ಆರೋಗ್ಯ ಇಲಾಖೆಯಲ್ಲಿ ಕೆಲಸ ಕದಿಯುವವರಿಗೆ ವೇತನ ಕಡಿತ ಶಿಕ್ಷೆ: ಸುಧಾಕರ್

Public TV
3 Min Read

ಬೆಂಗಳೂರು: ನಿಜವಾದ ಕಾರಣಗಳಿಲ್ಲದೆ ಕೆಲಸ ಕದಿಯುವುದನ್ನು ಸಹಿಸಲು ಆಗುವುದಿಲ್ಲ. ಇಲಾಖೆಯಲ್ಲಿ ಗುಣಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಎಲ್ಲ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ಆಧರಿಸಿ ವೇತನ ಪಾವತಿಸುವ ವ್ಯವಸ್ಥೆ ಕಡ್ಡಾಯಗೊಳಿಸಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆ, ಇಲಾಖೆ ಕಚೇರಿ ಮತ್ತು ಸಂಸ್ಥೆಗಳಲ್ಲಿ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯದ ವೇಳೆಯಲ್ಲಿ ಹಾಜರಿಲ್ಲದಿರುವ ಬಗ್ಗೆ ಸಾರ್ವಜನಿಕರು ಹಾಗೂ ಚುನಾಯಿತ ಪ್ರತಿನಿಧಿಗಳಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಪೂಜೆ ವೇಳೆ ಶಬ್ದ ಮಾಲಿನ್ಯ ಆರೋಪ- ವೇಣುಗೋಪಾಲ ದೇಗುಲಕ್ಕೆ ನೊಟೀಸ್

ಸರ್ಕಾರಿ ಅಧಿಕಾರಿಗಳ ಕರ್ತವ್ಯಲೋಪದಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಆಗುತ್ತದೆ. ಹೀಗಾಗಿ ಕರ್ತವ್ಯದ ವೇಳೆಯಲ್ಲಿ ಹಾಜರಿಲ್ಲದ ಯಾರೇ ಆಗಲಿ ಅಂತಹವರ ವೇತನ ಕಡಿತಕ್ಕೆ ಸೂಚನೆ ನೀಡಲಾಗಿದೆ. ಇಲಾಖೆ ಅಡಿಯಲ್ಲಿ ಬರುವ ಎಲ್ಲ ಸಂಸ್ಥೆಗಳು ಮತ್ತು ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಗೂ ಅವರ ಆಧಾರ್ ಆಧರಿತ ಬಯೋಮೆಟ್ರಿಕ್ ಹಾಜರಾತಿ (ಎಇಬಿಎಎಸ್) ಕಡ್ಡಾಯಗೊಳಿಸಲಾಗಿದೆ. ಅದನ್ನು ಆಧರಿಸಿಯೇ ಇನ್ನು ಮುಂದೆ ವೇತನ ನೀಡುವಂತೆ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ವಿವರಿಸಿದರು.

ಕೋವಿಡ್ ಕಾರಣಕ್ಕೆ ಸ್ಥಗಿತಗೊಂಡಿದ್ದ ಬಯೋಮೆಟ್ರಿಕ್ ಹಾಜರಾತಿ ಪದ್ಧತಿಯನ್ನು ಕಳೆದ ಎರಡು ತಿಂಗಳ ಹಿಂದಿನಿಂದಲೇ ಮತ್ತೆ ಕಡ್ಡಾಯಗೊಳಿಸಲಾಗಿದೆ. ಅನೇಕ ಸಭೆಗಗಳಲ್ಲಿ ಮತ್ತು ಸುತ್ತೋಲೆ ಮೂಲಕವೂ ಈ ಬಗ್ಗೆ ಸೂಚನೆ ನೀಡಲಾಗಿದೆ. ಆದರೂ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಹಾಜರಾತಿ ದಾಖಲಿಸದಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈಗ ಸ್ಪಷ್ಟ ಎಚ್ಚರಿಕೆ ಜೊತೆಗೆ ಅಧಿಕೃತ ಆದೇಶ ನೀಡಿದ್ದು ಅಂತಹ ಪ್ರಕರಣಗಳನ್ನು ಗೈರು ಹಾಜರಿ ಎಂದು ಪರಿಗಣಿಸಿ ವೇತನ ಕಡಿತಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯಲ್ಲೂ ಕಮಿಷನ್ ದಂಧೆ

ಡಿಡಿಒ ಹೊಣೆ:
ಇಲಾಖೆಯ ಆಸ್ಪತ್ರೆ, ಸಂಸ್ಥೆ ಮತ್ತು ಕೇಂದ್ರಗಳ ಜವಾಬ್ದಾರಿ ನಿರ್ವಹಿಸುವ ಡಿಡಿಒ (ಸ್ಯಾಲರಿ ಡ್ರಾಯಿಂಗ್ ಆಫೀಸರ್)ಗಳು ಪ್ರತೀ ತಿಂಗಳು ಎಇಬಿಎಎಸ್‍ನಲ್ಲಿ ತಮ್ಮ ವ್ಯಾಪ್ತಿಯ ಎಲ್ಲ ಸಿಬ್ಬಂದಿಗಳ ಹಾಜರಾತಿ ಪರಿಶೀಲಿಸಿ ಅದರ ಅನುಸಾರವೇ ವೇತನ ಪಾವತಿಗೆ ವರದಿ ಸಿದ್ಧಪಡಿಸಿ ಸಂಬಂಧಿಸಿದ ಅಧಿಕಾರಿಗಳ ಮೂಲಕ ಆಯಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ (ಡಿಎಚ್‍ಒ) ಸಲ್ಲಿಸಬೇಕು. ಅವರು ಅದನ್ನು ಪರಿಶೀಲಿಸಿ ವೇತನ ಬಿಡುಗಡೆ ಮತ್ತು ಕಡಿತಕ್ಕೆ ಸೂಚನೆ ನೀಡಲಿದ್ದಾರೆ. ಡಿಎಚ್‍ಒ ಅವರು ಕೈಗೊಂಡ ಕ್ರಮಗಳನ್ನು ಮೇಲಿನ ಹಂತದ ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಯಾರೇ ಆಗಲಿ ಶೇ.80ರಷ್ಟು ಹಾಜರಾತಿಗಿಂತ ಕಡಿಮೆ ಇದ್ದಲ್ಲಿ ಅವರ ವೇತನ ತಡೆ ಹಿಡಿಯಲಾಗುತ್ತದೆ. ನಂತರ ಮಾರ್ಗಸೂಚಿ ಅನ್ವಯ ಮುಂದಿನ ಕ್ರಮ ವಹಿಸಲಾಗುವುದು. ಒಂದು ವೇಳೆ ಶೇ.80ರಷ್ಟು ಹಾಜರಾತಿ ಇದ್ದಲ್ಲಿ ವೇತನ ಬಿಡುಗಡೆ ಮಾಡಿ ಉಳಿದ ಶೇ.20 ಹಾಜರಾತಿ ದಾಖಲು ಮಾಡದಿರುವುದಕ್ಕೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗುತ್ತದೆ. ಸಿಬ್ಬಂದಿ ನೀಡುವ ಕಾರಣ ನಿಜವಾಗಿದ್ದಲ್ಲಿ ಪ್ರಕರಣ ಮುಕ್ತಾಯಗೊಳಿಸಲಾಗುವುದು. ಒಂದು ವೇಳೆ ಸಬೂಬು ನೀಡಿದರೆ ಅಥವಾ ನೀಡಿರುವ ಮಾಹಿತಿ ಸುಳ್ಳು ಆಗಿದ್ದಲ್ಲಿ ಮುಂದಿನ ತಿಂಗಳ ವೇತನದಲ್ಲಿ ನಿರ್ದಿಷ್ಟಪಡಿಸಿರುವ ಮೊತ್ತವನ್ನು ಕಡಿತಗೊಳಿಸಲಾಗುವುದು. ಒಂದು ವೇಳೆ ಎಇಬಿಎಎಸ್ ಅನುಷ್ಟಾನಗೊಳಿಸದೆ, ಹಾಜರಾತಿ ಪರಿಶೀಲಿಸದೆ ವೇತನ ಪಾವತಿಸಿದರೆ ಆಯಾ ಡಿಡಿಒಗಳನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಇದನ್ನು ಸರಿಯಾಗಿ ಉಸ್ತುವಾರಿ ಮಾಡದಿದ್ದಲ್ಲಿ ಡಿಎಚ್‍ಒಗಳ ವಿರುದ್ಧವೂ ಕ್ರಮ ಕೈಗೊಳ್ಳಲು ವರದಿ ನೀಡುವಂತೆ ಜಿಲ್ಲೆಗಳ ಉಸ್ತುವಾರಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಪ್ರತಿ ವಾರ ಪರಿಶೀಲನೆ:
ಪ್ರತಿ ವಾರ ಇಲಾಖೆ ಪ್ರಗತಿ ಪರಿಶೀಲನೆಯಲ್ಲಿ ಉಳಿದ ಅಂಶಗಳ ಜೊತೆಗೆ ಹಾಜರಾತಿ ಕಡ್ಡಾಯ ಮತ್ತು ವೇತನಕ್ಕೆ ಸಂಯೋಜನೆಗೊಳಿಸಿರುವ ವ್ಯವಸ್ಥೆಯನ್ನು ಪರಾಮರ್ಶೆ ಮಾಡಲಾಗುತ್ತಿದೆ. ಅನುಷ್ಟಾನದಲ್ಲಿ ಲೋಪ ಕಂಡರೆ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ. ಆರೋಗ್ಯಸೌಧ ಸೇರಿದಂತೆ ಇಲಾಖೆ ವ್ಯಾಪ್ತಿಯ ಎಲ್ಲಾ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ಸೇವಾ ಸಿಬ್ಬಂದಿ ಮತ್ತು ಕಚೇರಿ ಸಿಬ್ಬಂದಿಗಳು ಎಇಬಿಎಎಸ್‍ನಲ್ಲಿ ದಿನಕ್ಕೆ ಮೂರು ಬಾರಿ ತಮ್ಮ ಹಾಜರಾತಿ ದಾಖಲಿಸಲು ಸೂಚಿಸಲಾಗಿದೆ. ಕಚೇರಿ, ಆಸ್ಪತ್ರೆಗಳಲ್ಲಿ ಪ್ರತ್ಯೇಕ ಸಮಯ ನಿಗದಿ ಮಾಡಲಾಗಿದೆ. ಇಲಾಖೆಯ ಹೊಣೆ ಹೊತ್ತಿರುವ ಆಯುಕ್ತ ರಂದೀಪ್ ಅವರೇ ಬಯೋಮೆಟ್ರಿಕ್ ಹಾಜರಾತಿ ನೋಂದಯಿಸಿ ಅನುಸರಿಸುವ ಮೂಲಕ ಉಳಿದ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗೆ ಮಾದರಿಯಾಗಿದ್ದಾರೆ ಎಂದೂ ಸಚಿವ ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *