ಸರ್ಕಾರಿ ನೌಕರರು ರಾಜಕೀಯ ಅಭಿಪ್ರಾಯ ಹಂಚಿಕೊಂಡರೆ ಶಿಸ್ತು ಕ್ರಮ

Public TV
1 Min Read

ಗುವಾಹಟಿ: ಸರ್ಕಾರಿ ನೌಕರರು ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಅಭಿಪ್ರಾಯ ಹಂಚಿಕೊಂಡರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಸ್ಸಾಂ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಅಸ್ಸಾಂ ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕರು ಈ ರೀತಿಯ ವಿವಾದಿತ ಸುತ್ತೋಲೆ ಹೊರಡಿಸಿದ್ದು, ಫೇಸ್ಬುಕ್, ವಾಟ್ಸಪ್, ಟ್ವಿಟರ್ ಇನ್ಸ್ಟಾಗ್ರಾಂ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿದ್ದು, ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಚರ್ಚೆ ಮಾಡದಂತೆ ಆದೇಶಿಸಿದ್ದಾರೆ.

ಈ ಸಕ್ರ್ಯೂಲರ್ ಅಸ್ಸಾಂ ಸರ್ಕಾರಿ ನೌಕರ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಆದೇಶ ಉಲ್ಲಂಘಿಸಿದರೆ 1961 ರ ಅಸ್ಸಾಂ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದೆ. ಖಾಯಂ ಮಾತ್ರವಲ್ಲದೇ ಈ ಕ್ರಮವು ಗುತ್ತಿಗೆ ನೌಕರರಿಗೂ ಅನ್ವಯಿಸುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಹಿನ್ನೆಲೆ ರಾಜ್ಯದಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಸಂಬಂಧ ಪ್ರಾಥಮಿಕ ಶಿಕ್ಷಣ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದ ಅಸ್ಸಾಂನ ಸ್ಥಳೀಯ ಜನರು, ಸಿಎಎಯಿಂದ ಅಸ್ಸಾಂನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಹಿಂದೂಗಳಿಗೆ ಅನುಕೂಲವಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯಾದ್ಯಂತ ಈ ಸಂಖ್ಯೆ ಹೆಚ್ಚಿದ್ದು, ಬಾಂಗ್ಲಾದೇಶದಿಂದ ಬಾಂಗ್ಲಾ ಮಾತನಾಡುವ ಹಿಂದೂ ವಲಸಿಗರಿಗೆ ಪೌರತ್ವ ನೀಡಿದರೆ, ಅವರು ರಾಜ್ಯದಲ್ಲಿ ಅಸ್ಸಾಮಿ ಮಾತನಾಡುವ ಜನರನ್ನು ಮೀರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಕಷ್ಟು ಜನರು ಟ್ವಿಟ್ಟರ್ ನಲ್ಲಿ ಈ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆ ಸಿಬ್ಬಂದಿಗಳು ಸಾಮಾಜಿಕ ಮಾಧ್ಯಮ ಬಳಕೆಗೆ ನಿರ್ಬಂಧ ಹೇರಿರುವುದಕ್ಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿಎಎ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸಿದ ನಂತರ ಅಸ್ಸಾಂನಲ್ಲಿ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದ್ದವು ಬಸ್ ಸೇರಿ ಸಾಕಷ್ಟು ಸಾರ್ವಜನಿಕ ಆಸ್ತಿ ಪಾಸ್ತಿಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *