ಭಾರತದ ಮೊದಲ ಮಹಿಳಾ ಶಾಸಕಿ ಡಾ. ಮುತ್ತುಲಕ್ಷ್ಮಿ ರೆಡ್ಡಿಗೆ ಗೂಗಲ್ ಡೂಡಲ್ ಗೌರವ

Public TV
2 Min Read

ನವದೆಹಲಿ: ಇಂದು ಭಾರತದ ಮೊದಲ ಮಹಿಳಾ ಶಾಸಕಿ ಡಾ. ಮುತ್ತುಲಕ್ಷ್ಮಿ ರೆಡ್ಡಿ ಅವರ 133ರ ಹುಟ್ಟುಹಬ್ಬ. ಈ ಹಿನ್ನೆಲೆ ಗೂಗಲ್ ತನ್ನ ಡೂಡಲ್‍ನಲ್ಲಿ ಗೌರವ ಸಲ್ಲಿಸಿದೆ.

ಭಾರತೀಯ ವೈದ್ಯೆ, ಪತ್ರಕರ್ತೆ, ಸಾಮಾಜಿಕ ಸುಧಾರಕಿ, ಪದ್ಮಭೂಷಣ ಪ್ರಶಸ್ತಿ ವಿಜೇತೆ, ಹಾಗೂ ಭಾರತದ ಮೊಟ್ಟ ಮೊದಲ ಮಹಿಳಾ ಶಾಸಕಿ ಎಂಬ ಕೀರ್ತಿಗೆ ಡಾ. ಮುತ್ತುಲಕ್ಷ್ಮಿ ರೆಡ್ಡಿ ಭಾಜನರಾಗಿದ್ದಾರೆ. ಇಂದು ಈ ಸಾಧಕಿಯ ಜನ್ಮದಿನವಾಗಿದೆ.

ಮುತ್ತುಲಕ್ಷ್ಮಿ ಅವರು, 1886ರ ಜುಲೈ 30ರಂದು ತಮಿಳುನಾಡಿನ ಪುದುಕೋಟೆಯ ರಾಜವಂಶದ ಕುಟುಂಬದಲ್ಲಿ ಜನಿಸಿದ್ದರು. ಮುತ್ತುಲಕ್ಷ್ಮಿ ಅವರ ತಂದೆ ಎಸ್.ನಾರಾಯಣಸ್ವಾಮಿ ಹಾಗೂ ತಾಯಿ ಹೆಸರು ಚಂದ್ರಮಳಲ್. ಮಹಿಳಾ ಶಿಕ್ಷಣಕ್ಕೆ ಭಾರಿ ವಿರೋಧವಿದ್ದ ಕಾಲದಲ್ಲೇ ಮುತ್ತುಲಕ್ಷ್ಮಿ ಅವರು ಉನ್ನತ ಶಿಕ್ಷಣ ಪಡೆದಿದ್ದರು. 1912ನಲ್ಲಿ ಪದವಿ ಮುಗಿಸಿದ ಮುತ್ತುಲಕ್ಷ್ಮಿ ಅವರು ಭಾರತದಲ್ಲಿ ವೈದ್ಯಕೀಯ ಪದವಿ ಪಡೆದು ಮೊದಲ ಮಹಿಳಾ ವೈದ್ಯರಾದರು.

1914ರಲ್ಲಿ ಡಾ. ಸುಂದರ ರೆಡ್ಡಿ ಅವರನ್ನು ಮುತ್ತುಲಕ್ಷ್ಮಿ ಅವರು ವಿವಾಹವಾದರು. 1927ರಲ್ಲಿ ಇವರು ಮದ್ರಾಸ್ ಶಾಸಕಾಂಗ ಸಭೆಗೆ ನೇಮಕಗೊಂಡರು. ಈ ಮೂಲಕ ಬ್ರಿಟಿಷ್ ಇಂಡಿಯಾದ ಮೊದಲ ಮಹಿಳಾ ಶಾಸಕಿಯಾಗಿ ಹೊರಹೊಮ್ಮಿದರು. ದೇವದಾಸಿ ಪದ್ಧತಿಯನ್ನು ನಿಷೇಧಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.

1930ರಲ್ಲಿ ಅವರು ಮದ್ರಾಸ್ ಶಾಸನ ಸಭೆಗೆ ರಾಜೀನಾಮೆ ನೀಡಿದರು. ಬಳಿಕ ಮಹಿಳಾ ಸಂಘದ ಸಂಸ್ಥಾಪಕ-ಅಧ್ಯಕ್ಷರಾಗಿದ್ದರು ಮತ್ತು ಮದ್ರಾಸ್ ಕಾರ್ಪೊರೇಶನ್ ನ ಮೊದಲ ಆಲ್ಡರ್ ವುಮನ್ ಆಗಿ ನೇಮಕವಾದರು. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮುತ್ತುಲಕ್ಷ್ಮಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಮಹಾತ್ಮ ಗಾಂಧಿಜೀ ಅವರೊಂದಿಗೆ ಸೇರಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಉಪ್ಪಿನ ಸತ್ಯಾಗ್ರಹದಲ್ಲಿ ಕೂಡ ಮುತ್ತುಲಕ್ಷ್ಮಿ ಅವರು ಭಾಗವಹಿಸಿದ್ದರು.

ಕ್ಯಾನ್ಸರ್‍ನಿಂದ ತಮ್ಮ ಸಹೋದರಿ ತೀರಿಹೋದ ಬಳಿಕ ಮುತ್ತುಲಕ್ಷ್ಮಿ ಅವರು 1954ರಲ್ಲಿ ಚೆನ್ನೈನಲ್ಲಿ ಅಡ್ಯಾರ್ ಕ್ಯಾನ್ಸರ್ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯೂ ವಿಶ್ವದ ಅತ್ಯಂತ ಗೌರವಾನ್ವಿತ ಅಂಕಾಲಾಜಿ ಕೇಂದ್ರಗಳಲ್ಲಿ ಒಂದಾಗಿದ್ದು, ಪ್ರತಿವರ್ಷ 80 ಸಾವಿರಕ್ಕೂ ಹೆಚ್ಚು ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುತ್ತುಲಕ್ಷ್ಮಿ ಅವರು ದೇಶಕ್ಕೆ ನೀಡಿರುವ ಅತ್ಯುತ್ತಮ ಕೊಡುಗೆಗಾಗಿ ಭಾರತ ಸರ್ಕಾರ 1956ರಲ್ಲಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. 1968ರ ಜುಲೈ 22ರಂದು ಚೆನ್ನೈನಲ್ಲಿ ಮುತ್ತುಲಕ್ಷ್ಮಿ ಅವರು ನಿಧನರಾದರು.

Share This Article
Leave a Comment

Leave a Reply

Your email address will not be published. Required fields are marked *