15ರ ಬಾಲಕಿ ಮೇಲೆ ರೇಪ್ – ಮಗುವನ್ನೇ ಮಾರಿ ಸಂತ್ರಸ್ತೆಗೆ ಪರಿಹಾರ ನೀಡಲು ಆದೇಶ

Public TV
3 Min Read

ಪಾಟ್ನಾ: 15 ವರ್ಷದ ಬಾಲಕಿ ಮೇಲೆ ಇಬ್ಬರು ಅತ್ಯಾಚಾರ ಎಸಗಿದ್ದು, ಬಾಲಕಿ ಗರ್ಭಿಣಿಯಾಗಿದ್ದಾಳೆ. ಇದಕ್ಕೆ ಪರಿಹಾರ ಕೇಳಿದರೆ ಮಗುವನ್ನು ಮಾರಿ ಸಂತ್ರಸ್ತೆಗೆ ಪರಿಹಾರ ನೀಡಿ ಎಂದು ಅಲ್ಲಿನ ಸ್ಥಳೀಯ ಪಂಚಾಯಿತಿ ಆರೋಪಿಗಳಿಗೆ ಆದೇಶಿಸಿರುವ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ.

ಬಿಹಾರದ ಮುಜಫರ್ಪುರದ ಕತ್ರಾದಲ್ಲಿ ಘಟನೆ ನಡೆದಿದ್ದು, 15 ವರ್ಷದ ಬಾಲಕಿ ಮೇಲೆ ಮೌಲಾನಾ ಮಕ್ಬೂಲ್ ಹಾಗೂ ಮಹಮ್ಮದ್ ಶೋಯೆಬ್ ಅತ್ಯಾಚಾರ ಎಸಗಿದ್ದಾರೆ. ಬಾಲಕಿ ಗರ್ಭಿಣಿಯಾಗಿದ್ದಾಳೆ. ಇದಕ್ಕೆ ಪರಿಹಾರ ಕೇಳಲು ಅಲ್ಲಿನ ಸಮುದಾಯ ಪಂಚಾಯಿತಿ ಮೊರೆ ಹೋದರೆ, ಅದೇ ಮಗುವನ್ನು ಮಾರಾಟ ಮಾಡಿ ಬಂದ ಹಣವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದೆ.

ಸಮುದಾಯ ಪಂಚಾಯಿತಿಯಲ್ಲಿ ನ್ಯಾಯ ಸಿಗದ ಕಾರಣ ಬಾಲಕಿ ಮುಜಾಫರ್ಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದ್ದು, ಆರೋಪಿಗಳಾದ ಮೌಲಾನಾ ಮಕ್ಬೂಲ್ ಹಾಗೂ ಮಹಮ್ಮದ್ ಶೋಯೆಬ್ ಬಂಧಿಸಲು ಪೊಲೀಸರು ದಾಳಿ ನಡೆಸುತ್ತಿದ್ದಾರೆ.

ಕತ್ರ ಮಸೀದಿ ಸಮಿತಿಯ ಸದಸ್ಯ ಮುಹಮ್ಮದ್ ಸದ್ರೆ ಈ ಕುರಿತು ಮಾಹಿತಿ ನೀಡಿ, ಈ ವರ್ಷದ ಆರಂಭದಿಂದಲೂ ಸಮುದಾಯ ಪಂಚಾಯಿತಿಯಲ್ಲಿ ಈ ಪ್ರಕರಣ ವಿಚಾರಣೆ ನಡೆಯುತ್ತಿದ್ದು, ಅತ್ಯಾಚಾರ ನಡೆದಿರುವ ಕುರಿತು ಅಪ್ರಾಪ್ತ ಬಾಲಕಿ ನ್ಯಾಯ ಕೇಳುತ್ತಿದ್ದಾಳೆ. ಕಳೆದ ತಿಂಗಳು ಅವಳು ಮಗುವಿಗೆ ಜನ್ಮ ನೀಡಿದ್ದಾಳೆ. ಈ ದುಃಸ್ಥಿತಿಗೆ ನಮ್ಮ ಸಮುದಾಯ ಪಂಚಾಯಿತಿಯೇ ಕಾರಣ. ಮಗುವನ್ನು ಮಾರಿ ಬಂದ ಹಣವನ್ನು ಅವಳಿಗೆ ನೀಡುವಂತೆ ಆದೇಶಿಸಿದೆ ಎಂದರು.

ಸಮಸ್ತಿಪುರ ಜಿಲ್ಲೆಯ ತಾಜ್‍ಪುರದಲ್ಲಿ ಈ ಕುರಿತು ಕುಟುಂಬದವರೊಂದಿಗೆ ಮಾತುಕತೆ ನಡೆಸಲಾಯಿತು. ಮಗುವನ್ನು ಒಂದು ಲಕ್ಷಕ್ಕೆ ಅವರಿಗೆ ಮಾರಾಟ ಮಾಡಬೇಕಾಗಿತ್ತು. ಆದರೆ ನಾನು ಅದರಲ್ಲಿ ಮಧ್ಯ ಪ್ರವೇಶಿಸಲಿಲ್ಲ. ಮಗುವನ್ನು ಮಾರಾಟ ಮಾಡಿರುವ ಕುರಿತು ನನಗೆ ತಿಳಿದಿಲ್ಲ ಎಂದು ಮಾಹಿತಿ ನೀಡಿದರು.

ಕತ್ರಾ ಪಂಚಾಯತ್‍ನ ಚುನಾಯಿತ ಸದಸ್ಯ ಅರುಣ್ ಕುಮಾರ್ ಈ ಕುರಿತು ಮಾಹಿತಿ ನೀಡಿ, ನಾನು ಈ ಕುರಿತು ಮಧ್ಯ ಪ್ರವೇಶಿಸಿ ನ್ಯಾಯ ಕೊಡಿಸಬೇಕೆಂದು ಬಾಲಕಿ ನನ್ನನ್ನು ಸಂಪರ್ಕಿಸಿದಳು. ಇಂತಹ ಅಪರಾಧಗಳು ಪಂಚಾಯಿತಿಗಳಿಂದ ಇತ್ಯರ್ಥವಾಗುವುದಿಲ್ಲ. ಪೊಲೀಸರಿಗೆ ಈ ಕುರಿತು ದೂರು ನೀಡುಂತೆ ಸಲಹೆ ನೀಡಿದೆ. ಅಲ್ಲದೆ ಪೊಲೀಸರಿಗೆ ಬರೆಯುವ ಅರ್ಜಿ ಎಲ್ಲಿ ಸಿಗುತ್ತದೆ ಎಂಬುದನ್ನು ಸಹ ಅವಳಿಗೆ ಹೇಳಿದ್ದೆ ಎಂದು ತಿಳಿಸಿದರು. ಆದರೂ ಅವರು ಮಸೀದಿಯ ಸಮಿತಿಯನ್ನು ಸಂಪರ್ಕಿಸಲು ನಿರ್ಧರಿಸಿದರು. ಸಮಸ್ಯೆ ಬಗೆಹರಿಸಲು ಸಮಿತಿ ಒಂದೆರಡು ಬಾರಿ ಪಂಚಾಯಿತಿ ನಡೆಸಿತು. ಆದರೆ ಪ್ರಯೋಜನವಾಗಲಿಲ್ಲ ಎಂದು ತಿಳಿಸಿದರು.

ಮಗುವನ್ನು ಮಾರಾಟ ಮಾಡಲು ಪಂಚಾಯಿತಿ ಆದೇಶ ನೀಡಿದ ನಂತರ ಬಾಲಕಿ ಜಿಲ್ಲಾ ಮಹಿಳಾ ಪೊಲೀಸರಿಗೆ ದೂರು ನೀಡಿದ್ದಾಳೆ. ಮೌಲಾನಾ ಮಕ್ಬೂಲ್‍ಗೆ ಅಲ್ಲಿನ ಕುಟುಂಬದ ಸದಸ್ಯರು ಆಹಾರವನ್ನು ಕಳುಹಿಸುತ್ತಿದ್ದರು. ಕೆಲವೊಮ್ಮೆ ಕುಟುಂಬಗಳು ಹುಡುಗಿಯರ ಬಳಿ ಅವನಿಗೆ ಆಹಾರ ಕಳುಹಿಸುತ್ತಿದ್ದರು. ಅದೆ ರೀತಿ ಬಾಲಕಿ ಆಹಾರ ನೀಡಲು ತೆರಳಿದಾಗ ಆರೋಪಿ ಮಾದಕ ವಸ್ತುಗಳನ್ನು ಲೇಪಿಸಿದ ಸಿಹಿ ತಿಂಡಿಯನ್ನು ನೀಡಿದ್ದ. ಆಹಾರ ನೀಡಿ ಹೊರ ಬರುತ್ತಿದ್ದಂತೆಯೇ ಅವಳ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂಬುದಾಗಿ ದೂರು ದಾಖಲಾಗಿದೆ ಎಂಧು ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರ ಎಸಗಿದ ನಂತರ ಎರಡು ತಿಂಗಳುಗಳ ಕಾಲ ಬಾಲಕಿಗೆ ಆರೋಪಿ ಬೆದರಿಕೆ ಒಡ್ಡಿದ್ದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ನಂತರ ಸ್ಥಳೀಯ ಯುವಕ ಶೋಯೆಬ್ ಪರಿಸ್ಥಿತಿಯ ಬಗ್ಗೆ ತಿಳಿದಿದ್ದು, ಅವನೂ ಸಹ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸವಿತಾ ದೇವಿ ತಿಳಿಸಿದ್ದಾರೆ.

ಪರಿಹಾರದ ಎಲ್ಲ ಬಾಗಿಲುಗಳು ಮುಚ್ಚಿದ ನಂತರ ಬಾಲಕಿ ನಮ್ಮ ಬಳಿ ಬಂದಿದ್ದಾಳೆ. ಈ ಕುರಿತು ಐಪಿಸಿ ಮತ್ತು ಪೋಕ್ಸೋ ಕೇಸ್ ಅಡಿ ಪ್ರಕರಣ ದಾಖಲಿಸಿದ್ದೇವೆ. ಹಳ್ಳಿಯಲ್ಲಿ ಮೂರು ಬಾರಿ ದಾಳಿ ನಡೆಸಲಾಗಿದ್ದು, ಆರೋಪಿಗಳು ಪತ್ತೆಯಾಗಿಲ್ಲ. ಆರೋಪಿಗಳ ಮಾಹಿತಿ ನೀಡುವಂತೆ ಪೋಸ್ಟರ್ ಅಂಟಿಸುತ್ತೇವೆ ಎಂದು ತಿಳಿಸಿದ್ದಾರೆ.

ಮಗುವಿನ ಹುಟ್ಟಿಗೆ ಇಬ್ಬರಲ್ಲಿ ಕಾರಣ ಯಾರು ಎಂಬುದನ್ನು ತಿಳಿಯಲು ಡಿಎನ್‍ಎ ಪರೀಕ್ಷೆ ಮಾಡಿಸುತ್ತಿದ್ದೇವೆ ಎಂದು ಹಿರಿಯ ಅಧೀಕಾರಿಗಳು ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *