ಕೊರೊನ ವೈರಸ್ ಬಗ್ಗೆ ತಾಳೆಗರಿ ಶಾಸ್ತ್ರದಲ್ಲಿ ಉಲ್ಲೇಖ, ಗೋಮೂತ್ರವೇ ಔಷಧಿ: ವಿನಯ್ ಗುರೂಜಿ

Public TV
2 Min Read

ಹಾಸನ: ಕೊರೊನ ವೈರಸ್‍ಗೆ ಗೋಮೂತ್ರವೇ ಔಷಧವಾಗಿದ್ದು, ಈ ವೈರಸ್ ಬಗ್ಗೆ ಆರು ಸಾವಿರ ವರ್ಷಗಳ ಹಿಂದೆಯೇ ನಮ್ಮ ತಾಳೆಗರಿ ಶಾಸ್ತ್ರದಲ್ಲಿ ಉಲ್ಲೇಖವಿದೆ ಎಂದು ವಿನಯ್ ಗುರೂಜಿ ಹೇಳಿದ್ದಾರೆ.

ಹಾಸನದ ಮಲ್ಲಪ್ಪನಹಳ್ಳಿಯ ಮಲ್ಲಿಕಾರ್ಜುನ ದೇವಾಲಯದ ಶಂಕುಸ್ಥಾಪನೆ ವೇಳೆ ಮಾತನಾಡಿದ ಅವಧೂತ ವಿನಯ್ ಗುರೂಜಿ, ಈ ವಿಷದ ಗಾಳಿಯಿಂದಾಗಿ ಈಶಾನ್ಯ ಭಾರತದಲ್ಲಿ ಮೃತ್ಯು ಸಂಭವಿಸುತ್ತದೆ ಎಂದು ಆ ಗ್ರಂಥದಲ್ಲಿ ಬರೆಯಲಾಗಿತ್ತು. ಬ್ರಹ್ಮೇಂದ್ರ ಅವರು ಬರೆದ ಈ ಗ್ರಂಥದಲ್ಲಿ ರಸ್ತೆ ರಸ್ತೆಯಲ್ಲಿ ಜನ ಸಾಯುತ್ತಾರೆ ಎಂದು ಬರೆಯಲಾಗಿದ್ದು, ಈಗ ಅದೇ ಆಗುತ್ತಿದೆ. ದೇವರು ಇದ್ದಾನೆ ಎಂಬ ನಂಬಿಕೆಯಿಂದ ಭಾರತೀಯ ಜನರು ಬದುಕುತ್ತಿದ್ದಾರೆ ಎಂದರು.

ಋಷಿಮುನಿಗಳು ದೊಡ್ಡ ವಿಜ್ಞಾನಿಗಳು. ನಾವು ನಾಲ್ಕು ಪಿಎಚ್‍ಡಿ ಮಾಡಿ ಅದನ್ನೇ ಡಾಕ್ಟರೇಟ್ ಎಂದು ಭಾವಿಸುತ್ತೇವೆ. ಎಷ್ಟೇ ವರ್ಷ ತಪಸ್ಸು ಮಾಡಿ ತಮ್ಮ ತ್ರಿಕಾಲ ಜ್ಞಾನಕ್ಕೆ, ಅನುಭವಕ್ಕೆ ಸಿಕ್ಕ ಸತ್ಯಗಳನ್ನು ಮುಂದಿನ ಪೀಳಗೆಗೂ ಇರಲಿ ಎಂದು ತಾಳೆಗರಿ ಮೇಲೆ ಬರೆದಿಟ್ಟಿದ್ದರು. ರಾಜ್ಯ ಹಾಗೂ ರಾಷ್ಟ್ರ ಸರ್ಕಾರ ಅದನ್ನು ತಿರಸ್ಕಾರ ಮಾಡದೇ ಸದುಪಯೋಗ ಮಾಡಿಕೊಳ್ಳಬೇಕು ಎಂದು ವಿನಂತಿ ಮಾಡಿಕೊಳ್ಳುತ್ತೇನೆ.

ಕೊರೊನಾ ವೈರಸ್‍ಗೆ ಔಷಧಿ ಇಲ್ಲ ಎಂದು ಹೇಳುವುದು ಮೂರ್ಖತನ ಎಂದುಕೊಳ್ಳುತ್ತೇನೆ. ಏಕೆಂದರೆ ಗೋಮೂತ್ರದಲ್ಲಿ ಎಲ್ಲದಕ್ಕೂ ಔಷಧಿ ಇದೆ. ಪರಿಸರದಿಂದ ಸಮಸ್ಯೆಗೆ ಪರಿಸರದಿಂದಲೇ ಉತ್ತರ ಸಿಗುತ್ತದೆ. ಸ್ವಲ್ಪ ಹುಡುಕಬೇಕು ಅಷ್ಟೇ. ಎಲ್ಲದಕ್ಕೂ ಎಂಬಿಬಿಎಸ್ ಕೊನೆಯಲ್ಲ. ನಾನು ಎರಡು ವರ್ಷಗಳ ಹಿಂದೆ ಆ ತಾಳೆಗರಿ ಓದಿದಾಗ ವಿಷದ ಗಾಳಿ ಬೀಸುತ್ತೆ ಎಂದು ಉಲ್ಲೇಖವಿದೆ. ಕೊರೊನಾ ವೈರಸ್ ಕೂಡ ಗಾಳಿಯಿಂದ ಹರಡುತ್ತಿದೆ. ಅದು 6 ಸಾವಿರ ವರ್ಷಗಳ ಹಿಂದಿನ ಗ್ರಂಥ ಎಂದು ವಿನಯ್ ಗುರೂಜಿ ತಿಳಿಸಿದರು.

ಇದೇ ವೇಳೆ ಮಾತನಾಡಿದ ಅವರು, ಈ ಹಿಂದೆ ಎಚ್1ಎನ್1 ಬಂದಾಗ ಅಮೃತಬಳ್ಳಿ ಕೆಲಸ ಮಾಡಿರಲಿಲ್ವಾ? ಹಿಮಾಲಯದಲ್ಲಿ ಋಷಿಗಳಿಗೆ ಆಧ್ಯಾತ್ಮಕ ಶಕ್ತಿ ರಕ್ಷಿಸುತ್ತಿದೆ. ಹಾಗಾಗಿ ಅವರಿಗೆ ಯಾವ ಭಯವಿರುವುದಿಲ್ಲ. ನಮಗೆ ಕಾಣಿಸುತ್ತಿರುವುದು ಅಷ್ಟೇ ಸತ್ಯ ಎಂಬುದು ಭ್ರಾಂತ. ನಮಗೆ ಕಾಣಿಸದಿರುವುದು ಹಲವು ವಿಷಯಗಳಿವೆ. ಸದ್ಯ ಈ ಜಾಗವು ಮುಂದಿನ ದಿನಗಳಲ್ಲಿ ಕೇದಾರನಾಥವಾಗಲಿದೆ. ಈ ಸ್ಥಳಕ್ಕೆ ಮುಂದಿನ ಎರಡು ವರ್ಷಗಳ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ ಎಂದು ವಿನಯ್ ಗುರೂಜಿ ಭವಿಷ್ಯ ನುಡಿದರು.

Share This Article
Leave a Comment

Leave a Reply

Your email address will not be published. Required fields are marked *