ಧೋನಿ ವಿಡಿಯೋ ಟ್ವೀಟ್ ಮಾಡಿ ಸೆಲ್ಯೂಟ್ ಹೊಡೆದ ಕಾಟ್ರೆಲ್

Public TV
3 Min Read

ನವದೆಹಲಿ: 2019 ವಿಶ್ವಕಪ್ ಟೂರ್ನಿಯಿಂದ ಟೀಂ ಇಂಡಿಯಾ ಹೊರ ಬೀಳುತ್ತಿದ್ದಂತೆ ಧೋನಿ ನಿವೃತ್ತಿ ಕೈಗೊಳ್ಳುತ್ತಾರೆ ಎಂಬ ಸುದ್ದಿಯಿಂದ ಸಾಕಷ್ಟು ಸದ್ದು ಮಾಡಿದ್ದರು. ಆದರೆ ಧೋನಿ ಈ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಇದೇ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ಟೂರ್ನಿಯ ತಂಡ ಘೋಷಣೆ ಸಂದರ್ಭದಲ್ಲಿ ಈ ಕುತೂಹಲಕ್ಕೆ ತೆರೆ ಬೀಳಲಿದೆ ಎನ್ನಲಾಗಿತ್ತು. ಆದರೆ ಧೋನಿ ಟೂರ್ನಿಗೆ ಅಲಭ್ಯರಾಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.

ಧೋನಿ ವೆಸ್ಟ್ ಇಂಡೀಸ್ ಟೂರ್ನಿಗೆ ಅಲಭ್ಯರಾದರೂ ಕೂಡ ಅಭಿಮಾನಿಗಳು ಬೇಸರಗೊಳ್ಳದಂತಹ ತೀರ್ಮಾನವನ್ನು ಧೋನಿ ಮಾಡಿದ್ದರು. ಸೇನೆಯ ಕರ್ತವ್ಯಕ್ಕೆ ಹಾಜರಾಗುವ ತೀರ್ಮಾನ ಮಾಡುವ ಮೂಲಕ ಮೆಚ್ಚುಗೆಗೆ ಕಾರಣರಾಗಿದ್ದರು. ಇದೇ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ತಂಡದ ಬೌಲರ್ ಶೆಲ್ಡನ್ ಕಾಟ್ರೆಲ್ ಧೋನಿಗೆ ವಿಡಿಯೋವೊಂದನ್ನು ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಧೋನಿ ಪದ್ಮ ಪ್ರಶಸ್ತಿ ಪಡೆದ ರೋಚಕ ಕ್ಷಣಗಳನ್ನು ವಿಡಿಯೋ ಟ್ವೀಟ್ ಮಾಡಿರುವ ಕಾಟ್ರೆಲ್, ಈ ವಿಡಿಯೋದಲ್ಲಿ ಪತ್ನಿಗೆ ತನ್ನ ಪತಿ ಮತ್ತು ದೇಶದ ಬಗ್ಗೆ ಗೌರವ ಮೂಡುವಂತಹ ಕ್ಷಣ ಸೆರೆಯಾಗಿದೆ. ಆದ್ದರಿಂದ ನಾನು ಈ ವಿಡಿಯೋವನ್ನು ನನ್ನ ಸ್ನೇಹಿತರಿಗೆ ಮತ್ತು ಕುಟುಂಬದಲ್ಲಿ ಶೇರ್ ಮಾಡುತ್ತಿದ್ದೇನೆ ಎಂದಿದ್ದಾರೆ.

ಈ ಕುರಿತು ಮತ್ತೊಂದು ಟ್ವೀಟ್ ಮಾಡಿರುವ ಕಾಟ್ರೆಲ್, ಈ ವ್ಯಕ್ತಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಹಲವರಿಗೆ ಸ್ಫೂರ್ತಿಯಾಗಿದ್ದಾರೆ. ಅಲ್ಲದೇ ಕ್ರಿಕೆಟ್ ಹೊರತಾಗಿಯೂ ತನ್ನ ದೇಶಕ್ಕಾಗಿ ಕೊಡುಗೆ ನೀಡುತ್ತಿರುವ ಇವರು ನಿಜಕ್ಕೂ ದೇಶ ಪ್ರೇಮಿ. ನಾನು ಜಮೈಕಾದ ನಿವಾಸದಲ್ಲಿ ಆಟಗಾರರೊಂದಿಗೆ ಇರುವ ಕಾರಣ ದೇಶ ಪ್ರೇಮವನ್ನು ಸಾರಲು ಸಮಯ ಸಿಕ್ಕಿತ್ತು ಎಂದು ಬರೆದುಕೊಂಡಿದ್ದಾರೆ.

ಅಂದಹಾಗೇ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಪರ ಗಮನ ಸೆಳೆದಿದ್ದ ಕಾಟ್ರೆಲ್ ಎದುರಾಳಿ ವಿಕೆಟ್ ಪಡೆಯುತ್ತಿದಂತೆ ಸೆಲ್ಯೂಟ್ ಮಾಡುತ್ತಿದ್ದ ರೀತಿ ಕ್ರಿಕೆಟ್ ಅಭಿಮಾನಿಗಳನ್ನು ಆಕರ್ಷಿಸಿತ್ತು. ಧೋನಿ ವೆಸ್ಟ್ ಇಂಡೀಸ್ ಟೂರ್ನಿಗೆ ಅಲಭ್ಯವಾಗಿರುವುದು ಈಗಾಗಲೇ ತಿಳಿದ ಸಂಗತಿಯಾಗಿದ್ದು, ಇದರ ಬದಲಾಗಿ ಧೋನಿ ಸೇನೆಯ ಸೇವೆಯಲ್ಲಿ ತೊಡಗಲಿದ್ದಾರೆ. ಧೋನಿ ಅವರ ಈ ಮನವಿಗೆ ಈಗಾಗಲೇ ಭಾರತೀಯ ಸೇನೆಯಿಂದ ಅನುಮತಿ ಕೂಡ ಲಭಿಸಿದ್ದು, ಜುಲೈ 31 ರಿಂದ ಆಗಸ್ಟ್ 15ರ ವರೆಗೂ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಭಾರತೀಯ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್‍ನ ಟೆರಿಟೊರಿಯಲ್ ಅರ್ಮಿ ಯೂನಿಟ್‍ನಲ್ಲಿ 38 ವರ್ಷದ ಧೋನಿ ಅವರಿಗೆ 2011 ರಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿತ್ತು. ವಿಶೇಷ ಎಂದರೆ 2015 ರಲ್ಲಿ ಆಗ್ರಾದಲ್ಲಿ ಪ್ಯಾರಾಚೂಟ್ ರೆಜಿಮೆಂಟ್ ಸೇನಾ ತಂಡದೊಂದಿಗೆ ಧೋನಿ ತರಬೇತಿ ಪಡೆದಿದ್ದರು.

ಕಾಟ್ರೆಲ್ ಸೆಲ್ಯೂಟ್ ಹಿಂದಿನ ಸಿಕ್ರೇಟ್: ಶೆಲ್ಟನ್ ಕಾಟ್ರೆಲ್ ಪ್ರತಿಬಾರಿ ವಿಕೆಟ್ ಪಡೆದಾಗಲು ಸೆಲ್ಯೂಟ್ ಮಾಡಿ ಸಂಭ್ರಮಿಸುತ್ತಾರೆ. ಈ ಸಂಭ್ರಮಾಚರಣೆಯ ಹಿಂದಿನ ಸಿಕ್ರೇಟ್ ರಿವೀಲ್ ಮಾಡಿದ್ದ 29 ವರ್ಷದ ಕಾಟ್ರೆಲ್, ವೃತ್ತಿಪರವಾಗಿ ನಾನು ಯೋಧನಾಗಿದ್ದು, ಜಮೈಕಾ ರಕ್ಷಣಾ ಪಡೆಗೆ ಸೂಚಕವಾಗಿ ನಾನು ಪ್ರತಿ ಬಾರಿ ವಿಕೆಟ್ ಪಡೆದ ಸಂದರ್ಭದಲ್ಲಿ ಸೆಲ್ಯೂಟ್ ಮಾಡುತ್ತೇನೆ. ಸೇನೆಯ ತರಬೇತಿಯ ವೇಳೆ ನಾನು ಇದನ್ನು ಕರಗತ ಮಾಡಿಕೊಂಡಿದ್ದೆ ಎಂದು ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *