ಗೋವಾದಲ್ಲಿ ಅತಂತ್ರ ಫಲಿತಾಂಶ – ಕುದುರೆ ವ್ಯಾಪಾರಕ್ಕೆ ವೇದಿಕೆ ಸಜ್ಜು

Public TV
2 Min Read

ಪಣಜಿ: ಚುನವಾಣೋತ್ತರ ಸಮೀಕ್ಷೆಗಳು ಪ್ರಕಟಿಸಿದಂತೆಯೇ ಗೋವಾದಲ್ಲಿ ಅತಂತ್ರ ವಿಧಾನಸಭೆ ಬಂದಿದ್ದು, ಕುದುರೆ ವ್ಯಾಪಾರಕ್ಕೆ ವೇದಿಕೆ ನಿರ್ಮಾಣವಾಗಿದೆ.

ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸರಳ ಬಹುಮತದಿಂದ ಕೇವಲ ಒಂದು ಸ್ಥಾನದಿಂದ ಹಿಂದಿದೆ. ಒಟ್ಟು ಸ್ಥಾನಗಳು 40, ಬಹುಮತಕ್ಕೆ 21 ಸ್ಥಾನ ಬೇಕಾಗಿದೆ. ಬಿಜೆಪಿ ಮೂವರು ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚನೆಗೆ ರಾಜ್ಯಪಾಲರ ಭೇಟಿಗೆ ಅವಕಾಶ ಕೋರಿದೆ. ಈ ಮೂಲಕ ಸತತ ಮೂರನೇ ಬಾರಿ ಅಧಿಕಾರಕ್ಕೆ ಏರುವುದು ಬಹುತೇಕ ನಿಶ್ಚಿತವಾಗಿದೆ. ಇದನ್ನೂ ಓದಿ: ಮಣಿಪುರದಲ್ಲಿ ಅತಂತ್ರವಿದ್ದರೂ ಬಿಜೆಪಿ ಸರ್ಕಾರ

ಸರ್ಕಾರ ರಚಿಸುವ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಕಾಂಗ್ರೆಸ್‍ಗೆ ಗೋವಾದಲ್ಲಿ ಭಾರೀ ಆಘಾತವಾಗಿದೆ. ಮತಎಣಿಕೆಗೆ ಮುನ್ನವೇ ರಾಜ್ಯಪಾಲರ ಭೇಟಿಗೆ ಸಮಯ ಕೋರಿ ಇದೀಗ ವ್ಯಾಪಕ ಮುಜುಗರಕ್ಕೆ ಈಡಾಗಿದೆ. ಕೌಂಟಿಂಗ್‍ಗೆ ಮೊದಲೇ ಡಿ.ಕೆ ಶಿವಕುಮಾರ್ ರೆಸಾರ್ಟ್ ಪಾಲಿಟಿಕ್ಸ್ ನಡೆಸಿದ್ದು ಪ್ರಯೋಜನಕ್ಕೆ ಬಂದಿಲ್ಲ. ಭೌಗೋಳಿಕ, ಸಮುದಾಯಿಕ ಮಿತಿಗಳನ್ನು ಮೀರಿ, ಆಡಳಿತ ವಿರೊಧಿ ಅಲೆಯನ್ನು ಹಿಮ್ಮೆಟ್ಟಿಸಿರುವ ಬಿಜೆಪಿ, ಮತ್ತೆ ಗೆಲುವಿನ ನಗೆ ಬೀರಿದೆ. ಮೊದಲ ಬಾರಿಗೆ ಸ್ಪರ್ಧಿಸಿ ನಿರೀಕ್ಷೆ ಮೂಡಿಸಿದ್ದ ಟಿಎಂಸಿ, ಎಎಪಿ ನಿರೀಕ್ಷಿತ ಪರಿಣಾಮ ಬೀರಿಲ್ಲ. ಬಿಜೆಪಿ ಟಿಕೆಟ್ ಸಿಗದೇ ಬಂಡೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಪರಿಕ್ಕರ್ ಪುತ್ರ ಸೋಲು ಅನುಭವಿಸಿದ್ದಾರೆ.

ಗೋವಾ ಮತ್ತೆ ಅತಂತ್ರ (40/21)
ಕಾಂಗ್ರೆಸ್ – 11, ಬಿಜೆಪಿ – 20, ಎಎಪಿ – 02, ಎಂಜಿಪಿ – 02, ಟಿಎಂಸಿ – 00, ಜಿಎಫ್‍ಪಿ – 01, ಎನ್‍ಸಿಪಿ – 00, ಆರ್‍ಜಿಪಿ – 01, ಇತರರು – 03 ಸ್ಥಾನ ಗೆದ್ದುಕೊಂಡಿದೆ. ಇದನ್ನೂ ಓದಿ: 22 ವರ್ಷಗಳ ಇತಿಹಾಸದಲ್ಲಿ ಫಸ್ಟ್‌ ಟೈಂ – ಉತ್ತರಾಖಂಡದಲ್ಲಿ ಸತತ ಎರಡನೇ ಬಾರಿ ಬಿಜೆಪಿ ಅಧಿಕಾರಕ್ಕೆ

ಗೋವಾ ಫಲಿತಾಂಶ ವಿಶ್ಲೇಷಣೆ
ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಎಂಜಿಪಿ ಬೆಂಬಲ ಇದೆ. ಕಳೆದ ಬಾರಿ ಬಿಜೆಪಿ ಅಭಿವೃದ್ಧಿ ಕೆಲಸ ಕೈ ಹಿಡಿದಿದೆ. ಸಮರ್ಥ ಅಭ್ಯರ್ಥಿಗಳ ಆಯ್ಕೆ ಈ ಬಾರಿ ಮಾಡಲಾಗಿದೆ. ಕ್ಯಾಥೋಲಿಕ್ ಪ್ರಾಬಲ್ಯದ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್‍ಗೆ ಸಮರ್ಥ ನಾಯಕತ್ವ, ಅಭ್ಯರ್ಥಿಗಳ ಕೊರತೆ ಕಾಡಿದೆ. ಕಾಂಗ್ರೆಸ್ ಮತ ಬ್ಯಾಂಕ್‍ಗೆ ಟಿಎಂಸಿ, ಎಎಪಿ ಕನ್ನ ಹಾಕಿದೆ.

ಒಟ್ಟು ಸ್ಥಾನಗಳು 40, ಬಹುಮತಕ್ಕೆ 21. 2017ರ ಫಲಿತಾಂಶವನ್ನು ಗಮನಿಸಿದಾಗ ಕಾಂಗ್ರೆಸ್ 17, ಬಿಜೆಪಿ 13, ಆಪ್ 0, ಇತರರು 10 ಸ್ಥಾನ ಪಡೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *