ಮಾನಸಿಕ ಆರೋಗ್ಯ ಸಮಸ್ಯೆ – ಕ್ರಿಕೆಟ್‍ನಿಂದ ವಿರಾಮ ಪಡೆದ ಮ್ಯಾಕ್ಸ್‌ವೆಲ್

Public TV
2 Min Read

ಸಿಡ್ನಿ: ಆಸ್ಟ್ರೇಲಿಯಾದ ಸ್ಫೋಟಕ ಆಲ್‍ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮಾನಸಿಕ ಆರೋಗ್ಯದ ತೊಂದರೆಯಿಂದ ಬಳಲುತ್ತಿದ್ದು, ಸ್ವಲ್ಪ ಕಾಲ ಕ್ರಿಕೆಟ್‍ನಿಂದ ದೂರ ಸರಿಯಲಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತಿಳಿಸಿದೆ.

ಭಾನುವಾರ ಶ್ರೀಲಂಕಾ ವಿರುದ್ಧ ಅಡಿಲೇಡ್ ಮೈದಾನದಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದ ಮ್ಯಾಕ್ಸ್‌ವೆಲ್ ಸ್ಫೋಟಕ ಅರ್ಧ ಶತಕ ಸಿಡಿಸಿ ಆಸ್ಟ್ರೇಲಿಯಾ 134 ರನ್‍ಗಳ ಅಂತರದಲ್ಲಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಮಾನಸಿಕ ಆರೋಗ್ಯ ತೊಂದರೆಯಿಂದ ಬಳಲುತ್ತಿರುವ ಮ್ಯಾಕ್ಸ್ ವೆಲ್ ಸ್ವಲ್ಪ ಸಮಯದ ಕಾಲ ಕ್ರಿಕೆಟ್‍ಗೆ ಅಲ್ಪವಿರಾಮ ಹಾಕಲಿದ್ದಾರೆ ಎಂದು ಆಸಿಸ್ ಮಂಡಳಿ ತಿಳಿಸಿದೆ.

ಈಗ ಸದ್ಯ ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ-20 ಸರಣಿ ಆಡುತ್ತಿದ್ದು, ಎರಡರಲ್ಲಿ ಭರ್ಜರಿ ಜಯ ಸಾಧಿಸಿದೆ. ಈಗ ಉಳಿದ ಒಂದು ಪಂದ್ಯಕ್ಕೆ ಮ್ಯಾಕ್ಸ್‌ವೆಲ್ ಅವರು ಅಲಭ್ಯರಾಗಲಿದ್ದು, ಅವರ ಜಾಗಕ್ಕೆ ಮೊತ್ತೊಬ್ಬ ಆಲ್‍ರೌಂಡರ್ ಡಿಆರ್ಸಿ ಶಾರ್ಟ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹೇಳಿದೆ.

ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಆಸ್ಟ್ರೇಲಿಯಾ ತಂಡದ ಮನಶಾಸ್ತ್ರಜ್ಞ ಡಾ. ಮೈಕೆಲ್ ಲಾಯ್ಡ್, ಗ್ಲೆನ್ ಮ್ಯಾಕ್ಸ್ ವೆಲ್ ಅವರ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಅವರು ಸ್ವಲ್ಪ ಸಮಯ ಆಟದಿಂದ ದೂರು ಉಳಿಯಲಿದ್ದು, ಚಿಕಿತ್ಸೆ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕ್ರಿಕೆಟ್ ಮಂಡಳಿಯಿಂದ ಮ್ಯಾಕ್ಸ್‌ವೆಲ್ ಗೆ ಸಂಪೂರ್ಣ ಬೆಂಬಲ ಸಿಗಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಕಾರ್ಯನಿರ್ವಾಹಕ ಜನರಲ್ ಮ್ಯಾನೇಜರ್ ಬೆನ್ ಆಲಿವರ್ ಹೇಳಿದ್ದಾರೆ. ನಮಗೆ ನಮ್ಮ ತಂಡದ ಆಟಗಾರರ ಮತ್ತು ಸಿಬ್ಬಂದಿ ಯೋಗಕ್ಷೇಮ ಮುಖ್ಯ. ಆದ್ದರಿಂದ ಸದ್ಯ ಮಾನಸಿಕ ಆರೋಗ್ಯದ ಸಮಸ್ಯೆ ಎದುರಿಸುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಆಲಿವರ್ ತಿಳಿಸಿದ್ದಾರೆ.

ನಮ್ಮ ಆಸ್ಟ್ರೇಲಿಯಾ ತಂಡದಲ್ಲಿ ಮ್ಯಾಕ್ಸ್‌ವೆಲ್ ತುಂಬ ವಿಶೇಷ ಆಟಗಾರ ಮತ್ತು ನಮ್ಮ ತಂಡದ ಪ್ರಮುಖ ಭಾಗವಾಗಿದ್ದಾರೆ. ಮುಂದಿನ ಬೇಸಿಗೆ ಸಮಯದಲ್ಲಿ ಅವರನ್ನು ನಾವು ಮತ್ತೆ ತಂಡದಲ್ಲಿ ನೋಡಲು ಬಯಸುತ್ತೇವೆ. ಅವರು ಮತ್ತೆ ಕ್ರಿಕೆಟ್‍ಗೆ ಮರಳಲು ನಿರ್ಧಾರ ಮಾಡಿದಾಗ ಅದಕ್ಕೆ ಸಂಪೂರ್ಣ ಬೆಂಬಲ ನೀಡುವಂತೆ ಮ್ಯಾಕ್ಸ್‌ವೆಲ್ ಅವರ ರಾಜ್ಯ ತಂಡ ವಿಕ್ಟೋರಿಯಾ ಕ್ರಿಕೆಟ್ ಮಂಡಳಿಯೊಂದಿಗೆ ಮಾತನಾಡಿದ್ದೇವೆ ಎಂದು ಆಲಿವರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *