ರೈತರಿಂದ ಖರೀದಿಸಿದ ಬೆಳೆಯ ಹಣ ಸರ್ಕಾರ ನೀಡಿದ್ರೂ ಬ್ಯಾಂಕ್ ನೀಡ್ತಿಲ್ಲ

Public TV
3 Min Read

ಯಾದಗಿರಿ: ಸರ್ಕಾರದಿಂದ ರೈತರ ಖಾತೆಗೆ ತೊಗರಿ ಮಾರಾಟದ ಹಣ ಜಮೆ ಆಗಿದ್ದರೂ ಬ್ಯಾಂಕ್ ಅಧಿಕಾರಿಗಳು ರೈತರಿಗೆ ನೀಡುತ್ತಿಲ್ಲ, ನಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ರೈತರು ಆರೋಪಿಸಿ ಆಕ್ರೋಶ ಹೊರಹಾಕಿದ್ದಾರೆ.

ಜಿಲ್ಲೆಯ ಸುರಪುರ ತಾಲೂಕಿನ ಕೊಡೆಕಲ್‍ನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎದುರು ನೂರಾರು ರೈತರು ತಮಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಹೋರಾಟ ನಡೆಸುತ್ತಿದ್ದಾರೆ. ಸಾಲಮನ್ನಾ ಹಣವನ್ನು ರೈತರ ಖಾತೆಗಳಿಂದ ಮರಳಿ ಪಡೆದು ಯಾದಗಿರಿ ಜಿಲ್ಲೆಯ ಕೆಲ ಬ್ಯಾಂಕ್‍ಗಳು ದೊಡ್ಡ ಸುದ್ದಿಯಾಗಿದ್ದವು. ಈಗ ಮತ್ತೆ ತಮ್ಮ ಹಳೆ ಚಾಳಿಯನ್ನು ಬ್ಯಾಂಕ್‍ಗಳು ಮುಂದುವರಿಸಿವೆ. ರೈತರ ತೊಗರಿ ಖರೀದಿ ಹಣ ನೀಡದೇ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿವೆ.

ಕಳೆದ ವರ್ಷ ಸರ್ಕಾರ ಎಪಿಎಂಸಿಗಳ ಮೂಲಕ ತೊಗರಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ಜಿಲ್ಲೆಯ ರೈತರಿಂದ ತೊಗರಿ ಖರೀದಿ ಮಾಡಿತ್ತು. ಅಲ್ಲದೆ ಸರ್ಕಾರ ತೊಗರಿ ಖರೀದಿ ಹಣವನ್ನು ಈಗಾಗಲೇ ಆಯಾ ರೈತರ ಖಾತೆಗೆ ವರ್ಗಾಯಿಸಿದೆ. ಆದರೆ ರೈತರ ಖಾತೆಗೆ ಜಮಾವಣೆಗೊಂಡ ಹಣವನ್ನು ವಾಪಸ್ ನೀಡಲು ಬ್ಯಾಂಕ್‍ಗಳು ಹಿಂದೇಟು ಹಾಕುತ್ತಿವೆ. ದೇವರು ವರ ಕೊಟ್ಟರೂ ಪೂಜಾರಿ ಕೊಡಲ್ಲ ಎನ್ನುವ ರೀತಿ ಸರ್ಕಾರ ಹಣ ನೀಡಿದ್ದರೂ ಬ್ಯಾಂಕ್‍ಗಳು ರೈತರಿಗೆ ಕೊಡುತ್ತಿಲ್ಲ.

ಬೆಳೆಸಾಲ ಮನ್ನಾವಾಗಿದ್ದರೂ ಬಾಕಿ ಇರುವ ಬೆಳೆ ಸಾಲವನ್ನು ಕಟ್ಟಿದರೆ ಮಾತ್ರ ತೊಗರಿ ಖರೀದಿ ಹಣ ನೀಡುತ್ತೆವೆಂದು ಬ್ಯಾಂಕ್ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆಂದು ರೈತರು ಅಳಲನ್ನು ತೋಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಸಾಲಮನ್ನಾ ರಿಟರ್ನ್:
ಜಿಲ್ಲೆಯ ಶಹಾಪುರ ತಾಲೂಕಿನ ರೈತರೊಬ್ಬರ ಖಾತೆಗೆ ಬಂದಿದ್ದ ಸಾಲ ಮನ್ನಾದ ಹಣ, ಹೇಗೆ ಬಂದಿದೆಯೋ ಹಾಗೇ ವಾಪಸ್ ಆಗಿದೆ. ಮುಖ್ಯಮಂತ್ರಿ ಸಾಲ ಮನ್ನಾ ಯೋಜನೆಯಡಿಯಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ರೈತರ ಖಾತೆಗೆ ಹಣ ಜಮಾ ಆಗಿತ್ತು. ಆದ್ರೆ ಚುನಾವಣೆ ಮುಗಿದ ಬಳಿಕ ರೈತರ ಖಾತೆಯಲ್ಲಿದ್ದ ಹಣ ಇದ್ದಕ್ಕಿದ್ದಂತೆ ಮಾಯವಾಗಿತ್ತು.

ಜಿಲ್ಲೆಯ ಸುಮಾರು 200 ರೈತರ ಖಾತೆಯ ಹಣ ರಿ ಫಂಡ್ ಆಗಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. ಶಹಾಪುರದ ಸಗರ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದ ಶಿವಪ್ಪ ಅವರಿಗೆ ಏಪ್ರಿಲ್ ತಿಂಗಳಲ್ಲಿ 43,535 ಹಣ ಜಮಾ ಅಗಿತ್ತು. ಮೇ 23ಕ್ಕೆ ಅಂದರೆ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ರೈತ ಶಿವಪ್ಪ ಅಕೌಂಟ್ ಚೆಕ್ ಮಾಡಿದ ವೇಳೆ ಹಣ ರಿ ಫಂಡ್ ಅಗಿರುವುದು ಬೆಳಕಿಗೆ ಬಂದಿತ್ತು.

ಇದೇ ರೀತಿ 200 ರೈತರ ಹಣ ರೀಫಂಡ್ ಅಗಿದೆ ಎಂದು ರೈತರು ಆರೋಪಿಸಿದ್ದಾರೆ. ಆದರೆ ಸಗರ ಗ್ರಾಮ ಎಸ್‍ಬಿಐ ಬ್ಯಾಂಕ್ ಅಧಿಕಾರಿಗಳು ಅರ್ಹ ಫಲಾನುಭವಿಗಳ ಪಟ್ಟಿ ಕಳಿಸುವಲ್ಲಿ ಗೊಂದಲವಾಗಿದೆ. ಕೆಲ ರೈತರಿಗೆ ಇರುವ ಸಾಲಕ್ಕಿಂತ ಹೆಚ್ಚಿನ ಹಣ ಅವರ ಖಾತೆಗೆ ಹಣ ಜಮೆ ಅಗಿದ್ದು, ಪರಿಶೀಲನೆ ಬಳಿಕ ಹೆಚ್ಚಿನ ಹಣ ರಿಫಂಡ್ ಅಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದರು.

ಕೊಪ್ಪಳದಲ್ಲೂ ಸಾಲಮನ್ನಾ ರಿಟರ್ನ್:
ಗಂಗಾವತಿ ತಾಲೂಕಿನ ಗುಂಡೂರು ಗ್ರಾಮದ ನಿಂಗಪ್ಪ ಅವರಿಗೆ ಐಸಿಐಸಿಐ ಬ್ಯಾಂಕ್ ಅಲ್ಲಿ ಮೂರು ಲಕ್ಷ ಬೆಳೆ ಸಾಲವಿತ್ತು. ಇವರ ಸಾಲ ಕೂಡ ಸಾಲಮನ್ನಾ ಯೋಜನೆಯಲ್ಲಿ ಮನ್ನಾವಾಗಿತ್ತು. ಹೀಗಾಗಿ ರೈತ ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಆದರೆ ಇತ್ತೀಚಿಗೆ ಉಳಿದ ಸಾಲದ ಬಡ್ಡಿ ಕಟ್ಟಲು ಬ್ಯಾಂಕಿಗೆ ಹೋದಾಗ ಸಾಲಮನ್ನಾ ರಿಟರ್ನ್ ಆಗಿದೆ ಎನ್ನುವ ಸುದ್ದಿ ಕೇಳಿ ರೈತ ಕಂಗಾಲಾಗಿದ್ದರು.

ಯಾಕೆ? ಹೀಗಾಯ್ತು? ಎಂದು ಬ್ಯಾಂಕ್ ಮ್ಯಾನೇಜರ್ ಅವರನ್ನ ಕೇಳಿದರೆ, ಹೋಗಿ ಸಿಎಂ ಅವರನ್ನ ಕೇಳಿ ನಮಗೇನ್ ಗೊತ್ತು ಎನ್ನುತ್ತಿದ್ದಾರೆ. ಹಿಂಗಾದರೆ ನಾವು ಯಾರನ್ನ ಕೇಳೋದು ಎಂದು ರೈತ ನಿಂಗಪ್ಪ ನೋವನ್ನು ಹೊರ ಹಾಕಿದ್ದರು.

Share This Article
Leave a Comment

Leave a Reply

Your email address will not be published. Required fields are marked *