ದೇವರಿಗೆ ಧರ್ಮವಿಲ್ಲ, ಪ್ರಾರ್ಥನೆ ಯಾರೊಬ್ಬರ ಸ್ವತ್ತಲ್ಲ – ಡಿಕೆಶಿ

By
3 Min Read

ಬೆಂಗಳೂರು: ನೀರಿಗೆ, ಬೆಳಕಿಗೆ, ಗಾಳಿಗೆ ಹೇಗೆ ಯಾವುದೇ ಜಾತಿ ಧರ್ಮ ಇಲ್ಲವೋ, ಅದೇ ರೀತಿ ದೇವರಿಗೂ ಸಹ ಧರ್ಮವಿಲ್ಲ. ಪ್ರಾರ್ಥನೆಯು ಯಾರೊಬ್ಬರ ಸ್ವತ್ತಲ್ಲ. ನಾನು ನಂಬಿರುವ ಗುರುಗಳು ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಚಾಮುಂಡಿಬೆಟ್ಟ (Chamundi Hill) ಬರೀ ಹಿಂದೂಗಳ ಆಸ್ತಿಯಲ್ಲ ಎನ್ನುವ ಹೇಳಿಕೆಗೆ ಸಂಸದ ಯದುವೀರ್ ಒಡೆಯರ್ ಹಾಗೂ ವಿಪಕ್ಷಗಳ ಟೀಕೆಗೆ ಉತ್ತರಿಸಿ, ಚಾಮುಂಡೇಶ್ವರಿ ಎಲ್ಲಾ ಧರ್ಮದವರಿಗೂ ಆಶೀರ್ವಾದ ಮಾಡುವಂತಹ ದೇವರು. ರಾಜವಂಶಸ್ಥರು ಹಾಗೂ ನಂತರ ಬಂದ ಸರ್ಕಾರಗಳು ಚಾಮುಂಡಿ ತಾಯಿಯನ್ನು ನಾಡದೇವಿ ಎಂದು ಕರೆದಿವೆ. ಈ ದೇಗುಲ ಸಾರ್ವಜನಿಕರ ಆಸ್ತಿ, ನಾಡಧ್ವಜ, ನಾಡದೇವಿ ಹಾಗೂ ದೇವರಿಗೆ ಜಾತಿ, ಧರ್ಮ, ಬಣ್ಣ, ರಾಜಕೀಯ ಲೇಪನ ಮಾಡುವ ಅಗತ್ಯವಿಲ್ಲ ಎಂದರು.ಇದನ್ನೂ ಓದಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ – ಆ.30ರವರೆಗೆ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ

ಹಿಂದೂಗಳು ಮಾತ್ರ ಬರಬೇಕು ಎನ್ನುವ ನಿಯಮವಿದೆಯೇ?:
ನಾಡದೇವಿಯ ದೇವಸ್ಥಾನಕ್ಕೆ ಕೇವಲ ಹಿಂದೂಗಳು ಮಾತ್ರ ಬರಬೇಕು ಎನ್ನುವ ನಿಯಮವಿದೆಯೇ? ಒಂದಷ್ಟು ಸಮುದಾಯದವರು ಬೌದ್ಧ, ಕ್ರಿಶ್ಚಿಯನ್, ಇಸ್ಲಾಂ ಧರ್ಮಕ್ಕೆ ಸೇರಿಕೊಂಡಿದ್ದಾರೆ. ಇವರನ್ನು ದೇವಾಲಯಕ್ಕೆ ಬರಬೇಡಿ ಎಂದು ಹೇಳಲು ಆಗುತ್ತದೆಯೇ? ತಂದೆ-ತಾಯಿ ಬೇರೆ, ಬೇರೆ ಧರ್ಮಕ್ಕೆ ಸೇರಿರುತ್ತಾರೆ. ಇಂತಹ ಮಕ್ಕಳ ಆಚರಣೆ ಬೇರೆ, ಬೇರೆ ಇರುತ್ತದೆ. ಬ್ಯಾರಿಗಳು ನಮಗಿಂತ ಅದ್ಭುತವಾಗಿ ಕನ್ನಡ ಮಾತನಾಡುತ್ತಾರೆ. ಅವರನ್ನು ಮುಸ್ಲಿಮರು ಎಂದು ತಳ್ಳಿಬಿಡಲು ಆಗುತ್ತದೆಯೇ? ಮುಸ್ಲಿಮರು ಶ್ಲೋಕವೊಂದನ್ನು ಪಠಣ ಮಾಡುವ ವಿಡಿಯೋ ನೋಡಿದೆ. ಅವರು ಸಹ ನಮ್ಮ ಧರ್ಮದ ಬಗ್ಗೆ ತಿಳಿದುಕೊಂಡಿದ್ದಾರೆ ಎಂದರು.

ಮಹಾರಾಜರ ಆಳ್ವಿಕೆ ಕಾಲದಲ್ಲಿಯೂ ವಿದೇಶಗಳಿಂದ ಅತಿಥಿಗಳನ್ನು ದಸರಾಕ್ಕೆ ಆಹ್ವಾನ ಮಾಡುತ್ತಿದ್ದರು. ವಿದೇಶಿ ಧರ್ಮಿಯರೂ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಚರ್ಚ್, ಮಸೀದಿ, ಜೈನ ಬಸದಿ, ಗುರುದ್ವಾರ ಹೀಗೆ ಎಲ್ಲಾ ಕಡೆ ನಮ್ಮನ್ನು ಒಳಗೆ ಬಿಡುವುದಿಲ್ಲವೇ. ಈ ಹಿಂದೆ ಕವಿ ನಿಸಾರ್ ಅಹಮದ್ ಅವರು ದಸರಾ ಉದ್ಘಾಟನೆ ಮಾಡಿದರು. ಆದರೆ ಈಗ ಬಾನು ಮುಷ್ತಾಕ್ ಅವರು ಬೆಟ್ಟ ಹತ್ತಬಾರದು, ಉದ್ಘಾಟನೆ ಮಾಡಬಾರದು ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸಂಸದ ಯದುವೀರ್ (MP Yaduveer) ಅವರು ಈಗ ಬಿಜೆಪಿ ಜೊತೆ ಸೇರಿಕೊಂಡು ಬಿಟ್ಟಿದ್ದಾರಲ್ಲ, ಆದ ಕಾರಣಕ್ಕೆ ಇತಿಹಾಸ ಮರೆತು ಬಿಟ್ಟಿದ್ದಾರೆ. ನಾನೊಬ್ಬ ಹಿಂದೂ. ಆ ಚಾಮುಂಡಿ ತಾಯಿಗೆ ಎರಡು ಸಾವಿರ ಕಾಣಿಕೆ ನೀಡಿ ನಾನು ಹಾಗೂ ಸಿದ್ದರಾಮಯ್ಯ ಅವರು ಈ ಎರಡು ಸಾವಿರವನ್ನು ಎಲ್ಲಾ ತಾಯಂದಿರಿಗೂ ಕೊಡುವ ಶಕ್ತಿ ನೀಡುವಂತೆ ಪ್ರಾರ್ಥನೆ ಸಲ್ಲಿಸಿದೆವು. ಆ ತಾಯಿ ನಮಗೆ ಆಶೀರ್ವಾದ ಮಾಡಿದ್ದಾಳೆ. ಈಗ ಕೇವಲ ಹಿಂದೂಗಳಿಗೆ ಮಾತ್ರ ಹಣ ನೀಡುತ್ತಾ ಇದ್ದೇವಾ? ಪಾರ್ಸಿ, ಸಿಖ್, ಮುಸ್ಲಿಂ, ಜೈನ, ಬೌದ್ಧರಿಗೆ ಹಣ ನೀಡುತ್ತಿಲ್ಲವೇ? ಎಂದರು.

ಹಿಂದುತ್ವದ ಮೇಲಿನ ದಾಳಿ ಹಾಗೂ ಬಾನು ಮುಷ್ತಾಕ್ (Banu Mushtaq) ಆಯ್ಕೆಯ ಬಗ್ಗೆ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, ನಾವು ಆಚರಣೆ ಮಾಡುವಷ್ಟು ಹಿಂದೂ ಪದ್ಧತಿಯನ್ನು ಅವರೆಲ್ಲಿ (ಬಿಜೆಪಿ) ಆಚರಣೆ ಮಾಡುತ್ತಾರೆ. ನಾನು ಯಾರ ವಿರುದ್ಧವೂ ಇಲ್ಲ, ಯಾರನ್ನೂ ಓಲೈಕೆ ಮಾಡುತ್ತಿಲ್ಲ. ಎಲ್ಲರಿಗೂ ಅವಕಾಶ ಸಿಗಬೇಕು. ಯಾವ ಹಿಂದೂ ದೇವಸ್ಥಾನದಲ್ಲಿ ಬೇರೆ ಧರ್ಮದವರು ಬರಬಾರದು ಎಂದು ಹೇಳಿರುವ ಉದಾಹರಣೆ ಇದ್ದರೆ ತೋರಿಸಿ ಆಗ್ರಹಿಸಿದರು.

ಇದು ಬಿಜೆಪಿ ರಾಜಕೀಯ ಅಜೆಂಡಾ:
ಇದು ಬಿಜೆಪಿಯ (BJP) ರಾಜಕೀಯ ಅಜೆಂಡಾ. ಇಂತಹ ಬಿಜೆಪಿ ಅಲ್ಪಸಂಖ್ಯಾತ ಇಲಾಖೆಯನ್ನು ಮುಚ್ಚಿಬಿಡಲಿ. ನಮ್ಮ ದೇಶದ ನಿವಾಸಿಗಳೆಲ್ಲರನ್ನು ನಾವು ಒಪ್ಪಿಕೊಳ್ಳಲೇ ಬೇಕು. ಅವರನ್ನು ದೇಶದಿಂದ ಓಡಿಸಿ ಬಿಡಲು ಆಗುತ್ತದೆಯೇ? ಕಿಡಿಕಾರಿದರು.

ಜೆಡಿಎಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ನಕಲಿ ಪತ್ರ ಹರಿಬಿಟ್ಟಿರುವ ಬಗ್ಗೆ ಕೇಳಿದಾಗ, ಅವರು ಯಾವತ್ತಿದ್ದರೂ ಫೇಕ್. ಜೆಡಿಎಸ್ ಎಂದಿಗೂ ಫೇಕ್ ಕೆಲಸಗಳನ್ನೇ ಮಾಡುವುದು. ನಾನು ಹೆದರಿಕೊಂಡು ಬಿಟ್ಟೆ, ರಣಹೇಡಿ ಅಂತಲಾದರೂ ಟೀಕೆ ಮಾಡಿಕೊಳ್ಳಲಿ, ಪರವಾಗಿಲ್ಲ, ಅವರ ದೊಡ್ಡ, ದೊಡ್ಡ ನಾಯಕರುಗಳಿಗೆ ಹೆದರಿಕೊಳ್ಳದವನು ನಾನು. ಈಗ ಈ ಟ್ವೀಟ್‌ಗಳಿಗೆ ಹೆದರಿಕೊಳ್ಳುತ್ತೇನೆಯೇ? ವಿಜಯೇಂದ್ರ ಹಾಗೂ ಅಶೋಕ್ ಅವರು ತಮ್ಮ, ತಮ್ಮ ಸಮಾಧಾನಕ್ಕೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಧರ್ಮಸ್ಥಳ ಚಲೋ ಬಗ್ಗೆ ಕೇಳಿದಾಗ, ಅದು ರಾಜಕೀಯದ ಚಲೋ. ಧರ್ಮದ ಚಲೋ ಅಲ್ಲ ಎಂದು ಹೇಳಿದರು.ಇದನ್ನೂ ಓದಿ: ಪಬ್ಲಿಕ್ ಟಿವಿಯಲ್ಲಿ 13ನೇ ವರ್ಷದ ಗಣೇಶೋತ್ಸವ ಸಂಭ್ರಮ

Share This Article