ಮಗನ ರೋಗ ವಾಸಿಯಾಗಲು 12 ವರ್ಷದ ಮಗಳನ್ನೇ ಬಲಿಕೊಟ್ಟ ತಾಯಿ – ಬಳಿಕ ರೇಪ್ ಅಂತ ದೂರು

2 Min Read

ರಾಂಚಿ: ಮಗನ ರೋಗ ವಾಸಿಯಾಗಲೆಂದು 12 ವರ್ಷದ ಮಗಳನ್ನು ಬಲಿಕೊಟ್ಟು ಬಳಿಕ ತಾಯಿಯೇ ಪೊಲೀಸರಿಗೆ ರೇಪ್ ಎಂದು ದೂರು ದಾಖಲಿಸಿರುವ ಘಟನೆ ಜಾರ್ಖಂಡ್‌ನ (Jharkhand) ಹಜಾರಿಬಾಗ್‌ನಲ್ಲಿ (Hazaribagh) ನಡೆದಿದೆ.

ಪ್ರಕರಣ ಸಂಬಂಧ ಪೊಲೀಸರು ಮೃತಳ ತಾಯಿ ರೇಶ್ಮಿ ದೇವಿ (25), ಆಕೆಯ ಪ್ರಿಯಕರ ಭೀಮ್ ರಾಮ್ (40) ಹಾಗೂ ಮಾಟಗಾತಿ ಶಾಂತಿ ದೇವಿಯನ್ನು (55) ಬಂಧಿಸಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ 5.5 ಟನ್ ಧಾರ್ಮಿಕ ತ್ಯಾಜ್ಯ ಸಂಗ್ರಹ

ಮಾ.24ರಂದು ಈ ಘಟನೆ ನಡೆದಿದೆ. ಆರೋಪಿ ಮಹಿಳೆಯ ಏಕೈಕ ಪುತ್ರ ಮಾನಸಿಕ ಹಾಗೂ ದೈಹಿಕ ಕಾಯಿಲೆಯಿಂದ ಬಳಲುತ್ತಿದ್ದ. ಹೀಗಾಗಿ ಮಹಿಳೆ ಪರಿಹಾರಕ್ಕಾಗಿ ಮಾಟಗಾತಿಯೋರ್ವಳ ಬಳಿ ಹೋಗಿ, ಕೌಟುಂಬಿಕ ಸಮಸ್ಯೆಯಿದೆ, ನನ್ನ ಮಗ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ತೊಂದರೆ ಹೇಳಿಕೊಂಡಿದ್ದಳು. ಅದಕ್ಕೆ ಮಾಟಗಾತಿ ನಿನ್ನ ಮಗ ಗುಣಮುಖನಾಗಬೇಕೆಂದರೆ ನಿನ್ನ ಮಗಳನ್ನು ಬಲಿಕೊಡು ಅದೇ ಅತ್ಯಂತ ಮಂಗಳಕರ ಮಾರ್ಗ ಎಂದು ತಿಳಿಸಿದ್ದಾಳೆ. ಯಾಕೆಂದರೆ ಮಗನನ್ನು ಗುಣಪಡಿಸಲು ಕನ್ಯೆಯಾದವಳನ್ನು ಬಲಿಕೊಡಬೇಕೆಂದಿದ್ದಾಳೆ.

ಮಾಟಗಾತಿಯ ಪರಿಹಾರ ಒಪ್ಪಿಕೊಂಡ ತಾಯಿ, ಹಿಂದೂಗಳ ಹಬ್ಬ ನವರಾತ್ರಿಯ ಎಂಟನೇ ದಿನವಾದ ಅಷ್ಟಮಿಯ ರಾತ್ರಿಯಂದು ಬಲಿಕೊಡಲು ನಿರ್ಧರಿಸಿದರು. ಅದರಂತೆ ತಾಯಿ ಮಗಳ ಕಾಲುಗಳನ್ನು ಹಿಡಿದುಕೊಂಡಳು. ಆಕೆಯ ಪ್ರಿಯಕರ ಕತ್ತು ಹಿಸುಕಿದ. ಮಾಟಗಾತಿ ಬಾಲಕಿಯ ಖಾಸಗಿ ಅಂಗದೊಳಗೆ ಒಂದು ಕೋಲನ್ನು ಹಾಕಿದಳು. ಬಳಿಕ ಆಕೆಯ ರಕ್ತಕ್ಕಾಗಿ ತಲೆಗೆ ಹೊಡೆದಿದ್ದಾರೆ. ಕೊಂದ ಬಳಿಕ ಆಕೆಯ ಶವವನ್ನು ತೋಟದಲ್ಲಿ ಹೂತು ಹಾಕಿದ್ದಾರೆ.

ಮಾರನೇ ದಿನ ಬೆಳಿಗ್ಗೆ ಬಾಲಕಿಯ ಶವ ಪತ್ತೆಯಾದ ನಂತರ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿ, ನನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ. ದೂರಿನನ್ವಯ ತನಿಖೆ ಆರಂಭಿಸಿದ ಪೊಲೀಸರು ಮರಣೋತ್ತರ ಹಾಗೂ ಫೋರೆನ್ಸಿಕ್ ಪರೀಕ್ಷೆ ನಡೆಸಿದ್ದಾರೆ. ವರದಿಯಲ್ಲಿ ಅತ್ಯಾಚಾರ ಆಗಿರುವುದು ಸಾಬೀತಾಗಿಲ್ಲ. ತಾಯಿಯನ್ನು ಕರೆಸಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಸದ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಇನ್ನೂ ರೇಶ್ಮಿ ದೇವಿ ಹಾಗೂ ಭೀಮ್ ರಾಮ್ ಸುಮಾರು 10 ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿರುವುದಾಗಿ ತಿಳಿದುಬಂದಿದೆ. ರೇಶ್ಮಿಯ ಪತಿ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದು, ಹೆಚ್ಚಾಗಿ ಮನೆಗೆ ಬರುತ್ತಿರಲಿಲ್ಲ ಎನ್ನಲಾಗಿದೆ. ಭೀಮ್ ರಾವ್ ಮೇಲೆ ಕೊಲೆ ಆರೋಪವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ನೇಣು ಬಿಗಿದುಕೊಂಡು ಆದಿವಾಸಿ ಸಮುದಾಯದ ಪ್ರೇಮಿಗಳು ಆತ್ಮಹತ್ಯೆ

Share This Article