1 ಮತ ಹಾಕಿದ್ರೆ ಪುರುಷರಿಗೆ ಚಿನ್ನದ ಉಂಗುರ, ಮಹಿಳೆಯರಿಗೆ ಓಲೆ!

Public TV
1 Min Read

– ಶಿಮೂಲ್ ಚುನಾವಣೆಯಲ್ಲಿ ಮತದಾರರಿಗೆ ಆಮಿಷ
– ಇಂದು ನಡೆಯುತ್ತಿರುವ ಚುನಾವಣೆ

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಹಣವನ್ನು ಹಂಚಿಕೆ ಮಾಡಿದರೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟ ಮಂಡಳಿ (ಶಿಮುಲ್) ಚುನಾವಣೆಯಲ್ಲಿ ಒಂದು ಮತಕ್ಕೆ ಚಿನ್ನ, ಬೆಳ್ಳಿಯ ಆಮಿಷವನ್ನು ಅಭ್ಯರ್ಥಿಗಳು ಒಡ್ಡಿದ್ದಾರೆ.

ಶಿವಮೊಗ್ಗದ ಮಾಚೇನಹಳ್ಳಿ ಯಲ್ಲಿರುವ ಶಿಮುಲ್ ಕಚೇರಿಯಲ್ಲಿ ಇಂದು ಮತದಾನ ನಡೆಯುತ್ತಿದ್ದು, ಬಿಜೆಪಿ ಬೆಂಬಲಿತ ಮತ್ತು ಜೆಡಿಎಸ್ ಬೆಂಬಲಿತ ಬಣಗಳ ಮಧ್ಯೆ ಭಾರೀ ಸ್ಪರ್ಧೆಯಿದೆ.

14 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಕಣದಲ್ಲಿ 31 ಅಭ್ಯರ್ಥಿಗಳಿದ್ದಾರೆ. ಒಟ್ಟು 835 ಸದಸ್ಯರ ಮತಗಳಿರುವ ಹಿನ್ನೆಲೆಯಲ್ಲಿ ಚಿನ್ನ ಬೆಳ್ಳಿ ಆಮಿಷವನ್ನು ಅಭ್ಯರ್ಥಿಗಳು ಮತದಾರರಿಗೆ ಒಡ್ಡಿದ್ದಾರೆ.

ಪುರುಷರ ಒಂದು ಮತಕ್ಕೆ 25 ಸಾವಿರ, ಚಿನ್ನದ ಉಂಗುರ ಮಹಿಳೆಯರಿಗೆ ಚಿನ್ನದ ಓಲೆ, ಒಂದು ಬೆಳ್ಳಿ ನಾಣ್ಯವನ್ನು ನೀಡಲಾಗುವುದು ಎಂದು ಅಭ್ಯರ್ಥಿಗಳು ಹೇಳಿದ್ದಾರೆ. ಮತದಾನಕ್ಕೆ ಆಮಿಷವಾಗಿ ನೀಡಿದ ವಸ್ತುಗಳು ವಾಟ್ಸಪ್ ನಲ್ಲಿ ವೈರಲ್ ಆಗಿವೆ.

ನಿರಂತರ ನಷ್ಟದ ಹಾದಿಯಲ್ಲಿದ್ದ ಹಾಲು ಒಕ್ಕೂಟ ಇತ್ತೀಚಿನ ವರ್ಷಗಳಲ್ಲಿ ಲಾಭದತ್ತ ಮುಖ ಮಾಡಿದೆ. ಕಳೆದ ವರ್ಷ 6.4 ಕೋಟಿ ರೂಪಾಯಿ ಲಾಭ ಗಳಿಸಿದೆ. ಸಹಜವಾಗಿಯೇ ಇಂಥ ಲಾಭಗಳಿಸುತ್ತಿರುವ ಸಂಸ್ಥೆಯ ಅಧಿಕಾರ ಹಿಡಿಯಲು ಅಭ್ಯರ್ಥಿಗಳು ಶತಗತಾಯ ಪ್ರಯತ್ನ ನಡೆಸಿದ್ದಾರೆ. ಹೇಗಾದರೂ ಸರಿ, ಎಷ್ಟು ಖರ್ಚಾದರೂ ಸರಿ ಶಿಮೂಲ್ ಆಡಳಿತ ವಶಕ್ಕೆ ಪಡೆಯಲೇಬೇಕು ಎಂಬ ಹಠಕ್ಕೆ ಎರಡೂ ಬಣಗಳು ಬಿದ್ದಿವೆ. ಸಂಜೆ 4ಗಂಟೆಗೆ ಮತದಾನ ಮುಗಿಯಲಿದ್ದು, ರಾತ್ರಿ 8ಗಂಟೆ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *