– 100ಕ್ಕೂ ಹೆಚ್ಚು ಮಂದಿ ವಿರುದ್ಧ ಎಫ್‌ಐಆರ್ ದಾಖಲು
ಕಲಬುರಗಿ: ಇತ್ತೀಚೆಗಷ್ಟೇ ಕಲಬುರಗಿ (Kalaburagi) ಮಹಾನಗರ ಪಾಲಿಕೆಯಲ್ಲಿ ಇ-ಖಾತಾ ಗೋಲ್ಮಾಲ್ ಪ್ರಕರಣ ವರದಿಯಾದ ಬೆನ್ನಲ್ಲೆ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ಇದೀಗ ಜೇವರ್ಗಿ ಪುರಸಭೆಯಲ್ಲಿ (Jevargi Municipality) 3 ವರ್ಷದಲ್ಲಿ 188 ನಕಲಿ ಖಾತೆಗಳು ಪತ್ತೆಯಾಗಿದ್ದು, 100ಕ್ಕೂ ಹೆಚ್ಚು ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ.
ಜಮೀನು, ನಿವೇಶನ ಹಾಗೂ ಕಮರ್ಷಿಯಲ್ ಅಂಗಡಿಗಳ ನಕಲಿ ಖಾತೆಗಳ ನೋಂದಣಿಯನ್ನು ತಡೆಯಲು ಸರ್ಕಾರ ಹಲವು ಕಠಿಣ ನಿಯಮ ಜಾರಿಗೆ ತರುತ್ತಿದೆ. ಆದ್ರೆ ಜೇವರ್ಗಿ ಪುರಸಭೆಯಲ್ಲಿ ಅಧಿಕಾರಿಗಳ ಲಂಚಗುಳಿತನಕ್ಕೆ ನಕಲಿ ಖಾತೆಗಳ ಪ್ರಕರಣ ಹೆಚ್ಚಾಗಿದೆ. ಜೇವರ್ಗಿ ಪಟ್ಟಣದ ಶಾಂತಿನಗರದ ಇಸ್ಮಾಯಿಲ್ ಎಂಬುವರರು ಜೇವರ್ಗಿ ಸಬ್ ರಿಜಿಸ್ಟಾರ್‌ಗೆ ನೋಂದಣಿಯಾದ ನಿವೇಶನದ ದಾಖಲೆಗಳನ್ನು ಆರ್‌ಟಿಐ ಮೂಲಕ ಪಡೆದಾಗ 9 ನಕಲಿ ಖಾತೆಗಳ ದಾಖಲೆಗಳು ನೋಂದಣಿ ಆಗಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮದ್ದೂರು ಬಳಿಕ ತುಮಕೂರಿನಲ್ಲೂ ಯತ್ನಾಳ್ ವಿರುದ್ಧ FIR
ಜಿಡಿಎ ಹಾಗೂ ಟೌನ್ ಪ್ಲ್ಯಾನಿಂಗ್ ಅನುಮತಿ ಪಡೆಯದ ನಿವೇಶನಗಳಿಗೆ ಖಾತೆ ನೀಡದಂತೆ ಈಗಾಗಲೇ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ ಸಹ ಅಕ್ರಮವಾಗಿ ಖಾತೆಗಳಾಗಿರುವುದು ಆರ್‌ಟಿಐ ಮೂಲಕ ಕಂಡುಬಂದಿದೆ. ಹೀಗಾಗಿ ಜೇವರ್ಗಿ ಪಟ್ಟಣದ ಇಸ್ಮಾಯಿಲ್ ಎಂಬುವವರು ನಕಲಿ ಖಾತೆಯ ದಾಖಲೆಗಳ ಬಗ್ಗೆ ಕಲಬುರಗಿ ಜಿಲ್ಲಾಧಿಕಾರಿ ಫೌಜೀಯಾ ತರನ್ನುಂ ಅವರಿಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದರು. ಈ ಬಗ್ಗೆ ತನಿಖೆ ಮಾಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು. ಇದನ್ನೂ ಓದಿ: ವಕ್ಫ್ ತಿದ್ದುಪಡಿ ಕಾಯ್ದೆಗೆ ತಡೆ ನೀಡಲು ನಕಾರ – ಸೂಕ್ತ ಆಧಾರಗಳಿಲ್ಲ ಎಂದ ಸುಪ್ರೀಂ
ಇನ್ನೂ ನಕಲಿ ಖಾತೆಗಳ ನೋಂದಣಿ ಆಗಿದೆ ಎಂದು ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಂ ಅವರು ಗಜಾನನ ಬಾಳೆ ನೇತೃತ್ವದಲ್ಲಿ ನಾಲ್ಕು ಜನರ ತನಿಖಾ ತಂಡವನ್ನು ರಚನೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದರು. 2021 ರಿಂದ 2024ರ ವರೆಗೆ ಜೇವರ್ಗಿ ಪುರಸಭೆ ವ್ಯಾಪ್ತಿಯಲ್ಲಿಯೇ ಸುಮಾರು 188 ನಕಲಿ ಖಾತಾಗಳನ್ನು ಸೃಷ್ಟಿಸಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಈ ವರದಿ ಆಧಾರದ ಮೇಲೆ ಜೇವರ್ಗಿ ಪುರಸಭೆ ಮುಖ್ಯಾಧಿಕಾರಿಯು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ನಕಲಿ ಖಾತೆ ಪಡೆದ 132 ಜನರ ಮೇಲೆ ದೂರು ದಾಖಲಿಸಿದ್ದಾರೆ.
ಒಟ್ಟಾರೆ ಜೇವರ್ಗಿ ಪುರಸಭೆಯಲ್ಲಿ ಅಧಿಕಾರಿಗಳು ಬ್ರೋಕರ್‌ಗಳ ಜೊತೆ ಸೇರಿ ಹಣದ ಆಸೆಗೆ ಖಾತೆಗಳ ಗೋಲ್ಮಾಲ್‌ನಲ್ಲಿ ಶಾಮೀಲಾಗಿದ್ದಾರೆ ಎಂದು ತನಿಖೆಯಲ್ಲಿ ಗೊತ್ತಾಗಿದೆ. ಇನ್ನು ಈ ಬಗ್ಗೆ ಹೆಚ್ಚಿನ ತನಿಖೆ ನಡೆದ್ರೆ ಹಲವು ಅಧಿಕಾರಿಗಳು ಕೈ ಜೋಡಿಸಿರುವುದು ಬೆಳಕಿಗೆ ಬರಲಿದೆ.