ಮಾಧ್ಯಮಗಳ ಮೂಲಕ ಬೆಳಗಾವಿ ಕಿತ್ತಾಟಕ್ಕೆ ಹೇಳಿಕೆ ನೀಡುವುದು ಸರಿಯಲ್ಲ: ದಿನೇಶ್ ಗುಂಡೂರಾವ್

Public TV
2 Min Read

ನವದೆಹಲಿ: ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಕಿತ್ತಾಟವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಮಾಧ್ಯಮಗಳ ಮೂಲಕ ಹೇಳಿಕೆ ನೀಡುತ್ತಿರುವುದು ಸರಿಯಲ್ಲವೆಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಳಗಾವಿ ಕೈ ನಾಯಕರ ಕಿತ್ತಾಟದ ವಿಚಾರ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಖುದ್ದು ರಾಜ್ಯ ಉಸ್ತುವಾರಿ ವೇಣುಗೋಪಾಲ್ ರವರ ಬಳಿಯು ಚರ್ಚೆ ನಡೆಸಿದ್ದೇನೆ. ಬೆಂಗಳೂರಿಗೆ ತೆರಳಿದ ಬಳಿಕ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶಾಸಕರೇ ಆಗಲಿ, ಸಚಿವರೇ ಆಗಲಿ ಯಾರೂ ಸಹ ಪಕ್ಷದ ಶಿಸ್ತನ್ನು ಮೀರಬಾರದು, ಹಾಗೆಯೇ ಪಕ್ಷದ ನಾಯಕರ ವಿರುದ್ಧ ಯಾವ ಹೇಳಿಕೆಗಳನ್ನು ನೀಡಬಾರದು. ಪಕ್ಷದ ಚೌಕಟ್ಟನ್ನು ಮೀರಿ ವರ್ತಿಸುವುದು ಸರಿಯಲ್ಲ. ಮಾಧ್ಯಮಗಳ ಮೂಲಕ ಹೇಳಿಕೆ ನೀಡುತ್ತಿರುವುದು ಸರಿಯಲ್ಲವೆಂದು ಪರೋಕ್ಷವಾಗಿ ಜಾರಕಿಹೊಳಿ ಬ್ರದರ್ಸ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಗೆ  ಎಚ್ಚರಿಕೆ ರವಾನಿಸಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಕ್ಷಮಿಸಲ್ಲ-ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ಕೆಂಡಾಮಂಡಲ!

ಶೀಘ್ರವೇ ಬೆಳಗಾವಿ ಕೈ ನಾಯಕರ ಗೊಂದಲವನ್ನು ಇತ್ಯರ್ಥ ಮಾಡುತ್ತೇವೆ. ಇದರಿಂದಾಗಿ ಪಿಎಲ್‍ಡಿ ಬ್ಯಾಂಕ್ ಚುನಾವಣಾ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಚುನಾವಣೆ ನಡೆಯುತ್ತಿದೆ. ಪಿಎಲ್‍ಡಿ ಬ್ಯಾಂಕ್ ಚುನಾವಣೆ ಹಾಗೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಅದು ಕೇವಲ ಬೆಳಗಾವಿಗೆ ಮಾತ್ರ ಸೀಮಿತ. ಆದರೂ ನಾಯಕರುಗಳು ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದು ಸರಿಯಲ್ಲ. ಎಲ್ಲರ ಜೊತೆ ಮಾತನಾಡಿ ಗೊಂದಲ ಬಗೆಹರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ ನ ಹದ್ದು ಬಸ್ತುನಲ್ಲಿ ಇಡದಿದ್ದರೇ, ಉಗ್ರ ಕ್ರಮ ಕೈಗೊಳ್ತೀವಿ: ರಮೇಶ್ ಜಾರಕಿಹೊಳಿ

ಕಾಂಗ್ರೆಸ್ಸಿನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರನ್ನು ದೆಹಲಿ ನಿವಾಸದಲ್ಲಿ ದಿನೇಶ್ ಗುಂಡೂರಾವ್ ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಜಾರಕಿಹೊಳಿ ಬ್ರದರ್ಸ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಜಟಾಪಟಿ ವಿಚಾರದ ಬಗ್ಗೆ ಸುದೀರ್ಘವಾಗಿ ಮಾತುಕತೆ ನಡೆಸಿದ್ದಾರೆ. ಖರ್ಗೆಯವರು ಶೀಘ್ರವೇ ಸಮಸ್ಯೆಯನ್ನು ಬಗೆಹರಿಸಿ ಹಾಗೂ ಅವರ ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕಿ ಎಂದು ಗುಂಡೂರಾವ್ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *