ಕಲ್ಯಾಣ ಮಂಟಪದಲ್ಲೇ ಬೆಂಗ್ಳೂರು ವರನಿಗೆ ಗೆಟ್ ಔಟ್ ಎಂದ ವಧು!

Public TV
2 Min Read

ಛತ್ತೀಸ್‍ಗಢ: ಮದುವೆ ಮುನ್ನ ಕಲ್ಯಾಣ ಮಂಟಪದಲ್ಲಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದ ವರನ ಜೊತೆ ವಧು ಮದುವೆ ನಿರಾಕರಿಸಿರುವ ಘಟನೆ ಛತ್ತೀಸ್‍ಗಢದ ಮುರಾದಾಬಾದ್ ಜಿಲ್ಲೆಯ ಪಾರ್ಕ್ ಸ್ಕ್ವೈರ್ ಹೋಟೆಲ್ ನಲ್ಲಿ ನಡೆದಿದೆ.

ಜ್ಯೋತಿ ಎಂಬವರೇ ಕಲ್ಯಾಣ ಮಂಟಪದಿಂದ ವರನ ಕುಟುಂಬ ಹೊರ ನಡೆಯಲು ಸೂಚಿಸಿದ ವಧುವಾಗಿದ್ದಾರೆ. ಜ್ಯೋತಿಯವರ ಪೋಷಕರು ತಮ್ಮ ಮಗಳ ಮದುವೆ ಮಾಡಲು ವೆಬ್ ಸೈಟ್‍ಯೊಂದರಲ್ಲಿ ವಿವರಗಳನ್ನು ದಾಖಲಿಸಿದ್ದರು. ಇದರಂತೆ ಬೆಂಗಳೂರು ಮೂಲದ ಇಂಟೀರಿಯರ್ ಡಿಸೈನರ್ ಅಶೀಶ್ ಎಂಬವರ ಜೊತೆ ಡಿಸೆಂಬರ್ 14 ರಂದು ಮದುವೆ ನಿರ್ಣಯಿಸಲಾಗಿತ್ತು.

ಆದರೆ ಮದುವೆ ಮುನ್ನ ದಿನ ಆರತಕ್ಷತೆ ಸಮಾರಂಭದ ವೇಳೆ ಅಶೀಶ್ ತಂದೆ, ಜ್ಯೋತಿ ತಂದೆಯವರ ಜೊತೆ ವರದಕ್ಷಿಣೆಯಾಗಿ ಸೆಡನ್ ಕಾರು ಹಾಗೂ 15 ಲಕ್ಷ ರೂ. ಹಣ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಜ್ಯೋತಿ ಆಶೀಶ್ ನೊಂದಿಗೆ ಮಾತನಾಡಿ ಇಬ್ಬರು ವಿದ್ಯಾವಂತರಾಗಿದ್ದು, ಉತ್ತಮ ಕೆಲಸದಲ್ಲಿ ಇದ್ದೇವೆ, ಮದುವೆ ನಂತರ ಹಣ ಸಂಪಾದನೆ ಮಾಡಲು ಸಾಧ್ಯವಿಲ್ಲವೇ ಎಂದು ತಿಳಿಹೇಳಲು ಪ್ರಯತ್ನಿಸಿದ್ದಾರೆ. ಆದರೆ ಇವರು ಮಾತನ್ನು ಕೇಳದ ಆಶೀಶ್ ಕುಟುಂಬದವರು ವರದಕ್ಷಿಣೆ ನೀಡಿದರೆ ಮಾತ್ರ ಮದುವೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.

ಈ ವೇಳೆ ಇತರರ ಮುಂದೆ ತನ್ನ ತಂದೆ ಅವಮಾನಪಡುವುದನ್ನು ಸಹಿಸಲಾರದೇ ವಧು ಜ್ಯೋತಿ ಮದುವೆ ನಿರಾಕರಿಸಿ ಆಶೀಶ್ ಹಾಗೂ ಅವರ ಕುಟುಂಬವನ್ನು ಕಲ್ಯಾಣ ಮಂಟಪದಿಂದ ಹೊರ ನಡೆಯುವಂತೆ ಸೂಚಿಸಿದ್ದಾರೆ.

ಈ ಕುರಿತು ಮಾತನಾಡಿರುವ ಜ್ಯೋತಿ, ಅಶೀಶ್ ಹಾಗೂ ಆತನ ತಂದೆ ನರೇಶ್ ಸೇರಿದಂತೆ ಮೂವರ ವಿರುದ್ಧ ಮಝೋಲಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

ವರನ ತಂದೆ ಮದುವೆ ಸಂದರ್ಭದಲ್ಲಿ ನನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ವರದಕ್ಷಿಣೆಗಾಗಿ ಬೇಡಿಕೆ ಇಟ್ಟರು, ನಾನು ಅವರಿಗೆ ತಿಳಿಹೇಳಲು ಪ್ರಯತ್ನಿಸಿದೆ, ಆದರೆ ನನ್ನ ಮಗಳೇ ಮದುವೆಯನ್ನು ನಿರಾಕರಿಸಿದಳು. ನನ್ನ ಮಗಳ ನಿರ್ಣಯಕ್ಕೆ ನಾನು ಹಾಗೂ ನನ್ನ ಕುಟುಂಬ ಬೆಂಬಲ ಸೂಚಿಸಿದ್ದೇವೆ ಎಂದು ಜ್ಯೋತಿ ಅವರ ತಂದೆ ಕಮಲ್ ಸಿಂಗ್ ಹೇಳಿದ್ದಾರೆ.

ಜ್ಯೋತಿ ಅವರ ಹೇಳಿಕೆ ಪಡೆದಿರುವ ಪೊಲೀಸರು ವರನ ಕುಟುಂಬದ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ. ಅಂದಹಾಗೇ ಜ್ಯೋತಿ ಅವರು ಛತ್ತೀಸ್‍ಗಢ ಸರ್ಕಾರಿ ಕಾಲೇಜಿನಲ್ಲಿ ಬಂಗಾರ ಪದಕದೊಂದಿಗೆ ಎಂ. ಟೆಕ್ ಪದವಿಯನ್ನು ಪಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *