ಮಗಳ ಮದುವೆಗೆ ಖರೀದಿಸಿದ್ದ ಚಿನ್ನಾಭರಣ ಕಳವು!

Public TV
1 Min Read

ಚಿಕ್ಕಬಳ್ಳಾಪುರ: ಆಕೆ ಗಂಡನನ್ನ ಕಳೆದುಕೊಂಡ ಮಹಿಳೆ, ಇದ್ದೊಬ್ಬ ಮಗಳನ್ನು ಮದುವೆ ಮಾಡಿಕೊಡಲು ಶ್ರಮ ಪಡುತ್ತಿದ್ದಳು. ಹೀಗಾಗಿ ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಪೈಸೆ-ಪೈಸೆ ಕೂಡಿಟ್ಟು ಮಗಳಿಗೆ ಅಂತ ಬಂಗಾರದ ಒಡವೆ ಮಾಡಿಸಿ ಮದುವೆ ಮಾಡೋಕೆ ತಯಾರಿ ನಡೆಸಿದ್ದಳು. ಆದರೆ ಅದ್ಯಾವ ಕಳ್ಳ ಕಾಕರ ಕಣ್ಣು ಆ ಬಂಗಾರದ ಒಡವೆಗಳ ಮೇಲೆ ಬಿತ್ತು ಗೊತ್ತಿಲ್ಲ. ಮನೆಯಲ್ಲಿದ್ದ ಬಂಗಾರದ ಒಡವೆಗಳು ಮಾಯವಾಗಿ ಹೋಗಿವೆ. ಹೀಗಾಗಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೂ ಪೊಲೀಸರು ಮಾತ್ರ ದೂರು ದಾಖಲಿಸಿಲ್ಲ.

ಚಿಕ್ಕಬಳ್ಳಾಪುರ ನಗರದ ಕಂದವಾರ ಬಾಗಿಲು ನಿವಾಸಿಯಾಗಿರುವ ನರಸಮ್ಮ ಗಂಡನನ್ನ ಕಳೆದುಕೊಂಡು ಕಷ್ಟದಲ್ಲಿ ಜೀವನ ಮಾಡುತ್ತಿದ್ದು, ಭವಾನಿ ಎಂಬ ಮಗಳಿದ್ದಾಳೆ. ವಯಸ್ಸಿಗೆ ಬಂದ ಮಗಳಿಗೆ ಮದುವೆ ಮಾಡಬೇಕು ಎಂದು ಕನಸು ಕಟ್ಟಿಕೊಂಡಿದ್ದ ನರಸಮ್ಮ, ಪರಿಚಯಸ್ಥರ ಮನೆಯಲ್ಲಿ ಮನೆ ಕೆಲಸ ಸೇರಿದಂತೆ ಒಂದು ಹಸು ಕಟ್ಟಿಕೊಂಡು ಅದರಿಂದ ಬಂದಂತ ಒಂದೊಂದು ರೂಪಾಯಿ ಕೂಡಿಟ್ಟು ಮಗಳ ಮದುವೆಗೆ ಅಂತ ಬಂಗಾರದ ಒಡವೆ ಮಾಡಿಸಿಟ್ಟಿದ್ದಳು. ಸದ್ಯ ಮದುವೆ ನಿಶ್ಚಯವಾಗಿದ್ದು, ನರಸಮ್ಮನಿಗೆ ದಿಕ್ಕೆ ತೋಚದಂತಾಗಿದೆ.

ನರಸಮ್ಮ ಮನೆಯಲ್ಲಿ ಇಲ್ಲದಾಗ ನಕಲಿ ಕೀನಿಂದ ಕಳ್ಳರು ಬೀರುವಿನ ಸೀಕ್ರೆಟ್ ಲಾಕರನ್ನ ಒಡೆದು ಹಾಕಿ ಅದರಲ್ಲಿಟ್ಟಿದ್ದ ಬಂಗಾರದ ಒಡವೆಗಳನ್ನು ಕದ್ದಿದ್ದಾರೆ. ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ನೆಕ್ಲೆಸ್, ಎರಡು ಜೊತೆ ಕಿವಿಯ ಓಲೆ, ಎರಡು ಜೊತೆ ಹ್ಯಾಂಗೀಸ್ ಸೇರಿದಂತೆ ಒಂದು ಜೊತೆ ಫ್ಯಾನ್ಸಿ ಕಿವಿ ಓಲೆ ಕಳವಾಗಿದೆ. ಮನೆಯಲ್ಲಿ ಚಿನ್ನ ಕಳ್ಳತನ ಆಗಿದೆ ಅಂತ ಚಿಕ್ಕಬಳ್ಳಾಪುರ ನಗರ ಪೊಲೀಸ್‍ರಿಗೆ ಮಾಹಿತಿ ನೀಡಿದ್ದರು ಪ್ರಕರಣ ದಾಖಲಿಸಿಕೊಂಡಿಲ್ಲವಂತೆ.

ಬೀಗ ಹಾಕಿದ್ದ ಮನೆಯನ್ನು ಬೀಗದ ಕೈಯಿಂದಲೇ ಬಾಗಿಲು ತೆಗೆದು ಒಳ ಹೋಗಿರುವ ಕಳ್ಳರು ಬೀರುವನಲ್ಲಿದ್ದ ಚಿನ್ನಾಭರಣಗಳನ್ನ ಕದ್ದುಕೊಂಡು ಹೋಗಿದ್ದಾರೆ. ಇದರಿಂದ ಯಾರೋ ಪರಿಚಯಸ್ಥರೇ ಕೃತ್ಯ ಎಸಿಗಿರೋದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದರೆ ಪ್ರಕರಣ ದಾಖಲಿಸಿಕೊಂಡು ಕಳ್ಳರನ್ನ ಹಿಡಿಯಬೇಕಾದ ಪೊಲೀಸರು ಮಾತ್ರ ತಮಗೂ ಪ್ರಕರಣಕ್ಕೂ ಸಂಬಂಧವೇ ಇಲ್ಲವಂತೆ ವರ್ತಿಸುತ್ತಿದ್ದು ಬಡ ಮಹಿಳೆ ನೋವಿನಲ್ಲಿ ಕಾಲ ಕಳೆಯುವಂತಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *