ದತ್ತಪೀಠದ ತಪ್ಪಲಿನಲ್ಲಿ ಬಾಲಕಿ ನಾಪತ್ತೆ ಪ್ರಕರಣ – 24 ಗಂಟೆ ಕಳೆದ್ರೂ ಸಿಗದ ಸುಳಿವು

2 Min Read

ಚಿಕ್ಕಮಗಳೂರು: ದತ್ತಪೀಠದ (Datta Peetha) ತಪ್ಪಲಿನ ಮಾಣಿಕ್ಯಾಧಾರಕ್ಕೆ ಕುಟುಂಬದ ಜೊತೆ ಬಂದಿದ್ದ 15 ವರ್ಷದ ಬಾಲಕಿ (Student) ಇದ್ದಕ್ಕಿದ್ದಂತೆ ಆ ದಟ್ಟ ಕಾನನದಲ್ಲಿ ಕಾಣೆಯಾಗಿದ್ದು, ಒಂದು ದಿನ ಕಳೆದ್ರೂ ಸುಳಿವು ಸಿಕ್ಕಿಲ್ಲ.

ಕೇರಳದ (Kerala) ಪಾಲಕ್ಕಾಡ್ ಜಿಲ್ಲೆಯ ಶ್ರೀನಂದ (15) ನಾಪತ್ತೆಯಾದ ಬಾಲಕಿ. ಶಾಲೆಗೆ ರಜೆ ಸಲುವಾಗಿ ಕುಟುಂಬಸ್ಥರ ಸಮೇತ ಕರ್ನಾಟಕದ ಪ್ರವಾಸಕ್ಕೆ ಬಂದಿದ್ದಳು. ಉತ್ತರ ಕರ್ನಾಟಕ ಸುತ್ತಿ ದಕ್ಷಿಣ ಕಾರ್ನಾಟಕದ ಕಾಫಿನಾಡಿಗೆ ಬಂದಿದ್ದವಳು ದತ್ತಪೀಠದ ಮಾಣಿಕ್ಯಾಧಾರ ಬಳಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ. ಕುಟುಂಬದ ಜೊತೆಗಿದ್ದ ಆಕೆ ಮಾಣಿಕ್ಯಾಧಾರದ ಜಲಪಾತದ ಬಳಿ ಹೋಗುವಾಗ ಕುಟುಂಬಸ್ಥರು ಮುಂದೆ ಹೋಗುತ್ತಿದ್ದರು. ಈ ವೇಳೆ ಹಿಂದಿದ್ದವಳು ಕ್ಷಣಾರ್ಧದಲ್ಲಿ ನಾಪತ್ತೆಯಾಗಿದ್ದಾಳೆ. ಇದನ್ನೂ ಓದಿ: ಕೇರಳದಿಂದ ಪ್ರವಾಸ ಬಂದಿದ್ದ 10ನೇ ತರಗತಿ ವಿದ್ಯಾರ್ಥಿನಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ನಾಪತ್ತೆ

ಕುಟುಂಬಸ್ಥರು ತಕ್ಷಣ ಸುತ್ತಮುತ್ತ ಹುಡುಕಾಟ ಆರಂಭಿಸಿದರೂ ಕೂಡ ಆಕೆ ಸುಳಿವು ಸಿಕ್ಕಿಲ್ಲ. ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಹಾಗೂ ಅಗ್ನಿಶಾಮಕ ದಳದ 30ಕ್ಕೂ ಹೆಚ್ಚು ಸಿಬ್ಬಂದಿ ಏ.7ರ ಮಧ್ಯರಾತ್ರಿ 1 ಗಂಟೆವರೆಗೆ ಹುಡುಕಾಡಿದ್ದಾರೆ. ಆದರೆ, ಆಕೆಯ ಸುಳಿವು ಸಿಕ್ಕಿಲ್ಲ. ಕಗ್ಗತ್ತಲು, ದಟ್ಟ ಕಾನನ, ಬೆಟ್ಟ-ಗುಡ್ಡಗಳ ಇಳಿಜಾರು ಪ್ರದೇಶ ಆಗಿದ್ದರಿಂದ ಕಾರ್ಯಾಚರಣೆ ಕೈಬಿಟ್ಟ ಅಧಿಕಾರಿಗಳು ಏ.8ರ ಬೆಳಿಗ್ಗೆ ಮತ್ತೆ ಶೋಧ ಕಾರ್ಯ ಮುಂದುವರೆಸಿದ್ದರು. ಇದೀಗ, ಶೋಧ ಕಾರ್ಯಕ್ಕೆ ಎಸ್.ಡಿ.ಆರ್.ಎಫ್ ತಂಡ ಕೂಡ ಜೊತೆಗೂಡಿದೆ.

ಬೆಳಗಿನ ಜಾವ 5 ಗಂಟೆಯಿಂದಲೇ ಶೋಧ ಕಾರ್ಯ ಆರಂಭಿಸಿದ ಸಿಬ್ಬಂದಿ ಥರ್ಮಲ್ ಡ್ರೋನ್ ಮೂಲಕ ಬಾಲಕಿ ಪತ್ತೆಗೆ ಮುಂದಾಗಿದ್ದಾರೆ. ಮೂರು ಇಲಾಖೆಯ ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿ 5 ತಂಡಗಳನ್ನಾಗಿ ಮಾಡಿಕೊಂಡು ಶೋಧಕಾರ್ಯಕ್ಕೆ ಇಳಿದಿದ್ದಾರೆ. ಬಾಲಕಿ ಮಿಸ್ ಆದ ಜಾಗ ತೀವ್ರ ಕಡಿದಾದ ಪ್ರದೇಶವಾಗಿದ್ದು ಅಲ್ಲಿಂದ ಯಾವ-ಯಾವ ಮಾರ್ಗದಲ್ಲಿ ಹೋಗಲು ಸಾಧ್ಯವಿರುತ್ತೋ ಆ ಮಾರ್ಗದಲ್ಲೆಲ್ಲಾ ತಂಡ ಹುಡುಕಾಡುತ್ತಿದೆ. ಆದರೆ, ಜಾರಿದ್ದಾಳೆ ಅನ್ನೋದಕ್ಕೆ ಮಳೆ ಇಲ್ಲ. ಕಾಡು ಬೇಸಿಗೆಗೆ ಒಣಗಿ ಬಿಡಿಬಿಡಿಯಾಗಿದೆ. ನಾಪತ್ತೆಯಾದ ಒಂದು ಗಂಟೆಯಿಂದಲೇ ಹತ್ತಾರು ಜನ ಹುಡುಕಾಡಿದರೂ ಸಿಗದಿರೋದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಮಳೆಗಾಲವಾಗಿದ್ದರೆ ಮಳೆ, ಜಾರಿಕೆ, ಮಂಜು, ಹಚ್ಚಹಸಿರಿನ ದಟ್ಟ ಕಾನನ ನಾಪತ್ತೆ ಅಂದ್ರೆ ನಂಬಬಹುದು. ಆದರೆ, ಕುಟುಂಬದ ಜೊತೆ ಮೆಟ್ಟಿಲು ಇಳಿಯುತ್ತಿದ್ದ 15 ವರ್ಷದ ಬಾಲಕಿ ನಾಪತ್ತೆ ಅಂದ್ರೆ ನಿಜಕ್ಕೂ ನಿಗೂಢದ ಜೊತೆ ಆಶ್ಚರ್ಯಕ್ಕೆ ಕಾರಣವಾಗಿದೆ. ದಾರಿ ತಪ್ಪಿದ್ದರೂ ಮಧ್ಯರಾತ್ರಿವರೆಗೂ ಹುಡುಕಿದರೂ ಸಿಗದಿರೋದು ಮತ್ತಷ್ಟು ಅನುಮಾನ ಮೂಡಿಸಿದೆ. ಆದರೆ, ಬಿಸಿಲ ಧಗೆ, ಕತ್ತಲೆ ಏನ್ನದೇ 3 ಇಲಾಖೆಯ 60ಕ್ಕೂ ಹೆಚ್ಚು ಜನ ಬಾಲಕಿ ಪತ್ತೆಗೆ ಶ್ರಮಿಸುತ್ತಿದ್ದಾರೆ. ಇದನ್ನೂ ಓದಿ: ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್ – ಆರೋಪಿ ಮಹೇಂದ್ರ ಕಳಿಸಿದ್ದ ಮೆಸೇಜ್ ರಿಟ್ರೀವ್, 10.3 ಲಕ್ಷ ಡಿಜಿಟಲ್‌ ಫೈಲ್ ಪತ್ತೆ

Share This Article