ಬೆಂಗಳೂರು: ಕೊರೊನಾ ವೈರಸ್ ಮತ್ತಷ್ಟು ಜಾಸ್ತಿ ಆಗದಂತೆ ತಡೆಯಲು ಕರ್ನಾಟಕ ಸರ್ಕಾರ ವಿಶೇಷ ಕಠಿಣ ಕಾನೂನು ಜಾರಿ ಮಾಡಿದೆ. ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಸೆಕ್ಷನ್ 2,3 ಮತ್ತು 4ರಡಿ ರಾಜ್ಯ ಸರ್ಕಾರ ‘ಕರ್ನಾಟಕ ಸಾಂಕ್ರಾಮಿಕ ರೋಗ ಕೋವಿಡ್ -19 ನಿಯಂತ್ರಣ 2020′(Karnataka Epidemic Diseases, COVID-19 Regulations, 2020’) ಹೆಸರಿನಲ್ಲಿ ನಿಯಂತ್ರಣ ಕ್ರಮವನ್ನು ಪ್ರಕಟಿಸಿದೆ.

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಕಠಿಣ ನಿಯಮವನ್ನು ಜಾರಿ ಮಾಡಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋದರೆ ಈ ನಿಯಮ ಜಾರಿಯಾಗಲಿದೆ.

ಕೊರೊನಾ ನಿಯಮ ಏನು?
1. ಸೋಂಕು ಶಂಕಿತ ವ್ಯಕ್ತಿ ಸರ್ಕಾರಿ/ ಖಾಸಗಿ ಆಸ್ಪತ್ರೆಗೆ ದಾಖಲಾದಾಗ ಕಡ್ಡಾಯವಾಗಿ ಚಿಕಿತ್ಸೆ ನೀಡಲೇಬೇಕು. ಒಂದು ವೇಳೆ ವ್ಯಕ್ತಿ ಚಿಕಿತ್ಸೆ ನಿರಾಕರಿಸಿದ್ರೆ ಆರೋಗ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು ಒತ್ತಾಯ ಪೂರ್ವಕವಾಗಿ ಆಸ್ಪತ್ರೆಗೆ ದಾಖಲಿಸಬೇಕು. 14 ದಿನ ಐಸೋಲೇಷನ್ ಸೆಂಟರಿನಲ್ಲಿ  ಇಟ್ಟುಕೊಳ್ಳಬೇಕು.

2. ಕೊರೊನಾ ಪಾಸಿಟಿವ್ ರಿಪೋರ್ಟ್ ಆದ ವ್ಯಕ್ತಿ ವಾಸವಿರುವ ಪ್ರದೇಶ, ಹಳ್ಳಿ/ಬಡಾವಣೆ/ನಗರ/ ವಾರ್ಡ್/ ಕಾಲೋನಿಗೆ ಸಂಪೂರ್ಣ ದಿಗ್ಭಂಧನವನ್ನು ಹೇರಲಾಗುತ್ತದೆ.

3. ಸೋಂಕು ಪೀಡಿತ ವಾಸವಿರುವ ವ್ಯಕ್ತಿಯ ಪ್ರದೇಶವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ. ಸೋಂಕುಪೀಡಿತ ವ್ಯಕ್ತಿ ಇರುವ ಪ್ರದೇಶಕ್ಕೆ ಬೇರೆ ಜನರ ಪ್ರವೇಶಕ್ಕೆ ನಿಷೇಧ

4. ಸೋಂಕುಪೀಡಿತ ವ್ಯಕ್ತಿ ವಾಸವಿರುವ ಪ್ರದೇಶದವರು ಎಲ್ಲಿಯೂ ಹೊರಗಡೆ ಹೋಗುವಂತಿಲ್ಲ. ಸೋಂಕು ಪೀಡಿತನ ಏರಿಯಾದ ಶಾಲಾ ಕಾಲೇಜ್ ಬಂದ್, ಕಚೇರಿಗಳು ಬಂದ್ ಹಾಗೂ ಸಾರ್ವಜನಿಕ ಸಮಾರಂಭಗಳನ್ನು ಬಂದ್ ಮಾಡಲಾಗುತ್ತದೆ. ಈ ಸ್ಥಳದಲ್ಲಿ ವಾಹನಗಳ ಓಡಾಟ ಸಂಪೂರ್ಣ ನಿಷೇಧಿಸಲಾಗುತ್ತದೆ.

5. ಸೋಂಕು ಪೀಡಿತರು ಹಾಗೂ ಶಂಕಿತರು ಕಡ್ಡಾಯವಾಗಿ ಐಸೋಲೇಷನ್ ಸೆಂಟರ್‍ನಲ್ಲಿರಬೇಕು. ಈ ಸ್ಥಳದಲ್ಲಿರುವ ಖಾಸಗಿ ಸರ್ಕಾರಿ ಬಿಲ್ಡಿಂಗ್‍ಗಳನ್ನು ವಶಕ್ಕೆ ಪಡೆದುಕೊಂಡು ಅಲ್ಲಿ ಐಸೋಲೇಷನ್ ನಿರ್ಮಾಣ ಮಾಡಬೇಕು. ತುರ್ತು ಪರಿಸ್ಥಿತಿ ನಿಭಾಯಿಸಲು ಎಲ್ಲಾ ಸರ್ಕಾರಿ ಸಿಬ್ಬಂದಿಗಳು ಕೈಜೋಡಿಸಲೇಬೇಕು. ಕುಟುಂಬ ಮತ್ತು ಆರೋಗ್ಯ ಇಲಾಖೆಯ ಎಲ್ಲ ಸೂಚನೆಗಳನ್ನು ಸರ್ಕಾರಿ ಸಿಬ್ಬಂದಿ ಪಾಲಿಸಲೇಬೇಕು.

6 ಈ ಕಾಯ್ದೆ ಜಾರಿ ಮಾಡುವ ಅಧಿಕಾರ ಆಯಾಯ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿ, ಜಿಲ್ಲಾ ಸರ್ಜನ್, ತಾಲೂಕು ಆರೋಗ್ಯ ಅಧಿಕಾರಿ, ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿಗಳ ಜೊತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಇರುತ್ತದೆ.

7. ಒಂದು ವೇಳೆ ಕೊರೊನಾ ಪಾಸಿಟಿವ್ ಕಂಡುಬಂದರೆ ಸರ್ಕಾರಿ/ ಖಾಸಗಿ ಆಸ್ಪತ್ರೆಗಳು ರೋಗಿ ವಿದೇಶಕ್ಕೆ ಹೋಗಿದ್ದರೆ ಅಥವಾ ಆತ ಸಂಚರಿಸಿದ ಪ್ರದೇಶದ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಅಷ್ಟೇ ಅಲ್ಲದೇ ಈ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಎಲ್ಲ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಬೇಕು.

8. ಯಾವುದೇ ಸಂಸ್ಥೆಯರು ಕೊರೊನಾ ಬಗ್ಗೆ ಕುಟುಂಬ ಮತ್ತು ಕಲ್ಯಾಣ ಇಲಾಖೆಯ ಅನುಮತಿ ಪಡೆಯದೇ ಯಾರಿಗೂ ಮಾಹಿತಿಯನ್ನು ನೀಡುವಂತಿಲ್ಲ. ಒಂದು ವೇಳೆ ಸುಳ್ಳು ಮಾಹಿತಿಯನ್ನು ಹರಡಿದರೆ ಈ ನಿಯಮದ ಅನ್ವಯ ಶಿಕ್ಷಿಸಲಾಗುತ್ತದೆ.

9. ಕರ್ನಾಟಕ ರಾಜ್ಯದಲ್ಲಿ ಯಾವುದೇ ಖಾಸಗಿ ಲ್ಯಾಬೋರೇಟರಿಯವರಿಗೆ ಕೊರೊನಾ ವೈರಸ್ ಮಾದರಿ ಪರೀಕ್ಷೆ ಮಾಡಲು ಅನುಮತಿ ನೀಡಿಲ್ಲ. ಎಲ್ಲ ಮಾದರಿಗಳು ಭಾರತ ಸರ್ಕಾರ ನಿಗದಿಪಡಿಸಿದ ಮಾನದಂಡದಲ್ಲಿ ಸಂಗ್ರಹಿಸಬೇಕು ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದ ಲ್ಯಾಬ್ ಗಳಿಗೆ ಕಳುಹಿಸಬೇಕು.

10. ಕಳೆದ 14 ದಿನಗಳ ಹಿಂದೆ ವಿದೇಶದಿಂದ ಆಗಮಿಸಿದ್ದರೆ ಅಥವಾ ಕೊರೊನಾ ಪಾಸಿಟಿವ್ ಕಂಡು ಬಂದ ವ್ಯಕ್ತಿಗಳು ಓಡಾಡಿದ ಜಾಗದಲ್ಲಿ ಸಂಚರಿಸಿದ್ದರೆ ಆ ವ್ಯಕ್ತಿಗಳು ಕಡ್ಡಾಯವಾಗಿ ಸಮಿಪದ ಸರ್ಕಾರಿ ಆಸ್ಪತ್ರೆಗೆ ತೆರಳಬೇಕು ಅಥವಾ ಉಚಿತ ಸಹಾಯವಾಣಿ 104ಕ್ಕೆ ಕರೆ ಮಾಡಿ ತಿಳಿಸಬೇಕು.

11. ವ್ಯಕ್ತಿ ಕೊರೊನಾ ವೈರಸ್ ಇರುವ ದೇಶದಿಂದ ಆಗಮಿಸಿದ್ದರೆ ಅಥವಾ ಕೊರೊನಾ ಸೋಂಕು ಪೀಡಿತ ವ್ಯಕ್ತಿ ಇರುವ ಪ್ರದೇಶದಲ್ಲಿ ಸಂಚರಿಸಿಯೂ ಯಾವುದೇ ಕಫ, ಜ್ವರ, ಉಸಿರಾಟದ ತೊಂದರೆ ಕಾಣಿಸದೇ ಇದ್ದರೂ ಆ ವ್ಯಕ್ತಿ ಮನೆಯಲ್ಲೇ ಪ್ರತೇಕವಾಗಿ ಇರಬೇಕು ಮತ್ತು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಬೇಕು. ಈ ವ್ಯಕ್ತಿ ಯಾವುದೇ ಕಾರಣಕ್ಕೂ 14 ದಿನಗಳ ಕಾಲ ಕುಟುಂಬದ ಸದಸ್ಯರ ಸಂಪರ್ಕದಿಂದ ದೂರ ಇರಬೇಕು.

13. ಇಂದಿನಿಂದ ಈ ಕಾಯ್ದೆ ಜಾರಿಯಾಗಲಿದ್ದು ಒಂದು ವರ್ಷದವರೆಗೆ ಈ ಕಾನೂನು ಜಾರಿಯಲ್ಲಿರಲಿದೆ. ಈ ಕಾಯ್ದೆಯನ್ನು ಸಾರ್ವಜನಿಕರು/ ಸಂಸ್ಥೆಗಳು ಉಲ್ಲಂಘಿಸಿದರೆ ಐಪಿಸಿ ಸೆಕ್ಷನ್ 188ರ(ಸರ್ಕಾರಿ ಆದೇಶದ ಉಲ್ಲಂಘನೆ) ಅಡಿ ಶಿಕ್ಷಾರ್ಹ ಅಪರಾಧವಾಗುತ್ತದೆ. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅಥವಾ ಜಿಲ್ಲಾಧಿಕಾರಿ ಶಿಕ್ಷೆ ನೀಡಬಹುದು.

Share This Article
Leave a Comment

Leave a Reply

Your email address will not be published. Required fields are marked *