ಹರಿಹರದ ಬೆಸ್ಕಾಂ ಉಗ್ರಾಣದಲ್ಲಿ ಗೋಲ್ಮಾಲ್‌ – ರೈತರಿಗೆ ಸೇರಬೇಕಿದ್ದ 3.85 ಕೋಟಿ ಮೌಲ್ಯದ ವಿದ್ಯುತ್ ಪರಿಕರಗಳು ಭ್ರಷ್ಟರ ಪಾಲು!

Public TV
2 Min Read

ದಾವಣಗೆರೆ: ಬೆಸ್ಕಾಂ (BESCOM) ಇಲಾಖೆಯಲ್ಲಿ ಕೋಟ್ಯಂತರ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ರೈತರಿಗೆ (Farmers) ಸೇರಬೇಕಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಪರಿಕರಗಳು ನಾಪತ್ತೆಯಾಗಿದ್ದು ಇದ್ದ ಮೂವರಲ್ಲಿ ಕದ್ದವರು ಯಾರು ಎನ್ನುವುದೇ ಈಗ ದೊಡ್ಡ ಪ್ರಶ್ನೆಯಾಗಿದೆ.

ದಾವಣಗೆರೆಯ (Davanagere) ಹರಿಹರದ (Harihara) ಬೆಸ್ಕಾಂ ವಿಭಾಗೀಯ ಉಗ್ರಾಣದಲ್ಲಿ ಆಂತರಿಕ ಲೆಕ್ಕಪರಿಶೋಧನೆ ವೇಳೆ ಅಧಿಕಾರಿಗಳ ಕಳ್ಳಾಟ ಬಯಲಿಗೆ ಬಂದಿದೆ.ಬೆಸ್ಕಾಂ ವಿಭಾಗೀಯ ಉಗ್ರಾಣದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ಆದರೂ ಸಹ ಅಲ್ಲಿನ ಅಧಿಕಾರಿಗಳು ಯಾವುದೇ ತನಿಖೆಗೆ ಮುಂದಾಗಿಲ್ಲ. ಕನಿಷ್ಠ ಠಾಣೆಗೆ ದೂರು ಸಹ ದಾಖಲಿಸದೇ ಇರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಇನ್ನೇನು ನನ್ನ ತಲೆ ಬಂದರೆ ಕಷ್ಟ ಆಗಬಹುದು ಎಂದು ಭಾವಿಸಿ ಈಗ ಅಧಿಕಾರಿಗಳು ತುರ್ತಾಗಿ ಹರಿಹರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತನಿಖೆಯ ವೇಳೆ ಉಗ್ರಾಣದಿಂದ ಬರೋಬರಿ 72.58 ಲಕ್ಷ ರೂ. ಮೌಲ್ಯದ 102 ಪರಿವರ್ತಕಗಳೇ (TC) ಮಾಯವಾಗಿವೆ ಎಂಬುದು ಆಂತರಿಕ ಲೆಕ್ಕ ಪರಿಶೋಧನೆಯಿಂದ ಗೊತ್ತಾಗಿದೆ ಎಂದು ದಾವಣಗೆರೆ ಎಸ್‌ಪಿ ಉಮಾಪ್ರಶಾಂತ್ ತಿಳಿಸಿದ್ದಾರೆ.

ಇಲ್ಲಿ ನಾಪತ್ತೆಯಾಗಿರುವುದು ಒಂದೇರಡಲ್ಲ. 89,270 ಲೀಟರ್ ಟಿ.ಸಿ. ಆಯಿಲ್‌ನ ಲೆಕ್ಕವಂತೂ ಇಲ್ವೇ ಇಲ್ಲ. ಒಟ್ಟು 3.85 ಕೋಟಿ ಮೌಲ್ಯದ 42 ವಿವಿಧ ಸಾಮಗ್ರಿಗಳ ದುರುಪಯೋಗ ಮಾಡಿಕೊಳ್ಳಲಾಗಿದೆ. ವಿದ್ಯುತ್ ಪರಿವರ್ತಕ, ಪೋಲ್, ವಯರ್‌,  ಲೈನ್ ಮಟೇರಿಯಲ್ಸ್ ಪಿವಿಸಿ ಅಲ್ಯುಮಿನಿಯಮ್ ರೀಡ್ ವೈರ್, ಆಯಿಲ್ ಸೇರಿ 42 ಸಾಮಗ್ರಿಗಳನ್ನು ದುರುಪಯೋಗ ಮಾಡಲಾಗಿದೆ.

2018 ರ ಜೂನ್ 19 ರಿಂದ 2025 ರ ಸೆಪ್ಟೆಂಬರ್ 16 ರವರೆಗೆ ಹರಿಹರ ಬೆಸ್ಕಾಂ ಉಗ್ರಾಣದಲ್ಲಿ ಸಹಾಯಕ ಉಗ್ರಾಣ ಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅರುಣಕುಮಾರ್ ಅವರು ಸಾಮಾಗ್ರಿಗಳು ಉಗ್ರಣದಲ್ಲೇ ಇರುವಂತೆ ಕಡತದಲ್ಲಿ ನಮೂದಿಸಿ ಅವುಗಳನ್ನು ಹೊರಕ್ಕೆ ಸಾಗಿಸಿ ದುರುಪಯೋಗ ಮಾಡಿಕೊಂಡಿದ್ದು, ಇನ್ ವಾಯ್ಸ್ ಸಂಖ್ಯೆಗಳನ್ನು ಮಾತ್ರ ಕಡತದಲ್ಲಿ ದಾಖಲಿಸಿ ವಂಚಿಸಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದನ್ನೂ ಓದಿಅನಧಿಕೃತ ಮಸೀದಿಯನ್ನು ಜೆಸಿಬಿಯಿಂದ ಕೆಡವಿದ UP ಮುಸ್ಲಿಮರು!

2025 ರ ಏಪ್ರಿಲ್ ನಲ್ಲಿ ತ್ರೈಮಾಸಿಕ ಪರಿಶೀಲನೆ ನಡೆಸಿದ್ದು, ಪರಿವರ್ತನೆ ತೈಲದಲ್ಲಿ 89,270 ಲೀಟರ್ ಕೊರತೆ ಕಂಡು ಬಂದಿದ್ದು 56,67,864 ರೂ. ನಷ್ಟ ಉಂಟಾಗಿದೆ. ಅಷ್ಟೇ ಅಲ್ಲದೇ 72.58 ಲಕ್ಷ ರೂ.ಮೌಲ್ಯದ 102 ಪರಿವರ್ತಕಗಳು ಬಫರ್ ಸ್ಟಾಕ್ ನಿಂದ ಕಣ್ಮರೆಯಾಗಿದ್ದವು. ಇದರಲ್ಲದೇ 12.75 ಲಕ್ಷ ರೂ. ಮೌಲ್ಯದ 21 ಪರಿವರ್ತಕಗಳನ್ನು ಲೆಡ್ಜರ್ ನಲ್ಲಿ ದುರಸ್ಥಿದಾರರಿಗೆ ಇನ್ ವಾಯ್ಸ್ ಮಾಡಿದಂತೆ ದಾಖಲಾಗಿದ್ದರೂ ವಾಸ್ತವದಲ್ಲಿ ದುರಸ್ಥಿದಾರರಿಗೆ ಹಸ್ತಾಂತರವಾಗಿರಲಿಲ್ಲ. ಈ ರೀತಿಯಲ್ಲಿ ಒಟ್ಟು 3.85 ಕೋಟಿ ರೂ. ಮೌಲ್ಯದ ಸಾಮಾಗ್ರಿಗಳನ್ನು ದುರುಪಯೋಗ ಮಾಡಲಾಗಿದೆ ಎಂಬುದು ಪರಿಶೀಲನೆಯಿಂದ ದೃಢಪಟ್ಟಿದ್ದು ಕಾನೂನು ಕ್ರಮ ಜರುಗಿಸಬೇಕೆಂದು ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕಿರಣ್ ಇದೀಗ ಹರಿಹರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಎಫ್‌ಐಆರ್ ದಾಖಲಾಗುತ್ತಿದ್ದಂತೆ ಬೆಸ್ಕಾಂ ಹರಿಹರ ಉಗ್ರಾಣಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೂರುದಾರ ಇಇ ರವಿಕುಮಾರ್ ನಿಂದ ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಂಧನ ಇಲಾಖೆಯ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಇದೇ ರೀತಿ ಗೋಲ್‌ಮಾಲ್ ಆಗಿದೆ ಎಂಬ ಆರೋಪ ಕೂಡಾ ಕೇಳಿ ಬಂದಿದೆ.

ಕೆಪಿಟಿಸಿಎಲ್ ಅಡಿಯಲ್ಲಿ ಬರುವ ಬೆಸ್ಕಾಂ, ಎಸ್ಕಾಂ ಜೆಸ್ಕಾಂ ಸೇರಿದಂತೆ ಎಲ್ಲಾ ನಿಗಮಗಳಲ್ಲಿ ಕೂಡ ತನಿಖೆ ನಡೆಸಿದರೆ ಇನ್ನು ಹೆಚ್ಚಿನ ಅವ್ಯವಹಾರ ಬೆಳಕಿಗೆ ಬರುತ್ತದೆ ಎಂದು ಸಾಮಾಜಿಕ ಹೋರಾಟಗಾರ ಗಿರೀಶ್ ಎಸ್ ದೇವರಮನಿ ತಿಳಿಸಿದ್ದಾರೆ.

Share This Article