4 ವರ್ಷದ ಬಳಿಕ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಗೆದ್ದು ಬೀಗಿದ ಬಿಜೆಪಿ

Public TV
2 Min Read

ಬೆಂಗಳೂರು: ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದಿದ್ದರೂ ಅಧಿಕಾರದಿಂದ ವಂಚಿತಗೊಂಡಿದ್ದ ಬಿಜೆಪಿ ಈ ಬಾರಿ ಬಿಬಿಎಂಪಿ ಮೇಯರ್ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ಇಂದು ನಡೆದ ಚುನಾವಣೆಯಲ್ಲಿ ಒಟ್ಟು 129 ಮತಗಳನ್ನು ಪಡೆಯುವ ಮೂಲಕ ಜೋಗುಪಾಳ್ಯ ವಾರ್ಡಿನ ಬಿಜೆಪಿ ಸದಸ್ಯ ಗೌತಮ್ ಕುಮಾರ್ ಜೈನ್ ಮೇಯರ್ ಆಗಿ ಆಯ್ಕೆ ಆಗಿದ್ದರೆ, ಬೊಮ್ಮನಹಳ್ಳಿ ವಾರ್ಡ್​ನ  ರಾಮ್ ಮೋಹನ್ ರಾಜು ಉಪ ಮೇಯರ್ ಆಗಿ ಆಯ್ಕೆ ಆಗಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದ್ದರೂ ಕೊನೆ ಕ್ಷಣದಲ್ಲಿ ಪಕ್ಷೇತರ ಪಾಲಿಕೆ ಸದಸ್ಯರ ಜೊತೆಗಿನ ಮಾತುಕತೆ ಯಶಸ್ವಿಯಾಗದ ಪರಿಣಾಮ ಮೇಯರ್ ಹುದ್ದೆ ಕೈ ತಪ್ಪಿತ್ತು. ಆದರೆ ಈ ಬಾರಿ ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ ಪರಿಣಾಮ ಬಿಜೆಪಿ ಬಿಬಿಎಂಪಿ ಅಧಿಕಾರವನ್ನು ಹಿಡಿದಿದೆ.

ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ 257 ಮಂದಿ ಮತ ಚಲಾಯಿಸುವ ಹಕ್ಕು ಹೊಂದಿದ್ದರೂ 249 ಮಂದಿ ಹಾಜರಾಗಿದ್ದರು. 8 ಮಂದಿ ಗೈರಾಗಿರುವ ಕಾರಣ ಬಹುಮತಕ್ಕೆ 125 ಸದಸ್ಯರ ಬೆಂಬಲ ಬೇಕಿತ್ತು. ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಪದ್ಮನಾಭ ರೆಡ್ಡಿ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದರು.

ಪಕ್ಷೇತರ ಸದಸ್ಯರು ಬಿಜೆಪಿ ಕೈ ಹಿಡಿಯಲಿರುವ ಕಾರಣ ಚುನಾವಣೆಗೂ ಮೊದಲೇ ಈ ಬಾರಿ ಮೇಯರ್ ಪಟ್ಟ ಸಿಗಲಿದೆ ಎನ್ನುವ ನಿರೀಕ್ಷೆ ಇತ್ತು. ನಿರೀಕ್ಷಿಸಿದಂತೆ 5 ಮಂದಿ ಪಕ್ಷೇತರ ಸದಸ್ಯರು ಬಿಜೆಪಿಯನ್ನು ಬೆಂಬಲಿಸಿದ್ದರು. ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷ ಗುಪ್ತಾ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಗೆದ್ದಿದ್ದು ಹೇಗೆ?
ಕಳೆದ 4 ವರ್ಷಗಳಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳನ್ನು ಮೇಯರ್, ಉಪ ಮೇಯರ್ ಸ್ಥಾನಕ್ಕೆ ಗೆಲ್ಲಿಸಲು ರಣತಂತ್ರ ರೂಪಿಸಿ, ಯಶಸ್ವಿಯಾಗುತ್ತಿದ್ದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್ ಮತ್ತು ಮುನಿರತ್ನ ಶಾಸಕ ಸ್ಥಾನದಿಂದ ಅನರ್ಹಗೊಂಡು, ಕಾಂಗ್ರೆಸ್‍ನಿಂದ ದೂರ ಉಳಿದಿದ್ದರು.

ರಾಜ್ಯಮಟ್ಟದಲ್ಲಿಮೈತ್ರಿ ಮುರಿದುಕೊಂಡಿದ್ದರೂ ಬಿಬಿಎಂಪಿಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮೇಯರ್ ಸ್ಥಾನಕ್ಕೆ ಸತ್ಯನಾರಾಯಣ ನಾಮಪತ್ರ ಸಲ್ಲಿಕೆ ಮಾಡಿದ್ದರೆ ಉಪಮೇಯರ್ ಸ್ಥಾನಕ್ಕೆ ಗಂಗಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್‍ನಿಂದ ಅನರ್ಹಗೊಂಡಿರುವ ಶಾಸಕ ಗೋಪಾಲಯ್ಯ ಅವರ ಪತ್ನಿ ಹೇಮಲತಾ ಅವರು ಮೈತ್ರಿ ಅಭ್ಯರ್ಥಿ ಸತ್ಯನಾರಾಯಣ ಅವರನ್ನು ಬೆಂಬಲಿಸಿದ್ದರು.

ಗೈರಾದವರು ಯಾರು?
ಕಾಂಗ್ರೆಸ್‍ನಿಂದ ಸಂಸದ ಡಿ.ಕೆ ಸುರೇಶ್, ರಾಜ್ಯಸಭಾ ಸದಸ್ಯರಾದ ಕೆ.ಪಿ ರಾಮಮೂರ್ತಿ, ಜೈರಾಮ್ ರಮೇಶ್, ಪರಿಷತ್ ಸದಸ್ಯ ರಘು ಆಚಾರ್, ಹೇರೋಹಳ್ಳಿ ವಾರ್ಡಿನ ರಾಜಣ್ಣ ಗೈರಾಗಿದ್ದರೆ ಬಿಜೆಪಿಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಜೆಡಿಎಸ್‍ನಿಂದ ದಾಸರಹಳ್ಳಿ ಶಾಸಕ ಮಂಜುನಾಥ್ ಗೈರು ಹಾಜರಿ ಹಾಕಿದ್ದರು.

Share This Article
Leave a Comment

Leave a Reply

Your email address will not be published. Required fields are marked *