ಬಿಡದಿ-ರಾಮನಗರ ಮಧ್ಯೆ ಹಳಿ ತಪ್ಪಿದ ಗೂಡ್ಸ್ ರೈಲು – ಬೆಂಗಳೂರು-ಮೈಸೂರು ರೈಲ್ವೆ ಸಂಚಾರದಲ್ಲಿ ವ್ಯತ್ಯಯ

1 Min Read

ರಾಮನಗರ: ಬಿಡದಿ ಮತ್ತು ರಾಮನಗರದ ಮಧ್ಯೆ ಗೂಡ್ಸ್ ರೈಲೊಂದು ಹಳಿ ತಪ್ಪಿದ್ದು, ಅದೃಷ್ಟವಶಾತ್ ಅನಾಹುತ ತಪ್ಪಿದೆ. ಇತ್ತ ಬೆಂಗಳೂರು-ಮೈಸೂರು (Bengaluru-Mysuru Train) ರೈಲ್ವೆ ಸಂಚಾರದಲ್ಲಿ ವ್ಯತ್ಯಯವಾಗಿದೆ.

ಬೆಂಗಳೂರಿನಿಂದ ಮದ್ದೂರಿಗೆ ಹೋಗುತ್ತಿದ್ದ ಖಾಲಿ ಗೂಡ್ಸ್ ರೈಲು ಬಿಡದಿ ಬಳಿಯ ದಾಸಪ್ಪನದೊಡ್ಡಿ ಬಳಿ ಸಂಜೆ 5 ಗಂಟೆ ಸುಮಾರಿಗೆ ತಾಂತ್ರಿಕ ದೋಷದಿಂದ ಹಳಿ ತಪ್ಪಿದೆ. ಕೂಡಲೇ ಲೋಕೋಪೈಲಟ್ ರೈಲನ್ನು ನಿಲ್ಲಿಸುವ ಮೂಲಕ ಯಾವುದೇ ಅನಾಹುತ ಸಂಭವಿಸದಂತೆ ಸಮಯಪ್ರಜ್ಞೆ ಮೆರೆದಿದ್ದಾರೆ. ರೈಲು ಹಳಿ ತಪ್ಪಿದ್ದರಿಂದ ಇತ್ತ ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ರೈಲುಗಳು ಸಮೀಪದ ಕೆಂಗೇರಿ, ನಾಯಂಡಹಳ್ಳಿ, ಬೆಂಗಳೂರು ನಿಲ್ದಾಣಗಳಲ್ಲೇ ಬೀಡು ಬಿಟ್ಟಿವೆ. ಇದನ್ನೂ ಓದಿ: ಹೋಳಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ರೈಲುಗಳು ಚನ್ನಪಟ್ಟಣ, ಮಂಡ್ಯದಲ್ಲೇ ನಿಂತಿವೆ. ಪ್ರಯಾಣಿಕರು ರೈಲಿನಲ್ಲೇ ಕಾಯುವಂತಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಹಳಿ ತಪ್ಪಿರುವ ಬೋಗಿಯನ್ನು ಸಹಜ ಸ್ಥಿತಿಗೆ ತಂದು ಗೂಡ್ಸ್ ರೈಲನ್ನು ರಾಮನಗರ ನಿಲ್ದಾಣಕ್ಕೆ ಸ್ಥಳಾಂತರಿಸಿದ್ದಾರೆ. ಟ್ರ‍್ಯಾಕ್ ಪರಿಶೀಲನೆ ಬಳಿಕ ರೈಲು ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಮಹದೇವಪ್ಪ ದೊಡ್ಡವರು, ಈಗ ಅವ್ರೂ ನಮ್ಮ ಹೈಕಮಾಂಡ್‌ನ ಭಾಗ: ಡಿಕೆಶಿ ಸೈಲೆಂಟ್‌ ಪಂಚ್‌

Share This Article