ದಸರಾ ಉದ್ಘಾಟನೆ- ಎಸ್.ಎಂ.ಕೃಷ್ಣಾರನ್ನು ಅಧಿಕೃತವಾಗಿ ಆಹ್ವಾನಿಸಿದ ಸರ್ಕಾರ

Public TV
2 Min Read

ಬೆಂಗಳೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಆಗಮಿಸಲು ಕೇಂದ್ರದ ಮಾಜಿ ಸಚಿವ ಹಾಗೂ ರಾಜ್ಯದ ಹಿರಿಯ ಮುತ್ಸದ್ದಿ ರಾಜಕಾರಣಿ ಎಸ್.ಎಂ.ಕೃಷ್ಣ ಅವರಿಗೆ ಇಂದು ರಾಜ್ಯ ಸರ್ಕಾರ ಅಧಿಕೃತವಾಗಿ ಆಹ್ವಾನ ನೀಡಿತು.

ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ತೆರಳಿ ಸರ್ಕಾರದ ಪರವಾಗಿ ಅವರಿಗೆ ಆಹ್ವಾನ ನೀಡಿದರು. ಇದೇ ತಿಂಗಳ 7ರಂದು ಮೈಸೂರು ದಸರಾ ಉದ್ಘಾಟನೆಯಾಗಲಿದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ ರಾಜಕೀಯ ಕ್ಷೇತ್ರಕ್ಕೆ ಸೇರಿದ ಗಣ್ಯರೊಬ್ಬರಿಗೆ ಉದ್ಘಾಟನೆ ಮಾಡುವ ಸೌಭಾಗ್ಯ ಸಿಕ್ಕಿದೆ. ಇದನ್ನೂ ಓದಿ: ಅ. 7 ರಿಂದ13 ರವರೆಗೆ ನಿತ್ಯ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ: ಎಸ್.ಟಿ.ಸೋಮಶೇಖರ್

9 ದಿನಗಳ ಕಾಲ ನಡೆಯಲಿರುವ ಮೈಸೂರು ದಸರಾವನ್ನು ಈ ಹಿಂದೆ ಸಾಹಿತಿಗಳು, ಬರಹಗಾರರು, ಸಮಾಜ ಸೇವಕರು, ಧರ್ಮಗುರುಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರು ಉದ್ಘಾಟನೆ ಮಾಡುತ್ತಿದ್ದರು. ಆದರೆ ಈ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿರುವ ರಾಜ್ಯ ಸರ್ಕಾರ ಮೊದಲ ಬಾರಿಗೆ ವಿಶ್ವವಿಖ್ಯಾತ ದಸರಾವನ್ನು ರಾಜಕೀಯ ಕ್ಷೇತ್ರಕ್ಕೆ ಸೇರಿದವರೊಬ್ಬರಿಂದ ಉದ್ಘಾಟಿಸುತ್ತಿರುವುದು ವಿಶೇಷವಾಗಿದೆ. ಇದನ್ನೂ ಓದಿ: 80 ಕಡೆ ದುರ್ಗಾಮೂರ್ತಿ ಪ್ರತಿಷ್ಠಾಪನೆಗೆ ಮನವಿ – ದಸರಾ ಮಾರ್ಗಸೂಚಿಗಾಗಿ ಎದುರುನೋಡ್ತಿರುವ ಬಿಬಿಎಂಪಿ

ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ಅವರು ನೀಡಿರುವ ಕೊಡುಗೆಗಳು ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಎಸ್.ಎಂ.ಕೃಷ್ಣ ಅವರನ್ನು ಉದ್ಘಾಟನೆಗೆ ಆಹ್ವಾನಿಸಲು ತೀರ್ಮಾನಿಸಲಾಗಿತ್ತು.

ಈ ವೇಳೆ ಕಂದಾಯ ಸಚಿವ ಆರ್.ಅಶೋಕ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *