ಯಾರೇ ಎಷ್ಟೇ ಹತ್ರ ಇದ್ದರೂ, ತಮ್ಮ ಮೊಬೈಲ್ ಮುಟ್ಟೋಕೆ ಬಿಡೋದಿಲ್ಲ- ಅಂತರಂಗದ ಕಥೆ ಹೇಳಲು ಬರ್ತಿದೆ ‘ಗೂಗಲ್’ ಸರ್ಚ್

Public TV
1 Min Read

ಬೆಂಗಳೂರು: ಗೀತ ಸಾಹಿತಿ, ಕವಿ ವಿ.ನಾಗೇಂದ್ರ ಪ್ರಸಾದ್ ನಿರ್ದೇಶಿಸಿರುವ ‘ಗೂಗಲ್-ಈ ಭೂಮಿ ಬಣ್ಣದ ಬುಗುರಿ’ ಸಿನಿಮಾ ಫೆಬ್ರವರಿ 16ರಂದು ತೆರೆಕಾಣಲಿದೆ. ಫೆಬ್ರವರಿ 3ರಂದು ಗೂಗಲ್ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಚಂದನವನದಲ್ಲಿ ಭರವಸೆಯನ್ನು ಮೂಡಿಸಿದೆ.

2.27 ನಿಮಿಷದ ಗೂಗಲ್ ಟ್ರೇಲರ್ ಹಲವು ವಿಷಯಗಳನ್ನು ನೋಡುಗರಿಗೆ ವಿಭಿನ್ನವಾಗಿ ನೀಡಲಿದೆ. ಚಿತ್ರದ ಟ್ರೇಲರ್‍ನಲ್ಲಿ ವಿ.ನಾಗೇಂದ್ರ ಪ್ರಸಾದ್ ಸಿನಿಮಾದ ಹೈಲೈಟ್ಸ್ ಹೇಳಿದ್ದಾರೆ. ಯಾರ ಹತ್ತಿರವೂ ಹೇಳಿಕೊಳ್ಳಕ್ಕಾಗದ ವಿಷಯವನ್ನು ಸ್ನೇಹಿತರ ಬಳಿ ಹೇಳಿ ಕೊಳ್ಳಬಹುದು. ಐ ಲವ್ ಯು ಅಂತಾ ಹೇಳೋಕೆ ಒಂದು ಕ್ಷಣ ಸಾಕು ಆದ್ರೆ ಅದನ್ನು ಪ್ರೂವ್ ಮಾಡಲು ಇಡೀ ಜೀವನವೇ ಬೇಕು. ಗಂಡನಿಗೆ ಮನೆಯೇ ಪ್ರಪಂಚ, ಹೆಂಡತಿಗೆ ಪತಿಯೇ ಪ್ರಪಂಚ, ನಮ್ಮಿಬ್ಬರಿಗೆ ಮಕ್ಕಳೇ ಪ್ರಪಂಚ. ಯಾರೇ ಎಷ್ಟೇ ಹತ್ರ ಇದ್ದರೂ, ತಮ್ಮ ಮೊಬೈಲ್ ಮುಟ್ಟೋಕೆ ಬಿಡೋದಿಲ್ಲ. ಆದ್ರೆ ಅಂತರಂಗದ ಕಥೆ ಹೇಳಲು ಬರ್ತಿದೆ ‘ಗೂಗಲ್’ ಸರ್ಚ್ ಎಂಬ ಹಿನ್ನೆಲೆ ಧ್ವನಿಯಲ್ಲಿ ಟ್ರೇಲರ್ ಮೂಡಿ ಬಂದಿದೆ.

2001ರಲ್ಲಿ ನಡೆದ ಸತ್ಯ ಘಟನೆ ಆಧಾರಿತ ಸಿನಿಮಾ ಎಂದು ವಿ.ನಾಗೇಂದ್ರ ಪ್ರಸಾದ್ ಟ್ರೇಲರ್ ಅರಂಭದಲ್ಲಿಯೇ ಹೇಳಿಕೊಂಡಿದ್ದಾರೆ. ಚಿತ್ರದಲ್ಲಿನ ಹೆಚ್ಚಿನ ಹೊಸ ಕಲಾವಿದರು ನಟಿಸಿದ್ದಾರೆ. ನಾಯಕ ನಟನಾಗಿ ನಾಗೇಂದ್ರ ಪ್ರಸಾದ್ ನಟಿಸಿದ್ರೆ, ನಾಯಕಿಯಾಗಿ ಮೊಗ್ಗಿನ ಮನಸ್ಸಿನ ಹುಡುಗಿ ಶುಭಾ ಪೂಂಜಾ ಬಣ್ಣ ಹಚ್ಚಿದ್ದಾರೆ.

ಈ ಹಿಂದೆಯೇ ಈ ಚಿತ್ರದ ಫೋಟೋವೊಂದು ಸಖತ್ ವೈರಲ್ ಆಗಿತ್ತು. ನಾಗೇಂದ್ರ ಪ್ರಸಾದ್ ಹಾಗೂ ಶುಭಪೂಂಜಾ ಹಾರ ಬದಲಾಯಿಸಿಕೊಳ್ಳುವ ಫೋಟೋ ಸುದ್ದಿ ಆಗಿತ್ತು. ಇವರಿಬ್ಬರು ಮದುವೆಯೇ ಆಗಿದ್ದಾರೆ ಎಂಬಂತೆ ಸುದ್ದಿಗಳು ಹರಿದಾಡಿದ್ದವು. ಕಡೆಗೆ ನಾಗೇಂದ್ರ ಪ್ರಸಾದ್ ಅವರೇ ಸ್ವತಃ ವಿವರಣೆ ನೀಡಬೇಕಾಯಿತು. ಚಿತ್ರೀಕರಣ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಮದುವೆ ಸೀನ್ ಫೋಟೋ ತೆಗೆದು ಈ ರೀತಿ ಮಾಡಿದ್ದಾರೆಂದು ಸ್ಪಷ್ಟೀಕರಣ ನೀಡಿದ್ದರು.

ನಾಗೇಂದ್ರ ಪ್ರಸಾದ್ ‘ಉತ್ಸವ ಮೂವೀಸ್’ ಎಂಬ ಬ್ಯಾನರ್ ಹುಟ್ಟು ಹಾಕಿ, ‘ಗೂಗಲ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನ, ಸಂಭಾಷಣೆ ಮತ್ತು ಸಂಗೀತ ಎಲ್ಲವನ್ನು ವಿ.ನಾಗೇಂದ್ರ ಪ್ರಸಾದ್ ನಿರ್ವಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *