ಸಿಎಂ ಅಮೆರಿಕದಲ್ಲಿರುವಾಗ ಬಿಜೆಪಿಯಿಂದ ಆಪರೇಷನ್ ಬಾಂಬ್ -ಶೀಘ್ರ ಬಿಜೆಪಿ ಸರ್ಕಾರ ಎಂದ ಡಿವಿಎಸ್

Public TV
2 Min Read

ಬೆಂಗಳೂರು: ಸಿಎಂ ಅವರು ಅಮೆರಿಕಾದ ಪ್ರವಾಸದಲ್ಲಿದ್ದಾರೆ. ಆದರೆ ಇತ್ತ ಬಿಜೆಪಿಯಿಂದ ಆಪರೇಷನ್ ಕಮಲ ಶುರುವಾಗಿದ್ದು, ಆಪರೇಷನ್ ಕಮಲದ ಬಗ್ಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಸುಳಿವು ಕೊಟ್ಟಿದ್ದಾರೆ.

ರಾಜ್ಯದಲ್ಲಿ ಶೀಘ್ರವೇ ಬಿಜೆಪಿ ಸರ್ಕಾರ ಬರುತ್ತದೆ ಎಂದು ಕೇಂದ್ರ ಸಚಿವರು ಹೇಳುತ್ತಾರೆ. ಇತ್ತ ಸರ್ಕಾರ ರಚನೆಗೆ ಕಾಲ ಕೂಡಿಬರಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಹೇಳುತ್ತಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ನಾಗೇಂದ್ರನನ್ನು ಸಿ.ಪಿ ಯೋಗೇಶ್ವರ್ ಭೇಟಿಯಾಗಿದ್ದಾರೆ.

ಬೆಂಗಳೂರಿನ ಬಂಟರ ಸಂಘದಲ್ಲಿ ಮಾತನಾಡಿದ ಡಿವಿಎಸ್, ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಇರಬಹುದು. ಆದರೆ ಲೋಕಸಭಾ ಚುನಾವಣೆ ನಡೆದಾಗ, ನಮಗೆ ಅವರ ಮೇಲೆ ವಿಶ್ವಾಸ ಇಲ್ಲ. ನಮಗೆ ನಿಮ್ಮ ಮೇಲೆ ವಿಶ್ವಾಸವಿದೆ. ಹೀಗಾಗಿ 28 ರಲ್ಲಿ 26 ಸ್ಥಾನಗಳನ್ನು ಕೊಟ್ಟಿದ್ದೇನೆ. ಈ ರಾಜ್ಯದ ಮುಂದಿನ ಆಗುಹೋಗುಗಳಿಗೆ ಪರೋಕ್ಷವಾಗಿ ನೀವೇ ಜವಬ್ದಾರರಾಗಬೇಕೆಂಬ ಸಂದೇಶವನ್ನು ಈ ರಾಜ್ಯದ ಜನರು ಕೊಟ್ಟಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದರು.

ಕರ್ತವ್ಯಕ್ಕೆ ಮೊದಲ ಆದ್ಯತೆ, ನಂತರ ಅಧಿಕಾರ ಎರಡನೇಯದು. ಒಬ್ಬ ಎಂಎಲ್‍ಎ ಆಗಿ ನಾನು ಏನು ಮಾಡಬೇಕು, ಕೇಂದ್ರ ಸಚಿವನಾಗಿ ರಾಜ್ಯಕ್ಕೆ ಏನು ಮಾಡಬೇಕು ಅದನ್ನು ನಾನು ಮಾಡುತ್ತೇನೆ. ನನ್ನ ಪಕ್ಷದ ಘಟನೆ-ಗೌರವವನ್ನು ಎತ್ತಿ ಹಿಡಿಯುತ್ತೇನೆ. ಅತ್ಯಂತ ಶೀಘ್ರವಾಗಿ ಕರ್ನಾಟಕದಲ್ಲೂ ಕೂಡ ನಮ್ಮ ಸರ್ಕಾರ ಬರುತ್ತದೆ. ಬಿಜೆಪಿ ಸರ್ಕಾರ ಬಂದಾಗ ರಾಜ್ಯ ಮತ್ತು ಕೇಂದ್ರ ಒಂದೇ ದಿಸೆಯಲ್ಲಿ ಮುಂದೆಹೋಗುವಂತೆ ಆಗುತ್ತದೆ. ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡೋಣ ಎಂದು ಡಿವಿಎಸ್ ಆಪರೇಷನ್ ಕಮಲದ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.

ಸರ್ಕಾರ ಸತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಬರ ಇರುವಾಗ ಅಮೆರಿಕಾ ಪ್ರವಾಸ ಬೇಕಿತ್ತಾ? ಕರ್ನಾಟಕ ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ. ಇದನ್ನು ಬಹಳ ಸಮಯ ಸಹಿಸಿಕೊಳ್ಳಲು ಸಾದ್ಯವಿಲ್ಲ. ಯಾವ ಸಮಯದಲ್ಲಾದರೂ ಸರ್ಕಾರ ಬೀಳಬಹುದು. ನಾವು ಯಾವ ಎಂಎಲ್‍ಎ ಅನ್ನು ಬನ್ನಿ ಎಂದು ಕರೆಯುತ್ತಿಲ್ಲ. ಅವರೇ ಬಿಟ್ಟು ಬಂದು ಸರ್ಕಾರ ಬಿದ್ದರೆ, ನಾವು ಅದಕ್ಕೆ ಜವಬ್ದಾರರಲ್ಲ. 13ನೇ ತಿಂಗಳಿಗೇ ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ನಿಮಗೆ ಯೋಗ್ಯತೆ ಇದ್ದರೆ ಸರಿಯಾಗಿ ಆಡಳಿತ ನಡೆಸಿ, ಇಲ್ಲ ಆಡಳಿತವನ್ನು ಬಿಟ್ಟು ಹೋಗಿ. ರಾಜ್ಯದ ಮತದಾರರು ಚುನಾವಣೆಗೆ ಸಿದ್ಧರಿಲ್ಲ. ಅವರು ತಮ್ಮ ಕಷ್ಟಗಳ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಯಡಿಯೂರಪ್ಪ ಆಕ್ರೋಶದಿಂದ ಮಾತನಾಡಿದರು.

Share This Article
Leave a Comment

Leave a Reply

Your email address will not be published. Required fields are marked *