ದೀಪಾವಳಿಗೆ 40 ಸಾವಿರ ರೂ. ಗಡಿ ದಾಟಲಿದೆ ಚಿನ್ನ – ಬೆಲೆ ಏರುತ್ತಿರುವುದು ಯಾಕೆ?

Public TV
3 Min Read

ನವದೆಹಲಿ: ಈ ದೀಪಾವಳಿ ಸಮಯದಲ್ಲಿ 10 ಗ್ರಾಂ ಚಿನ್ನದ ಬೆಲೆ 40 ಸಾವಿರ ರೂಪಾಯಿಗೆ ಏರಿಕೆಯಾಗುವ ಸಾಧ್ಯತೆಯಿದೆ.

ಆಗಸ್ಟ್ ಮೂರನೇ ವಾರದಲ್ಲಿ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 38 ಸಾವಿರದ ಗಡಿ ದಾಟಿದ್ದರೆ 22 ಕ್ಯಾರೆಟ್ ಚಿನ್ನದ ಬೆಲೆ 35,780 ರೂ. ಇತ್ತು. ಈ ಬೆಲೆ ಅಕ್ಟೋಬರ್ ದೀಪಾವಳಿಯ ಸಂದರ್ಭದಲ್ಲಿ 40 ಸಾವಿರ ರೂ.ಗೆ ಏರಿಕೆಯಾಗಬಹುದು ಈ ಕ್ಷೇತ್ರದಲ್ಲಿರುವ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜುಲೈ ತಿಂಗಳಿನಲ್ಲಿ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 34,300 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 32,520 ರೂ. ಇತ್ತು. ಆಗಸ್ಟ್ ಮೊದಲ ವಾರದಲ್ಲಿ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 35,590 ರೂ. ಇದ್ದರೆ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 33,830 ರೂ.ಗೆ ಏರಿಕೆಯಾಗಿದೆ.

ಬೆಲೆ ಏರಿಕೆಗೆ ಕಾರಣ ಏನು?
ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ದೇಶಗಳಾದ ಅಮೆರಿಕ, ಚೀನಾ ನಡುವೆ ವಾಣಿಜ್ಯ ಬಿಕ್ಕಟ್ಟು ದಿನೇ ದಿನೇ ಉಲ್ಬಣಿಸುತ್ತಿದೆ. ಇದರ ಜೊತೆ ಅಮೆರಿಕದ ಅಧ್ಯಕ್ಷ ಟ್ರಂಪ್ ಭಾರತ ಮತ್ತು ಚೀನಾ ಅಭಿವೃದ್ಧಿ ಶೀಲ ರಾಷ್ಟ್ರಗಳ ಹೆಸರನ್ನು ಹೇಳಿಕೊಂಡು ಲಾಭ ಪಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅಮೆರಿಕ ಚೀನಾ ನಡುವಿನ ವ್ಯಾಪಾರ ಸಮರ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದ್ದು ಡಾಲರ್ ಬದಲು ಚಿನ್ನದಲ್ಲಿ ಹೂಡಿಕೆದಾರರು ಹೂಡಿಕೆ ಮಾಡುತ್ತಿದ್ದಾರೆ.

ಎರಡನೇ ಕಾರಣ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಕಡಿತಗೊಳಿಸಿದೆ. ಭಾರತದಲ್ಲಿ ಹೇಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೆಯೋ ಅದೇ ರೀತಿ ಅಮೆರಿಕದ ಫೆಡರಲ್ ರಿಸರ್ವ್ ಇದೆ. ದಶಕದ ಬಳಿಕ ಫೆಡರಲ್ ರಿಸರ್ವ್ ಬಡ್ಡಿದರವನ್ನು ಇಳಿಕೆ ಮಾಡಿದೆ. ಹಿಂದೆ ಜಾಗತಿಕ ಆರ್ಥಿಕ ಹಿಂಜರಿತವಾದಾಗ ಬಡ್ಡಿದರವನ್ನು ಇಳಿಕೆ ಮಾಡಿತ್ತು. ಮುಂದೆ ವಿಶ್ವದಲ್ಲೂ ಆರ್ಥಿಕ ಕುಸಿತವಾಗಬಹುದು ಎನ್ನುವ ಭೀತಿಯಿಂದ ಫೆಡರಲ್ ರಿಸರ್ವ್ ಬಡ್ಡಿ ದರ ಮಾಡಿರಬಹುದು ಎಂದು ಊಹಿಸಿ ಹೂಡಿಕೆದಾರರು ಚಿನ್ನದತ್ತ ಹೂಡಿಕೆ ಮಾಡುತ್ತಿದ್ದಾರೆ.

 

ಮೂರನೇಯದಾಗಿ ಬಹಳ ಮುಖ್ಯವಾಗಿ ಅಮೆರಿಕದಲ್ಲಿ ಉತ್ಪಾದನಾ ಸೂಚ್ಯಂಕ ಇಳಿಮುಖವಾಗಿದ್ದರೆ ಚೀನಾ ಜರ್ಮನಿಯಲ್ಲಿ ಕೈಗಾರಿಕಾ ಉತ್ಪಾದನೆ ಭಾರೀ ಇಳಿಕೆ ಕಂಡಿದೆ. ಇದೆಲ್ಲದರ ಪರಿಣಾಮ ಭಾರತದ ಷೇರು ಮರುಕಟ್ಟೆಯ ಜೊತೆಗೆ ವಿಶ್ವದ ಹಲವು ದೇಶಗಳ ಮಾರುಕಟ್ಟೆ ಸೂಚ್ಯಂಕಗಳು ಕೆಲ ದಿನಗಳಿಂದ ನಿರಂತರವಾಗಿ ಕುಸಿಯುತ್ತಿದೆ. ಅಮೆರಿಕದ ಡೌ ಜೋನ್ಸ್, ಜಪಾನ್, ಜರ್ಮನಿ, ಯುರೋಪ್, ಏಷ್ಯಾದ ಪ್ರಮುಖ ದೇಶಗಳ ಷೇರು ಮಾರುಕಟ್ಟೆ ಭಾರೀ ಇಳಿಕೆ ಕಾಣುತ್ತಿವೆ. ಈ ಕಾರಣದ ಜೊತೆಗೆ ಇಂಟರ್‌ನ್ಯಾಷನಲ್‌ ಮಾನಿಟರಿ ಫಂಡ್ ಕೂಡ ಇತ್ತೀಚೆಗೆ ಜಾಗತಿಕ ಜಿಡಿಪಿ ದರದ ಮುನ್ನೋಟವನ್ನು ಶೇ.3.3ರಿಂದ ಶೇ.3.2ಕ್ಕೆ ತಗ್ಗಿಸಿದ್ದರಿಂದ ಹೂಡಿಕೆದಾರರು ಮಾರುಕಟ್ಟೆಯಲ್ಲಿ ಹೂಡಿದ ಹಣವನ್ನು ಹಿಂಪಡೆಯುತ್ತಿದ್ದಾರೆ.

ಬೆಲೆ ಏರಿಕೆ ಆಗುತ್ತಿದೆ ಎನ್ನುವ ಕಾರಣಕ್ಕೆ ಚಿನ್ನದ ದರ ಭಾರೀ ಏರಿಕೆಯಾಗಿಲ್ಲ. 2013ಕ್ಕೆ ಹೋಲಿಸಿದರೆ ಈಗಲೂ ಕಡಿಮೆಯೇ ಇದೆ. 2013ರಲ್ಲಿ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 29,277 ರೂ. ತಲುಪಿತ್ತು. ಆದರೆ ಈಗ ಒಂದೇ ಸಮನೆ ಏರುತ್ತಿರುವುದನ್ನು ಗಮನಿಸಿದರೆ ದೀಪಾವಳಿ ವೇಳೆಗೆ 40 ಸಾವಿರ ರೂ. ಗಡಿ ದಾಟಬಹುದು ಎಂದು ಈ ಕ್ಷೇತ್ರದಲ್ಲಿರುವ ಪರಿಣಿತರು ಅಂದಾಜಿಸಿದ್ದಾರೆ.

ಇಡೀ ವಿಶ್ವದಲ್ಲಿ ಉತ್ಪಾದನೆ ಕಡಿಮೆಯುತ್ತಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ಇಳಿಕೆಯಾಗುತ್ತಿದೆ. ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಮಂದಗತಿಯಲ್ಲಿರುವುದರಿಂದ ತೈಲದ ಬೇಡಿಕೆ ಇಳಿದಿದ್ದು, ಬೆನ್ನಿಗೇ ದರವೂ ಇಳಿಕೆಯಾಗುತ್ತಿದೆ. ಎಷ್ಟು ಇಳಿಕೆಯಾಗಿದೆ ಎಂದರೆ 2018ರ ಆಗಸ್ಟ್ ನಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 72 ಡಾಲರ್ ಇದ್ದರೆ 2019ರಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 59 ಡಾಲರ್ ಇಳಿಕೆಯಾಗಿದೆ. ಆರ್ಥಿಕ ಬಿಕ್ಕಟ್ಟು, ಮಂದಗತಿಯಲ್ಲಿ ಪ್ರಗತಿ, ಹಣದುಬ್ಬರದ ಸಂದರ್ಭದಲ್ಲಿ ಹೂಡಿಕೆದಾರರು ಷೇರುಗಳ ಬದಲು ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಸೇಫ್ ಎಂದು ತಿಳಿದು ಬಂಗಾರದ ಮೇಲೆ ಹೂಡಿಕೆ ಮಾಡುತ್ತಾರೆ.

24 ಕ್ಯಾರೆಟ್ ಚಿನ್ನ Vs 22 ಕ್ಯಾರೆಟ್ ಚಿನ್ನ
24 ಕ್ಯಾರೆಟ್ ಶುದ್ಧ ಚಿನ್ನವಾಗಿದ್ದು 22 ಕ್ಯಾರೆಟ್‍ಗೆ ಹೋಲಿಕೆ ಮಾಡಿದರೆ ಮೃದು ಇರುತ್ತದೆ ಮತ್ತು ತುಂಡಾಗುತ್ತದೆ. ಆದರೆ ಶುದ್ಧವಾಗಿರುವ ಕಾರಣ ಬೆಲೆ ದುಬಾರಿಯಾಗಿರುತ್ತದೆ. 22 ಕ್ಯಾರೆಟ್ ನಲ್ಲಿ 22 ಭಾಗ ಶುದ್ಧ ಚಿನ್ನವಾಗಿದ್ದರೆ 2 ರಷ್ಟು ಭಾಗ ತಾಮ್ರ ಅಥವಾ ಬೆಳ್ಳಿಯ ಮಿಶ್ರಣ ಮಾಡಲಾಗುತ್ತದೆ. ಹೀಗಾಗಿ ಈ ಚಿನ್ನ ಗಟ್ಟಿ ಇರುತ್ತದೆ 24 ಕ್ಯಾರೆಟ್‍ಗೆ ಹೋಲಿಸಿದರೆ ಬೆಲೆ ಕಡಿಮೆ ಇರುತ್ತದೆ.

Share This Article
Leave a Comment

Leave a Reply

Your email address will not be published. Required fields are marked *