ಗೋರುಕನ ರೆಸಾರ್ಟಿಗೆ ನಿಷೇಧ-ಚಾಮರಾಜನಗರ ಡಿಸಿ ಆದೇಶ

Public TV
2 Min Read

ಚಾಮರಾಜನಗರ: ಗಿರಿಜನರನ್ನು ಉದ್ಧರಿಸಲು ಬಂದ ಡಾ. ಸುದರ್ಶನ್ ಅವರಿಗೆ ತಮ್ಮ ಅಭಿವೃದ್ಧಿಯೇ ಮುಖ್ಯವಾಗಿದ್ದು ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಜಿಲ್ಲೆಯಲ್ಲಿ ಕೇಳಿಬರುತ್ತಿವೆ.

ಆದಿವಾಸಿಗಳಲ್ಲಿ ಗೌರವಯುತ ಮೌಲ್ಯಪ್ರಧಾನ ಬದುಕಿನ ಆಶಯ ಮೂಡಿಸುವಿಕೆ, ಬದುಕಲು ಬೇಕಾದ ಅವಶ್ಯಕ ಸಾಮಥ್ರ್ಯ ಹಾಗೂ ಜ್ಞಾನಾಭಿವೃದ್ಧಿಯ ನಿರ್ಮಾಣ ಸೇರಿದಂತೆ ಇತರೆ ಧ್ಯೇಯಗಳೊಂದಿಗೆ 1973ರಲ್ಲಿ ಬಿಳಿಗಿರಿರಂಗನಬೆಟ್ಟಕ್ಕೆ ಆಗಮಿಸಿದ ಡಾ. ಸುದರ್ಶನ ಅವರು 1981ರಲ್ಲಿ `ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ’ ಸ್ಥಾಪಿಸಿ ಅಪಾರ ಸೇವೆಗೈದು 1994ರಲ್ಲಿ ವಿಶ್ವದ ಪರ್ಯಾಯ ನೊಬೆಲ್ ಪ್ರಶಸ್ತಿ ಎಂದು ಪರಿಗಣಿಸುವ `ರೈಟ್ ಲೈವ್ಲಿ ಹುಡ್’ ಪ್ರಶಸ್ತಿ ಪಡೆದು ನಾಡಿಗೆ ಕೀರ್ತಿ ತಂದರು.

ಹಲವೆಡೆ ಗೌರವ, ಸನ್ಮಾನಕ್ಕೆ ಭಾಜನರಾದ ಡಾ.ಸುದರ್ಶನ್ ಅವರು ದಿನ ಕಳೆದಂತೆ ಗಿರಿಜನರಿಗೆ ಬದುಕು ಕಟ್ಟಿಕೊಡುವ ನೆಪದಲ್ಲಿ ತಮ್ಮ ಗುರಿ ಸಾಧನೆಗೆ ಮುಂದಾಗಿದ್ದಾರೆ. ಜನಸೇವೆಯ ಹೆಸರಲ್ಲಿ ತಮ್ಮ ಜೇಬನ್ನು ಭರ್ತಿ ಮಾಡಿಕೊಳ್ಳುವುದರ ಜೊತೆಗೆ ಕಾನೂನಿನ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳೀಬರುತ್ತಿವೆ. ಈ ಹಿನ್ನೆಲೆ ಚಾಮರಾಜನಗರ ಡಿಸಿ ಬಿ.ಬಿ ಕಾವೇರಿ ಅವರು ಗೋರುಕನ ರೆಸಾರ್ಟಿಗೆ ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ.

ಭೂ ಪರಿವರ್ತನಾ ಆದೇಶ ರದ್ದು:
ಯಳಂದೂರು ತಾಲೂಕಿನ ಅಗರ ಹೋಬಳಿಯ ಬಿಳಿಗಿರಿರಂಗನಬೆಟ್ಟ ಗ್ರಾಮದ ಸರ್ವೆ ನಂ. 4/68ರ 8 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಡಾ. ಸುದರ್ಶನ್ ಅವರು ನಿರ್ಮಿಸಿರುವ ಪರಿಸರ ಶಿಕ್ಷಣ ಹಾಗೂ ಆಯುರ್ವೇದ ಚಿಕಿತ್ಸಾ ಕೇಂದ್ರ `ಗೊರುಕನ’ ಅನ್ನು ವಾಣಿಜ್ಯ ಉದ್ದೇಶಕ್ಕೆ (ರೆಸಾರ್ಟ್) ಬಳಸಿಕೊಳ್ಳಲಾಗಿದೆ ಎಂಬ ಕಾರಣಕ್ಕೆ ಭೂ ಪರಿವರ್ತನೆ ಆದೇಶವನ್ನು ರದ್ದುಪಡಿಸಿ ಜಿಲ್ಲಾಕಾರಿ ಬಿ.ಬಿ ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಅಂತಿಮ ಅಧಿಸೂಚನೆಯಂತೆ ಬಿಆರ್‌ಟಿ ವ್ಯಾಪ್ತಿಯ ಒಳಗಡೆ ಹೊಸದಾಗಿ ಯಾವುದೇ ವಾಣಿಜ್ಯ ಉದ್ದೇಶದಿಂದ ಹೋಟೆಲ್ ಮತ್ತು ರೆಸಾರ್ಟ್ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಈ ವಿಚಾರವಾಗಿ ಮಾಲೀಕ ಡಾ. ಸುದರ್ಶನ್ ಅವರಿಗೆ ಸಾಕಷ್ಟು ಕಾಲಾವಕಾಶ ನೀಡಿದರೂ ಸಹ ಪ್ರಸ್ತಾಪಿತ ಜಮೀನಿನಲ್ಲಿ ವಾಣಿಜ್ಯ ಉದ್ದೇಶವಾದ ರೆಸಾರ್ಟ್ ಚಟುವಟಿಕೆಗಳನ್ನು ನಡಸುತ್ತಿರುವುದಿಲ್ಲ ಎಂಬುದನ್ನು ಸಮರ್ಥಿಸಿಕೊಳ್ಳಲು ವಿಫಲರಾಗಿದ್ದಾರೆ ಹಾಗೂ ಅನ್ಯಕ್ರಾಂತ ನೀಡಿದ ಮೂಲ ಉದ್ದೇಶಕ್ಕೆ ಬಳಸಿಕೊಳ್ಳದೆ. ವಿಧಿಸಲಾದ ಷರತ್ತನ್ನು ಪಾಲಿಸದೆ ಇರುವುದು ಧೃಡಪಟ್ಟ ಹಿನ್ನೆಲೆ 2019ರ ಡಿ. 27ರಂದು ಜಿಲ್ಲಾಕಾರಿ ಬಿ.ಬಿ ಕಾವೇರಿ ಈ ಆದೇಶವನ್ನು ಹೊರಡಿಸಿದ್ದಾರೆ.

‘ಗೊರುಕನ’ ರಹಸ್ಯ ಬಯಲು:
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅನುದಾನ ಹಾಗೂ ಸಾಲದ ನೆರವು ಪಡೆದು ಬಿಆರ್‍ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಡಾ. ಸುದರ್ಶನ್ ಅವರು ಪ್ರಾರಂಭಿಸಿದ `ಗೊರುಕನ’ ಹೆಸರಿನ ಪರಿಸರ ಶಿಕ್ಷಣ ಹಾಗೂ ಆಯುರ್ವೇದ ಚಿಕಿತ್ಸಾ ಕೇಂದ್ರವನ್ನು ಆರಂಭಿಸಿದರು. ಗಿರಿಜನರ ಸಮಗ್ರ ಅಭಿವೃದ್ಧಿಗೆ ಹಾಗೂ ಪರಿಸರ ಸಂರಕ್ಷಣೆಗೆ ಪೂರಕವಾದ ಉದ್ದೇಶದಿಂದ ಲಾಭ ರಹಿತ ಸ್ವಯಂ ಸೇವಾ ಸಂಸ್ಥೆಯಾಗಿ ಗೊರುಕನ ಕಾರ್ಯ ನಿರ್ವಹಿಸುತ್ತಿದೆ.

ಇಲ್ಲಿಗೆ ಪರಿಸರ ತಜ್ಞರು, ಹಿರಿಯ ಅಧಿಕಾರಿಗಳು, ಗಣ್ಯರು, ಸಾಹಿತಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಭೇಟಿ ನೀಡಿ ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದ್ದರು. ಈ ಮೂಲಕ ಉದ್ದೇಶದ ಹೊರತಾಗಿ ಡಾ. ಸುದರ್ಶನ್ ಅವರು ರೆಸಾರ್ಟ್ ನಡೆಸುತ್ತಿದ್ದ ರಹಸ್ಯ ಜಿಲ್ಲಾಕಾರಿ ಬಿ.ಬಿ ಕಾವೇರಿ ಹೊರಡಿಸಿರುವ ಆದೇಶದಿಂದ ಬಯಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *