ಗೋವಾ ಸಿಎಂ ಕೆಲಸ ನೋಡಿ ‘ಕೈ’ ಬಿಟ್ಟು ಬಿಜೆಪಿಗೆ ಸೇರ್ಪಡೆ: ಕಾಂಗ್ರೆಸ್ ನಾಯಕ

Public TV
1 Min Read

ಪಣಜಿ: ಕಳೆದ ಮೂರ್ನಾಲ್ಕು ದಿನಗಳಿಂದ ಕರ್ನಾಟಕದಲ್ಲಿ ರಾಜಕೀಯ ಹೈಡ್ರಾಮಾ ನಡೆಯುತ್ತಿದೆ. ಇದೇ ಬೆನ್ನಲ್ಲೇ ನೆರೆಯ ಗೋವಾದಲ್ಲೂ ರಾಜಕೀಯದಲ್ಲಿ ಏರುಪೇರಾಗಿದ್ದು, ಕಾಂಗ್ರೆಸ್ ಶಾಸಕರು ಕಮಲದ ಕೈ ಹಿಡಿದಿದ್ದಾರೆ.

ಒಂದೆಡೆ ರಾಜ್ಯದ ಅತೃಪ್ತ ಕಾಂಗ್ರೆಸ್, ಜೆಡಿಎಸ್ ಶಾಸಕರು ಮುಂಬೈ ಖಾಸಗಿ ಹೋಟೆಲ್ ಸೇರಿದ್ದಾರೆ. ಇನ್ನೊಂದೆಡೆ ಒಬ್ಬರ ಮೇಲೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೈತ್ರಿಯಿಂದ ದೂರ ಸರಿಯುತ್ತಿದ್ದಾರೆ. ಅವರನ್ನು ಮನವೊಲಿಸಿ ತರಲು ಕಾಂಗ್ರೆಸ್ ಹಿರಿಯ ನಾಯಕರು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಪಕ್ಕದ ರಾಜ್ಯ ಗೋವಾದ 10 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಗೋವಾದಲ್ಲಿ ಬಿಜೆಪಿ ಆಡಳಿತವಿದ್ದು, ಸಿಎಂ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಾವು ಬಿಜೆಪಿಯತ್ತ ಒಲವು ತೋರುತ್ತಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿದ್ದಾರೆ.

ಗೋವಾದ 15 ಕಾಂಗ್ರೆಸ್ ಶಾಸಕರ ಪೈಕಿ 10 ಮಂದಿ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 40 ಸದಸ್ಯಬಲದ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ 15 ಶಾಸಕರನ್ನು ಹೊಂದಿತ್ತು. ಆದರೆ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಗೋವಾ ವಿಧಾನಸಭೆ ಪ್ರತಿಪಕ್ಷದ ನಾಯಕ ಚಂದ್ರಕಾಂತ್ ಬಾಬು ಕವಳೇಕರ್ ನೇತೃತ್ವದಲ್ಲಿ 10 ಬಂಡಾಯ `ಕೈ’ ಶಾಸಕರು ಪಕ್ಷದಿಂದ ಹೊರಬಂದು ತಮ್ಮ ಬಣವನ್ನು ಬಿಜೆಪಿ ಜೊತೆ ವಿಲೀನಗೊಳಿಸುವ ಮನವಿ ಪತ್ರವನ್ನು ಸ್ಪೀಕರ್ ರಾಜೇಶ್ ಪಟ್ನೇಕರ್ ಅವರಿಗೆ ಸಲ್ಲಿಸಿದ್ದರು.

ಸ್ಪೀಕರ್ ಮನವಿ ಪತ್ರ ಅಂಗೀಕರಿಸಿದ್ದು, ವಿಲೀನ ಪ್ರಕ್ರಿಯೆ ಪೂರ್ಣಗೊಂಡಂತಾಗಿದೆ. ಬಿಜೆಪಿಗೆ ಸೇರ್ಪಡೆಯನ್ನು ಸಮರ್ಥಿಸಿಕೊಂಡಿರುವ ಚಂದ್ರಕಾಂತ್ ಕವ್ಲೇಕರ್, ಸಿಎಂ ಒಳ್ಳೆಯ ಕೆಲಸ ಮಾಡುತ್ತಿರುವುದರಿಂದ ನಾವು ಬಿಜೆಪಿ ಸೇರ್ಪಡೆಯಾಗುತ್ತಿದ್ದೇವೆ. ನಾನು ವಿಪಕ್ಷ ನಾಯಕನಾಗಿದ್ದರೂ ಸಹ ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ ಎಂದಿದ್ದಾರೆ.

ಇಂದು ಗೋವಾ ಶಾಸಕರೆಲ್ಲಾ ದೆಹಲಿಗೆ ತೆರಳಲಿದ್ದು ಅಮಿತ್ ಶಾ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *