ದಾದಾ ಫ್ಯಾನ್ಸ್‌ಗೆ ಶುಭ ಸುದ್ದಿ – ಬರುತ್ತಿದೆ ಹೊಸ ಸ್ಮಾರಕ

Public TV
2 Min Read

– ಕೆಂಗೇರಿ ಬಳಿ ಅರ್ಧ ಎಕರೆ ಜಾಗ ಕೊಟ್ಟ ಕಿಚ್ಚ ಸುದೀಪ್‌

ಭಿಮಾನ್ ಸ್ಡುಡಿಯೋದಲ್ಲಿದ್ದ ಸಾಹಸಿಂಹ ವಿಷ್ಣುವರ್ಧನ್ ಸಮಾಧಿ ನೆಲಸಮ ಆಗಿರೋ ಪರಿಣಾಮ ಅಭಿಮಾನಿಗಳ ಆಕ್ರೋಶ ಭುಗಿಲೆದ್ದಿದೆ. ಅದೇ ಸ್ಥಳದಲ್ಲೇ ಮರುಸ್ಥಾಪನೆಗೆ ಒತ್ತಾಯ ಕೇಳಿಬರುತ್ತಿದ್ದು, ಕಾನೂನಾತ್ಮಕ ಹೋರಾಟವೂ ನಡೆದಿದೆ. ಆದರೆ ಇದೀಗ ಅಭಿಮಾನಿಗಳ ಅಭಿಲಾಷೆಯ ಮೇರೆಗೆ ಅಭಿಮಾನಿಗಳೇ ಸೇರಿಕೊಂಡು ಪರ್ಯಾಯ ಸ್ಮಾರಕವನ್ನ ಬೆಂಗಳೂರಲ್ಲೇ ನಿರ್ಮಾಣ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ಆಗಸ್ಟ್ 8ರ ರಾತ್ರೋರಾತ್ರಿ ವಿಷ್ಣುವರ್ಧನ್ ಸ್ಮಾರಕವನ್ನ ನೆಲಸಮ ಮಾಡಲಾಯ್ತು. ಅವಶೇಷವೂ ಉಳಿಯದಂತೆ ತೆರವು ಮಾಡಲಾಗಿದೆ. ಅಭಿಮಾನಿಗಳ ಬೇಸರಕ್ಕೆ ಅಭಿಮಾನಿಗಳೇ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ. ಇದೀಗ ಬೆಂಗಳೂರಿನ ಅಭಿಮಾನ್ ಸ್ಡುಡಿಯೋ ಸಮೀಪದ ಮೂರು ಕಿಲೋಮೀಟರ್ ಅಂತರದಲ್ಲೇ ಹೊಚ್ಚ ಹೊಸ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ತಯಾರಿ ಆಗಿದೆ. ಕೆಂಗೇರಿ ಬಳಿ ಅರ್ಧ ಎಕರೆ ಜಾಗವನ್ನ ವಿಷ್ಣುವರ್ಧನ್ ಅಭಿಮಾನಿ ಕಿಚ್ಚ ಸುದೀಪ್ ನೀಡಿದ್ದು, ಶೀಘ್ರದಲ್ಲೇ ಸ್ಮಾರಕ ತಲೆ ಎತ್ತಲಿದೆ.

ವಿಷ್ಣುದಾದಾ ಸ್ಮಾರಕ ನೆಲಸಮವಾದ ಬಳಿಕ ವಿಷ್ಣುವರ್ಧನ್ ಅಭಿಮಾನಿಯಾಗಿರುವ ಕಿಚ್ಚ ಸುದೀಪ್ ತಾವೇ ಸಮಾಧಿ ಮರುಸ್ಥಾಪನೆ ಮಾಡೋದಾಗಿ ಮಾತು ಕೊಟ್ಟಿದ್ದರು. ಅದರಂತೆ ಇದೀಗ ವಿಷ್ಣುಸೇನಾ ಸಮಿತಿಯ ಜೊತೆಗೂಡಿ ಕಿಚ್ಚ ಸುದೀಪ್ ಅರ್ಧ ಎಕರೆ ಜಾಗ ಕೊಟ್ಟಿದ್ದಾರೆ. ಆ ಜಾಗದಲ್ಲಿ ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹಾಗೂ ಸದಸ್ಯರು ಸೇರಿ, ಎಲ್ಲಾ ಅಭಿಮಾನಿಗಳ ಸಹಾಯದಿಂದ ಸ್ಮಾರಕ ನಿರ್ಮಾಣ ಮಾಡುವ ಯೋಜನೆ ಸಿದ್ಧಮಾಡಿಕೊಂಡಿದ್ದಾರೆ. ಇದೇ ಬರುವ ಸೆಪ್ಟೆಂಬರ್ 2ನೇ ತಾರೀಖು ಕಿಚ್ಚನ ಹುಟ್ಟುಹಬ್ಬಕ್ಕೆ ನೀಲನಕ್ಷೆ ರೆಡಿಯಾಗಲಿದ್ದು, ಅದರ ಪ್ರದರ್ಶನ ಮಾಡಲಿದೆ ವಿಷ್ಣುಸೇನೆ. ಜೊತೆಗೆ ಇದೇ ಬರುವ ಸೆಪ್ಟೆಂಬರ್ 18ಕ್ಕೆ ವಿಷ್ಣುವರ್ಧನ್‌ವರ 75ನೇ ಜಯಂತೋತ್ಸವದ ದಿನದಂದೇ ನೂತನ ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುತ್ತಿದೆ.

ಇನ್ನೂ ತೆರವಾಗಿರುವ ವಿಷ್ಣುಸಮಾಧಿ ಜಾಗದ ಹೋರಾಟವೂ ಮುಂದುವರೆಯಲಿದ್ದು, ವಿಷ್ಣುಸೇನೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿದೆ. ಕಾನೂನು ಹೋರಾಟದ ಪ್ರಕ್ರಿಯೆಯಲ್ಲಿದೆ. ಅಭಿಮಾನ್ ಸ್ಡುಡಿಯೋದಲ್ಲಿ ಬೇರೆ ಯಾವ ಕೆಲಸಗಳೂ ಮುಂದುವರೆಯದಂತೆ ಕಾನೂನು ತಡೆ ತಂದಿರೋದಾಗಿ ವಿಷ್ಣುಸೇನೆ ತಿಳಿಸಿದೆ.  ಜೊತೆಗೆ ಹಿಂದೆಯೇ ತಯಾರಿ ಮಾಡಿಕೊಂಡಿದ್ದ ವಿಷ್ಣುವರ್ಧನ್ ಅಮೃತಮಹೋತ್ಸವ ಹೆಸರಿನ ಜಯಂತಿ ಉತ್ಸವಕ್ಕೂ ತಯಾರಿ ನಡೆದಿದ್ದು, ಸೆಪ್ಟೆಂಬರ್ 18ರಂದು ನಂದಿಲಿಂಕ್ಸ್ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ನೆರವೇರಲಿದೆ. ನಯಾ ಸ್ಮಾರಕವನ್ನ ಕೆಂಗೇರಿ ಬಳಿ ಅರ್ಧ ಎಕರೆಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ವಿಷ್ಣುದಾದಾ ಅವರ ದೊಡ್ಡ ಪ್ರತಿಮೆ ನಿರ್ಮಾಣವಾಗಲಿದೆ. ಇದಕ್ಕೆ ದರ್ಶನ ಕೇಂದ್ರ ಎಂದು ಹೆಸರಿಟ್ಟಿದೆ ವಿಷ್ಣುಸೇನೆ. ಮೂಲ ಜಾಗದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಪ್ರಕ್ರಿಯೆಯ ಹೋರಾಟವೂ ಜೊತೆಗೆ ಮುಂದುವರೆಯಲಿದೆ. ಸದ್ಯಕ್ಕೆ ವಿಷ್ಣುವರ್ಧನ್ ಹುಟ್ಟುಹಬ್ಬ ಹಾಗೂ ಪುಣ್ಯತಿಥಿ ಸಮಯದಲ್ಲಿ ಅಭಿಮಾನಿಗಳಿಗೆ ದರ್ಶನಕ್ಕೆ ತೆರಳಲು ಪರ್ಯಾಯ ಜಾಗವಾಗಿ ವಿಷ್ಣುವರ್ಧನ್ ನಯಾ ಸ್ಮಾರಕ ನಿರ್ಮಾಣ ಮಾಡುವುದರ ಹಿಂದಿನ ಉದ್ದೇಶವಾಗಿದೆ.

ಮುಂದಿನ ಸಾಹಸಸಿಂಹ ಹುಟ್ಟುಹಬ್ಬ ಬರುವ ಒಳಗೆ ಸ್ಮಾರಕ ಕಾರ್ಯ ಸಂಪೂರ್ಣ ಮಾಡುವ ಪ್ಲ್ಯಾನ್‌ ಮಾಡಿಕೊಂಡಿದೆ ವಿಷ್ಣುಸೇನೆ. ಅಲ್ಲಿಗೆ ತಾತ್ಕಾಲಿಕ ನೆಮ್ಮದಿಯಾಗಿ ಪರ್ಯಾಯ ಸ್ಮಾರಕ ನಿರ್ಮಾಣವಾಗ್ತಿದೆ. ಇನ್ನು ಅನೇಕ ಕಲಾವಿದರು ಕೇವಲ ಸ್ಟೇಟಸ್ ಸ್ಟೋರಿಯಲ್ಲಿ ಕೈ ತೊಳೆದುಕೊಂಡಿರೋದ್ರ ಬಗ್ಗೆ ವಿಷ್ಣುಸೇನೆ ಬೇಸರ ವ್ಯಕ್ತಪಡಿಸಿದೆ. ಅಭಿಮಾನಿಳಿಂದಲೇ ನಯಾ ಸ್ಮಾರಕ ನಿರ್ಮಾಣ ಮಾಡುವ ಸವಾಲು ಸ್ವೀಕರಿಸಿದೆ.

Share This Article