ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಬಸ್ ಟಿಕೆಟ್ ದರ ಏರಲ್ಲ: ಸಾರಿಗೆ ಸಚಿವ ಡಿ ಸಿ ತಮ್ಮಣ್ಣ

Public TV
1 Min Read

ಬೆಂಗಳೂರು: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪದವಿವರೆಗೆ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ನೀಡುವ ನಿರ್ಧಾರವನ್ನು ಕೈಗೊಳ್ಳಲಾಗಿದ್ದು ಶೀಘ್ರದಲ್ಲೇ ಮುಖ್ಯಮಂತ್ರಿಗಳೇ ಈ ಘೋಷಣೆ ಮಾಡುತ್ತಾರೆ ಎಂದು ತಿಳಿಸಿದರು.

ಉಚಿತ ಬಸ್ ಪಾಸ್ ನೀಡಿದರೆ ಇಲಾಖೆಗೆ ಸುಮಾರು 620 ಕೋಟಿ ರೂ. ಹೊರೆಯಾಗುತ್ತದೆ. ಇದರಲ್ಲಿ 15% ರಷ್ಟನ್ನು ಸಂಸ್ಥೆ ಭರಿಸಲಿದ್ದು ಉಳಿದದ್ದನ್ನು ಶಿಕ್ಷಣ ಇಲಾಖೆ ಅಥವಾ ಸರ್ಕಾರ ಭರಿಸಿದರೇ ಶೀಘ್ರವೇ ರಾಜ್ಯದ ಒಟ್ಟು 19.6 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ಜಾರಿಗೊಳಿಸಲಾಗುತ್ತದೆ ಎಂದು ಹೇಳಿದರು.

ಖಾಸಗಿ ಡೀಸೆಲ್ ವಾಹನಗಳಿಗೆ ಕಡಿವಾಣಕ್ಕೆ ಚಿಂತನೆ ನಡೆಸಲಾಗಿದೆ. ಅಲ್ಲದೇ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ಪಾರ್ಕಿಂಗ್ ಗೆ ತೊಂದರೆಯಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೊಸ ಕಾರುಗಳ ಖರೀದಿಗೆ ಪಾರ್ಕಿಂಗ್ ಸೌಲಭ್ಯ ಇದ್ದರೇ ಮಾತ್ರ ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಲು ಯೋಜನೆ ರೂಪಿಸಲಾಗುವುದು. ಸಾರ್ವಜನಿಕರು ಹೆಚ್ಚಾಗಿ ಸಮೂಹ ಸಾರಿಗೆಯನ್ನು ಬಳಸಬೇಕು ಎಂದರು.

ಡೀಸೆಲ್ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳು ಬಸ್ ಟಿಕೆಟ್ ದರ ಏರಿಸುವಂತೆ ಪ್ರಸ್ತಾವನೆ ಸಲ್ಲಿಸಿವೆ. ಆದರೆ ಯಾವುದೇ ಕಾರಣಕ್ಕೂ ಬಸ್ ಟಿಕೆಟ್ ದರ ಏರಿಕೆ ಮಾಡುವುದಿಲ್ಲ. ಈ ಕುರಿತು ಮುಖ್ಯಮಂತ್ರಿಗಳು ಸಭೆ ಕರೆದಿದ್ದು, ಸಭೆಯಲ್ಲಿ ಬಸ್ ದರ ಏರಿಸುವ ಬದಲು ಸಾರಿಗೆ ಸಂಸ್ಥೆಗಳಲ್ಲಿ ಆಗುತ್ತಿರುವ ನಷ್ಟವನ್ನು ಕಡಿಮೆಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ವಿವರಿಸಿದರು.

ನಮ್ಮ ಮೆಟ್ರೋ ಸೇವೆಯನ್ನು ಸಾರಿಗೆ ಇಲಾಖೆಯಡಿ ತರುವುದಕ್ಕೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇವೆ. ನಮ್ಮ ಮೆಟ್ರೋ ಸಾರಿಗೆ ಇಲಾಖೆಯಡಿ ಬಂದರೆ ಹಲವು ಸಮಸ್ಯೆಗಳು ಬಗೆಹರಿಯುತ್ತವೆ. ಸಾರಿಗೆ ಸಂಸ್ಥೆಯು ಮೆಟ್ರೋಗಿಂತ ಯಾವ ರೀತಿಯಿಂದಲೂ ಕಮ್ಮಿ ಇಲ್ಲ. ಆದರೆ ಸಮಯದ ಉಳಿತಾಯಕ್ಕೆ ಜನ ಮೆಟ್ರೋವನ್ನೇ ಅವಲಂಭಿಸಿರುವುದು ಅನಿವಾರ್ಯ. ಅಲ್ಲದೆ ಮೆಟ್ರೋ ಸಂಪರ್ಕಕ್ಕೆ ಸಂಸ್ಥೆಯೂ ಅನೇಕ ಹೊಸ ಬಸ್‍ಗಳನ್ನು ಕಲ್ಪಿಸಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *