ವಿಜಯಪುರ: ನೀರಿನಲ್ಲಿ ಈಶಾನ್ಯ ಸಾರಿಗೆ ಬಸ್ಸೊಂದು ಸಿಲುಕಿ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರು ಪರದಾಡಿದ ಘಟನೆ ಜಿಲ್ಲೆಯ ಕೂಡಗಿ ಗ್ರಾಮದಲ್ಲಿ ನಡೆದಿದೆ.
ಕೂಡಗಿ ಗ್ರಾಮದಲ್ಲಿನ ಎನ್‍ಟಿಪಿಸಿ ರೈಲು ಸೇತುವೆ ಕೆಳಗಡೆ ಸಂಗ್ರಹಗೊಂಡ 4 ಅಡಿ ನೀರಲ್ಲಿ ಬಸ್ ಸಿಲುಕಿಕೊಂಡಿತ್ತು. ವಿಜಯಪುರದಿಂದ ಮಸೂತಿ ಗ್ರಾಮಕ್ಕೆ ಈ ಬಸ್ ತೆರಳುತಿತ್ತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲದಿಂದಲೂ ನೀರಿನಿಂದ ಬಸ್ ಹೊರ ತೆಗೆಯಲು ಶತಪ್ರಯತ್ನ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಮಸೂತಿ ಗ್ರಾಮಕ್ಕೆ ತೆರೆಳಬೇಕಿದ್ದ ಪ್ರಯಾಣಿಕರು ಪರ್ಯಾಯ ವಾಹನದಲ್ಲಿ ಗ್ರಾಮಗಳಿಗೆ ತೆರಳಿದರು.
ಮಧ್ಯರಾತ್ರಿಯವರೆಗೂ ಚಾಲಕ ಹಾಗೂ ನಿರ್ವಾಹಕ ಪರದಾಡಿ, ಹರಸಾಹಸ ಪಟ್ಟು ಬಸ್ಸನ್ನು ನೀರಿನಿಂದ ಹೊರ ತೆಗೆದಿದ್ದಾರೆ. ಈ ಸೇತುವೆಯಲ್ಲಿ ಕೇವಲ ಬಸ್ ಮಾತ್ರವಲ್ಲದೇ ಇತರೆ ವಾಹನಗಳು ಹಾಗೂ ಬೈಕ್ ಸವಾರರು ಸಹ ಪರದಾಡಿದ್ದಾರೆ. ಅವೈಜ್ಞಾನಿಕವಾಗಿ ಸೇತುವೆ ನಿರ್ಮಾಣ ಹಿನ್ನೆಲೆ ಮಳೆಯಾದರೆ ಸಾಕು ಇಲ್ಲಿ ನೀರು ಸಂಗ್ರಹಗೊಳ್ಳುತ್ತದೆ. ಹೀಗಾಗಿ ಸರಿಯಾಗಿ ಕಾಮಗಾರಿ ಮಾಡಿಲ್ಲ ಎಂದು ಸೇತುವೆ ನಿರ್ಮಾಣ ಕಾಮಗಾರಿ ಗುತ್ತಿಗೆದಾರನ ವಿರುದ್ಧ ಪ್ರಯಾಣಿಕರು, ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು.