ಬಾಗಲಕೋಟೆ: ಪ್ರವಾಹ ಪೀಡಿತರಿಗೆ ಸೂರು ಕಲ್ಪಿಸೋ ಭರವಸೆ ನೀಡೋ ಸರ್ಕಾರ ಜಿಲ್ಲೆಯ ಹುನಗುಂದ ತಾಲೂಕಿನ ಬಿಸನಾಳಕೊಪ್ಪ ಗ್ರಾಮಕ್ಕೆ 13 ವರ್ಷವಾದರೂ ನೆರವು ನೀಡಿಲ್ಲ.
ಹೌದು. ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಯ ಪ್ರವಾಹದಿಂದ 13 ವರ್ಷಗಳ ಹಿಂದೆ ಸ್ಥಳಾಂತರಗೊಂಡಿರುವ ಸಂತ್ರಸ್ತರಿಗೆ ಈವರೆಗೂ ಸೂರು ಕಲ್ಪಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಬಿಸನಾಳಕೊಪ್ಪದ 180 ಕುಟುಂಬಗಳು ಕಳೆದ 13 ವರ್ಷಗಳಿಂದ ತಗಡಿನ ಶೆಡ್‍ನಲ್ಲೆ ವಾಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಸಂತ್ರಸ್ತರು ಮಾತನಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕಳೆದ 13 ವರ್ಷದಿಂದ ನಾವೆಲ್ಲಾ ಈ ತಗಡಿನ ಶೆಡ್‍ನಲ್ಲೆ ಜೀವನ ಸಾಗಿಸುತ್ತಿದ್ದೇವೆ. ಆಗಿನಿಂದಲೂ ಸಾಕಷ್ಟು ರಾಜಕಾರಣಿಗಳು ಭೇಟಿ ಕೊಟ್ಟು ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆಯೇ ಹೊರತಾಗಿ ಯಾರೂ ನಮ್ಮ ನೆರವಿಗೆ ಬಂದಿಲ್ಲ. 13 ವರ್ಷದ ಹಿಂದೆ ನೆರೆ ಬಂದಾಗ ನಾವು ಮನೆಗಳನ್ನು ಕಳೆದುಕೊಂಡು, ತಗಡಿನ ಶೆಡ್‍ನಲ್ಲೆ ಜೀವನ ನಡೆಸುತ್ತಿದ್ದೇವೆ. ರಾಜಕಾರಣಿಗಳು ಚುನಾವಣೆ ಬಂದಾಗ ಬಂದು ಸಹಾಯ ಮಾಡುತ್ತೇವೆ ಎನ್ನುತ್ತಾರೆ. ಆಮೇಲೆ ನಾಪತ್ತೆಯಾಗಿಬಿಡುತ್ತಾರೆ. 13 ವರ್ಷದಿಂದ ಇದೇ ಗೋಳಾಗಿಬಿಟ್ಟಿದೆ ಎಂದು ಗ್ರಾಮಸ್ಥರು ಗೋಳಾಡಿದ್ದಾರೆ.
ಈ ಬಾರಿ ರಾಜ್ಯ ಎದುರಿಸುತ್ತಿರುವ ಮಹಾಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಜಿಲ್ಲೆಯಲ್ಲಿ ಕೂಡ ಪ್ರವಾಹ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಈ ಮಧ್ಯೆ ಬಿಸನಾಳಕೊಪ್ಪದ ಗ್ರಾಮಸ್ಥರಿಗೆ ತಾವು ಈಗ ನೆಲಸಿರುವ ಪ್ರದೇಶಕ್ಕೂ ಎಲ್ಲಿ ನೀರು ನುಗ್ಗುತ್ತದೋ ಎಂಬ ಆತಂಕ ಶುರುವಾಗಿದೆ. ಸಂತ್ರಸ್ತರಿಗೆ ಕೇವಲ ಭರವಸೆಯನ್ನು ಮಾತ್ರ ನೀಡದೇ ಸರ್ಕಾರ ಪರಿಹಾರ ಕಾರ್ಯವನ್ನು ಕೂಡ ಹೇಳಿದಂತೆ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಇಷ್ಟು ವರ್ಷವಂತೂ ನಮ್ಮ ಕಡೆ ನೀವು ಗಮನಕೊಟ್ಟಿಲ್ಲ. ಆದರೆ ಈಗಲಾದರೂ ನಮ್ಮ ಕಷ್ಟಕ್ಕೆ ನೆರವಾಗಿ, ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಿ ಎಂದು ಬಿಸನಾಳಕೊಪ್ಪದ ಗ್ರಾಮಸ್ಥರು ಮನವಿ ಮಾಡಿದ್ದಾರೆ.